ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಫೆ.7ಕ್ಕೆ ಹೈಕೋರ್ಟ್ ತೀರ್ಪು; ಕಸಬ್‌ಗೆ ಗಲ್ಲು ಖಾಯಂ? (Bombay High Court | Ajmal Kasab | Mumbai attacks | India)
Bookmark and Share Feedback Print
 
ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಸೇರಿದಂತೆ ಇತರರ ವಿರುದ್ಧ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆ ಮುಗಿಸಿರುವ ಬಾಂಬೆ ಹೈಕೋರ್ಟ್, ತನ್ನ ತೀರ್ಪನ್ನು ಫೆಬ್ರವರಿ 7ರವರೆಗೆ ಕಾಯ್ದಿರಿಸಿದೆ.

ವಿಚಾರಣಾ ನ್ಯಾಯಾಲಯವು ಕಸಬ್‌ಗೆ ಮರಣ ದಂಡನೆ ವಿಧಿಸಿತ್ತು. ಇದನ್ನು ಖಚಿತಪಡಿಸಬೇಕು ಎಂದು ಮಹಾರಾಷ್ಟ್ರ ಸರಕಾರ ಮನವಿ ಮಾಡಿದ್ದರೆ, ರದ್ದುಪಡಿಸಬೇಕು ಎಂದು ಕಸಬ್ ತನ್ನ ವಕೀಲರುಗಳ ಮೂಲಕ ಮೇಲ್ಮನವಿ ಸಲ್ಲಿಸಿದ್ದ.

ಲಷ್ಕರ್ ಇ ತೋಯ್ಬಾಕ್ಕೆ ಬೆಂಬಲ ನೀಡಿದ್ದಾರೆ ಎಂದು ಹೇಳಲಾಗಿರುವ ದೇಶೀಯ ಉಗ್ರರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್‌ರನ್ನು ವಿಚಾರಣಾ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಇದರ ವಿರುದ್ಧ ಮಹಾರಾಷ್ಟ್ರ ಸರಕಾರವು ಮೇಲ್ಮನವಿ ಸಲ್ಲಿಸಿತ್ತು.
PTI

ಸೋಮವಾರ ಈ ಎರಡೂ ಪ್ರಕರಣಗಳ ವಿಚಾರಣೆ ಮುಗಿಸಿರುವ ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆಯವರನ್ನೊಳಗೊಂಡ ಪೀಠವು, ಫೆಬ್ರವರಿ 7ರಂದು ತನ್ನ ತೀರ್ಪನ್ನು ಪ್ರಕಟಿಸಲಿದೆ.

ಹೈಕೋರ್ಟಿನ ಎರಡನೇ ಮಹಡಿಯ ಕೋರ್ಟ್ ನಂಬರ್ 49ರಲ್ಲಿ ಅಕ್ಟೋಬರ್ 18ರಿಂದ ನಡೆಯುತ್ತಿದ್ದ ಈ ವಿಚಾರಣೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಪ್ರತಿದಿನ ಪೊಲೀಸ್ ನಾಯಿಗಳು ಬಂದು ಪರಿಶೀಲನೆ ನಡೆಸಿದ ನಂತರವಷ್ಟೇ ವಿಚಾರಣೆ ಆರಂಭವಾಗುತ್ತಿತ್ತು. ಪತ್ರಕರ್ತರು ಮತ್ತು ವಕೀಲರಿಗೆ ಗುರುತಿನ ಚೀಟಿಗಳನ್ನು ನೀಡಿದ್ದಲ್ಲದೆ, ಪ್ರವೇಶವನ್ನು ಕಠಿಣಗೊಳಿಸಲಾಗಿತ್ತು.

ಮೇಲ್ಮನವಿಗಳ ವಿಚಾರಣೆಗೆ ಹೈಕೋರ್ಟ್ ಮೊತ್ತ ಮೊದಲ ಬಾರಿ ವೀಡಿಯೋ ಕಾನ್ಫರೆನ್ಸ್ ಬಳಸಿತು. ದುಬಾರಿ ಕೈದಿ ಎಂದು ಹೆಸರು ಪಡೆದಿರುವ ಕಸಬ್‌ನನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಬಂದರೆ ಅಪಾಯ ಎಂಬ ಹಿನ್ನೆಲೆಯಲ್ಲಿ, ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗಿತ್ತು.

ಆರಂಭದ ಕೆಲ ದಿನಗಳ ಕಾಲ ವಿಚಾರಣೆಯಲ್ಲಿ ಭಾಗವಹಿಸಿದ್ದ ಕಸಬ್, ಈ ನಡುವೆ ಅಸಭ್ಯ ವರ್ತನೆ ತೋರಿಸಲು ಆರಂಭಿಸಿದ್ದ. ಕ್ಯಾಮರಾವನ್ನು ಎಳೆದು ಹಾಕುವುದು, ಉಗುಳುವುದು, ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ಮುಂತಾದ ಆಟೋಪಗಳನ್ನು ಪ್ರದರ್ಶಿಸಿದ್ದ. ನನಗೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ, ಅಮೆರಿಕಾಕ್ಕೆ ಕಳುಹಿಸಿ ಎಂದೂ ಕೇಳಿಕೊಂಡಿದ್ದ.

ವಿಚಾರಣಾ ನ್ಯಾಯಾಲಯದಲ್ಲಿ ಕಸಬ್‌ಗೆ ಮರಣ ದಂಡನೆಯಾಗುವಂತೆ ವಾದಿಸಿದ್ದ ಸರಕಾರಿ ವಕೀಲ ಉಜ್ವಲ್ ನಿಕ್ಕಂ ಅವರೇ ಹೈಕೋರ್ಟಿನಲ್ಲೂ ವಾದಿಸಿದ್ದರು. ಆತ ಎಸಗಿದ ಕುಕೃತ್ಯಗಳನ್ನು ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ವಿವರಿಸಿದ್ದರು.

ಸರಕಾರಿ ವಕೀಲರ ವಾದವನ್ನು ಕಸಬ್ ಪರ ವಕೀಲರಾದ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ತೀವ್ರವಾಗಿ ವಿರೋಧಿಸಿದ್ದರು. ಪೊಲೀಸರು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ. ಕಸಬ್ ಓರ್ವ ಸುಪಾರಿ ಹಂತಕನೇ ಹೊರತು, ಸೂತ್ರಧಾರನಲ್ಲ ಎಂದು ಹೇಳಿದ್ದರು.

ಭಾರತೀಯ ಪ್ರಜೆಗಳಾಗಿರುವ ಫಹೀದ್ ಮತ್ತು ಸಬಾವುದ್ದೀನ್ ಅವರನ್ನು ವಿಚಾರಣಾ ನ್ಯಾಯಾಲಯವು ಖುಲಾಸೆಗೊಳಿಸುವ ಮೂಲಕ ಪ್ರಮಾದ ಎಸಗಿದೆ. ಅವರಿಬ್ಬರೂ ಮುಂಬೈ ದಾಳಿಯಲ್ಲಿ ಉಗ್ರರಿಗೆ ಸಹಕಾರ ನೀಡಿದ್ದರು ಎಂದೂ ನಿಕ್ಕಂ ವಾದಿಸಿದ್ದರು.

ಈ ಮೂರೂ ಜನರ ಹಣೆಬರಹ ಫೆಬ್ರವರಿ 7ರಂದು ಹೈಕೋರ್ಟ್ ನೀಡುವ ತೀರ್ಪನ್ನು ಆಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ