ಸ್ವಿಸ್ ಬ್ಯಾಂಕ್ ಹಣವನ್ನು ಮರಳಿ ತನ್ನಿ: ಪ್ರಧಾನಿಗೆ ಅಡ್ವಾಣಿ
ಮುಂಬೈ, ಸೋಮವಾರ, 17 ಜನವರಿ 2011( 11:52 IST )
ಭಾರೀ ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿರುವ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ಅಮೆರಿಕಾ ಮತ್ತು ಜರ್ಮನಿಗಳು ನಡೆದುಕೊಂಡಿರುವಂತೆ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಮರಳಿ ದೇಶಕ್ಕೆ ತನ್ನಿ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ವಿಶ್ವಸಂಸ್ಥೆ ಅಂಗೀಕರಿಸಿದ್ದ ಗೊತ್ತುವಳಿಯ ಅನ್ವಯ ಅಮೆರಿಕಾ ಮತ್ತು ಜರ್ಮನಿಗಳು ತಮ್ಮ ದೇಶದ ಪ್ರಜೆಗಳು ಇಟ್ಟಿದ್ದ ಕಪ್ಪುಹಣವನ್ನು ಮರಳಿ ಪಡೆದಿವೆ. ಆದರೆ ಭಾರತವು ಈ ನಡೆಗೆ ಮುಂದಾಗುತ್ತಿಲ್ಲ. ಇದಕ್ಕಿರುವ ಕಾರಣ ಈಗಾಗಲೇ ಕಾಮನ್‌ವೆಲ್ತ್ ಗೇಮ್ಸ್, 2ಜಿ ಮತ್ತು ಆದರ್ಶ ಸೇರಿದಂತೆ ಸಾಕಷ್ಟು ಹಗರಣಗಳಲ್ಲಿ ತೊಳಲಾಡುತ್ತಿರುವ ಕಾಂಗ್ರೆಸ್‌ಗೆ ಮತ್ತಷ್ಟು ಮುಜುಗರವಾಗಬಹುದು ಎನ್ನುವುದು ಎಂದು ಆರೋಪಿಸಿದರು.
ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸಿನಲ್ಲಿ ಆಯೋಜಿಸಲಾಗಿದ್ದ ಯುಪಿಎ ಭ್ರಷ್ಟಾಚಾರ ಪೂರಿತ ಆಡಳಿತದ ವಿರುದ್ಧ ಎನ್‌ಡಿಎ ಹೋರಾಟದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅಡ್ವಾಣಿ ಮಾತನಾಡುತ್ತಿದ್ದರು.
ಸ್ವಿಸ್ ಬ್ಯಾಂಕ್ ಹಣವನ್ನು ವಾಪಸ್ ತರುವ ಬಗ್ಗೆ ಎನ್‌ಡಿಎ ಇತ್ತೀಚೆಗಷ್ಟೇ ಪ್ರಧಾನಿಯವರಿಗೆ ಪತ್ರ ಬರೆದಿದೆ. ಸ್ವಿಸ್ ಹಣವನ್ನು ಮರಳಿ ತರುವುದಾಗಿ ಈ ಹಿಂದೆ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಆದರೆ ಈಗ ಮಾತೆತ್ತುತ್ತಿಲ್ಲ. ನಮ್ಮ ಪತ್ರಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎಂದರು.
ಕೆಲವು ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಹಣ ಮತ್ತು ಅವರ ಹೆಸರುಗಳು ಸರಕಾರಕ್ಕೆ ಸಿಕ್ಕಿವೆ. ಆದರೆ ಅದನ್ನು ಬಹಿರಂಗಪಡಿಸಿಲ್ಲ ಎಂದು ಕಳೆದ ವಾರ ಕೇಂದ್ರ ಸರಕಾರವು ಸುಪ್ರೀಂ ಕೋರ್ಟಿಗೆ ಹೇಳಿತ್ತು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಸುಪ್ರೀಂ, ಕಪ್ಪುಹಣ ಇಟ್ಟವರ ಹೆಸರನ್ನು ಬಹಿರಂಗಪಡಿಸಲು ನಿಮಗೇನು ಅಡ್ಡಿ ಎಂದಿತ್ತು.
ಇದನ್ನು ಉಲ್ಲೇಖಿಸಿ ಮಾತನಾಡಿದ ಅಡ್ವಾಣಿ, ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣವನ್ನು ಸರಕಾರ ತರಲು ಇಚ್ಛಿಸದೇ ಇದ್ದರೂ, ಸುಪ್ರೀಂ ಕೋರ್ಟ್ ಈ ಸಂಬಂಧ ಸೂಕ್ತ ಕ್ರಮಕ್ಕೆ ಮುಂದಾಗಬಹುದು ಎಂದು ಆಶಾವಾದ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಾರ್ಕಿಕ ಅಂತ್ಯ ಕಾಣಿಸಲಿದೆ ಎಂದು ದೇಶ ನಿರೀಕ್ಷಿಸುತ್ತಿದೆ. 462 ಬಿಲಿಯನ್ ಅಮೆರಿಕಾ ಡಾಲರ್ (21,030 ಶತಕೋಟಿ ರೂಪಾಯಿ) ಭಾರೀ ದೊಡ್ಡ ಮೊತ್ತ. ಅದನ್ನು ಭಾರತಕ್ಕೆ ತಂದರೆ ನಮ್ಮ ಸ್ಥಿತಿ ಅದ್ಭುತ ರೀತಿಯಲ್ಲಿ ಬದಲಾಗಬಹುದು ಎಂದರು.