ಈಗ ಫತ್ವಾದ ಸರದಿ ಭವಿಷ್ಯದ್ದು. ಮುಸ್ಲಿಮರು ಭವಿಷ್ಯ ಕೇಳುವುದು ಅಥವಾ ಹೇಳುವುದು ಶರಿಯತ್ ಪ್ರಕಾರ ತಪ್ಪು. ಅದು ಇಸ್ಲಾಮಿಗೆ ವಿರುದ್ಧವಾದುದು. ಹಾಗೊಂದು ವೇಳೆ ಜ್ಯೋತಿಷ್ಯದಂತಹ ವಿಚಾರಗಳಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತೊಡಗಿಸಿಕೊಂಡಲ್ಲಿ, ಆತನ ಪ್ರಾರ್ಥನೆಗಳು 40 ದಿನಗಳ ಕಾಲ ಅಸ್ವೀಕಾರಾರ್ಹವೆನಿಸುತ್ತದೆ.
ಎಂದಿನಂತೆ ಇಂತಹ ಫತ್ವಾ ಹೊರಡಿಸಿರುವುದು ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ದಾರುಲ್ ಉಲೂಮ್ ದಿಯೋಬಂದ್. ಇಸ್ಲಾಂನಲ್ಲಿ ಭವಿಷ್ಯ ಹೇಳುವುದನ್ನು ಮಾಡಬಹುದೇ, ಇದಕ್ಕೆ ಅವಕಾಶವಿದೆಯೇ ಎಂದು ಕೇಳಲಾಗಿದ್ದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಲಾಗಿದೆ.
ಭವಿಷ್ಯ ಹೇಳುವುದು ಇಸ್ಲಾಂ ಪ್ರಕಾರ ನಿಷಿದ್ಧ ಎನ್ನುವುದಕ್ಕೆ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆಯು ಶರಿಯತ್ ಕಟ್ಟಳೆಯನ್ನು ಉಲ್ಲೇಖಿಸಿದೆ.
ಕಾಲಜ್ಞಾನವು ಅಲ್ಲಾಹುವಿನ ವಿಶೇಷ ಹಕ್ಕಾಗಿದ್ದರೆ, ಇಸ್ಲಾಮಿಕ್ ಕದನಗಳಲ್ಲಿ ಪ್ರಮುಖವಾಗಿರುವ ಬದ್ರ್‌ನಲ್ಲಿ ಅಬೂ ಜಹಾಲ್ ಸಾಯುತ್ತಾನೆ ಎಂದು ಪ್ರವಾದಿ ಮೊಹಮ್ಮದ್ ಅವರು ಪೂರ್ವಭಾವಿಯಾಗಿ ತಿಳಿದುಕೊಂಡದ್ದು ಹೇಗೆ ಎಂದು ಮತ್ತೊಂದು ಪ್ರಶ್ನೆಯನ್ನು ದಾರೂಲ್ ಉಲೂಮ್ ದಿಯೋಬಂದಿನಲ್ಲಿ ಕೇಳಲಾಗಿದೆ.
ವ್ಯಕ್ತಿಯ ಸಾವಿನ ಸಮಯ ಮತ್ತು ಸ್ಥಳವನ್ನು ಮೊದಲೇ ಹೇಳುವ ವಿಶೇಷ ಅಧಿಕಾರ ಇರುವುದು ಅಲ್ಲಾಹುವಿಗೆ. ಅಲ್ಲಾಹು ಹೇಳಿದ್ದನ್ನು ಆಧಾರವಾಗಿಟ್ಟುಕೊಂಡು ಪ್ರವಾದಿಯವರು ಭವಿಷ್ಯ ಹೇಳಿದರೆ ಅದರಲ್ಲೇನೂ ತಪ್ಪಿಲ್ಲ ಎಂದು ದಿಯೋಬಂದ್ ಉತ್ತರಿಸಿದೆ.
ಬ್ಯಾಂಕಿನಲ್ಲಿ ಠೇವಣಿ ಇಟ್ಟ ಹಣದಿಂದ ಬಡ್ಡಿ ಸಂಪಾದಿಸುವುದು ಕೂಡ ಇಸ್ಲಾಂ ಪ್ರಕಾರ ನಿಷಿದ್ಧ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಲಾಗಿದೆ. ಆದರೆ, ತನ್ನ ಸಾಲವನ್ನು ಮರು ಪಾವತಿ ಮಾಡುವ ಸಲುವಾಗಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರೆ ಅದು ಶರಿಯತ್ ಕಾನೂನಿಗೆ ವಿರುದ್ಧವಲ್ಲ ಎಂದು ಹೇಳಲಾಗಿದೆ.
ಪವಿತ್ರ ಕುರಾನ್ ಮೇಲೆ ಪ್ರಮಾಣ ಮಾಡಿಯೂ ಧೂಮಪಾನ ತ್ಯಜಿಸಲು ವ್ಯಕ್ತಿಯೊಬ್ಬ ವಿಫಲನಾದರೆ ಏನು ಮಾಡಬೇಕು ಎಂದೂ ಕೇಳಲಾಗಿತ್ತು. ಆತ ಮಾಡಿದ ಪಾಪಕ್ಕಾಗಿ ಕನಿಷ್ಠ 10 ಬಡವರಿಗೆ ದಿನಕ್ಕೆರಡು ಬಾರಿ ಅಥವಾ ಓರ್ವ ನಿರ್ಗತಿಕನಿಗೆ ಹತ್ತು ದಿನಗಳ ಕಾಲ ಊಟ ಹಾಕಬೇಕು ಎಂದು ಉತ್ತರಿಸಲಾಗಿದೆ.
ನಾವು ಹೊರಡಿಸುವ ಫತ್ವಾಗಳು ಆದೇಶಗಳು ಅಥವಾ ಸಲಹೆಗಳಲ್ಲ. ಇದು ಕುರಾನ್ ಮತ್ತು ಹದೀಸ್‌ಗಳ ಪ್ರಕಾರ ನಿರ್ದಿಷ್ಟ ಪ್ರಶ್ನೆಗಳಿಗೆ ನೀಡುವ ಉತ್ತರಗಳು ಮಾತ್ರ ಎಂದು ಇತ್ತೀಚಿನ ದಿನಗಳಲ್ಲಿ ಫತ್ವಾಗಳು ತೀವ್ರ ವಿವಾದಕ್ಕೊಳಗಾಗುತ್ತಿರುವುದಕ್ಕೆ ದಿಯೋಬಂದ್ ಸ್ಪಷ್ಟನೆಯನ್ನೂ ನೀಡಿದೆ.