ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರ ಸಚಿವ ಎಸ್ಸೆಂ ಕೃಷ್ಣ ಸೇಫ್; ಮೊಯ್ಲಿಗೆ ಕೊಕ್? (Manmohan Singh | Kapil Sibal | Congress | SM Krishna)
Bookmark and Share Feedback Print
 
PTI
ಕೇಂದ್ರದಲ್ಲಿ ಸಂಪುಟ ಸಚಿವರಾಗಿರುವ ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ನಾಯಕರು ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಬೇವು-ಬೆಲ್ಲ ಸವಿಯಲಿದ್ದಾರೆ.

ದುರ್ಬಲ ವಿದೇಶಾಂಗ ಸಚಿವ ಎಂಬ ಟೀಕೆಗಳನ್ನು ಎದುರಿಸುತ್ತಿರುವ ಎಸ್.ಎಂ. ಕೃಷ್ಣರನ್ನು ಮುಂದುವರಿಸಲು ಹಾಗೂ ಅಪರಾತಪರಾ ವರ್ತನೆ ತೋರುತ್ತಿರುವ ಕಾನೂನು ಸಚಿವ ವೀರಪ್ಪ ಮೊಯ್ಲಿಯವರನ್ನು ಬದಲಾಯಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಈ ಸಂಬಂಧ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರನ್ನು ಕೂಡ ಭೇಟಿ ಮಾಡಿದ್ದಾರೆ. ಸೋನಿಯಾ ಗಾಂಧಿ ಜತೆ ಎರಡೆರಡು ಸುತ್ತಿನ ಮಾತುಕತೆಗಳು ನಡೆದಿವೆ.

ಪಾಕಿಸ್ತಾನದ ಜತೆಗಿನ ಮಾತುಕತೆಗಳು, ಅಮೆರಿಕಾ ಜತೆಗಿನ ಸಂಬಂಧಗಳ ಕುರಿತಾದ ವಿಚಾರ ಬಂದಾಗ ತೀರಾ ನೀರಸ ವ್ಯಕ್ತಿಯಂತೆ ವರ್ತಿಸಿದ್ದ ಕೃಷ್ಣ, ಸ್ವತಃ ಗೃಹ ಕಾರ್ಯದರ್ಶಿಯನ್ನು ಬಹಿರಂಗವಾಗಿ ಟೀಕಿಸಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಯಾವುದೇ ಪ್ರಶ್ನೆ ಕೇಳಿದರೂ ಸ್ಪಷ್ಟ ಉತ್ತರ ಹೇಳದೆ ನುಣುಚಿಕೊಳ್ಳುತ್ತಿರುವ ಅವರನ್ನು ಬದಲಾಯಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಲಾಗಿತ್ತು.

ಅವರ ಕೈಯಿಂದ ವಿದೇಶಾಂಗ ಸಚಿವ ಸ್ಥಾನವನ್ನು ಕಿತ್ತುಕೊಂಡು, ಬೇರೆ ಯಾವುದಾದರೂ ಖಾತೆ ನೀಡುವ ಮತ್ತು ಅವರ ಸಚಿವಾಲಯವನ್ನು ಆನಂದ್ ಶರ್ಮಾ ಕೈಗೆ ನೀಡುವ ಚಿಂತನೆ ಕಾಂಗ್ರೆಸ್ಸಿನದ್ದಾಗಿತ್ತು. ಇದು ಇತ್ತೀಚಿನ ಕಾಂಗ್ರೆಸ್ ಸಮಾವೇಶದಲ್ಲೂ ಪ್ರತಿಫಲನಗೊಂಡಿತ್ತು. ಎಸ್.ಎಂ. ಕೃಷ್ಣ ಅವರಿಗೆ ತೀವ್ರ ನಿರಾಸೆಯಾಗುವಂತೆ ಕಾಂಗ್ರೆಸ್ ನೋಡಿಕೊಂಡಿತ್ತು.

ಆದರೆ ಈಗ ಖಾತೆ ಬದಲಾವಣೆ ಮಾಡುವ ನಿರ್ಧಾರದಿಂದ ಹಿಂದಕ್ಕೆ ಸರಿಯಲಾಗಿದೆ. ಎಸ್.ಎಂ. ಕೃಷ್ಣ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ವೀರಪ್ಪ ಮೊಯ್ಲಿಗೆ ಕೊಕ್?
ವೀರಪ್ಪ ಮೊಯ್ಲಿಯವರನ್ನು ಕಾನೂನು ಸಚಿವಾಲಯದಿಂದ ಹೊರಗಿಟ್ಟು, ಅವರ ಜಾಗಕ್ಕೆ ಕಾರ್ಪೊರೇಟ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಅವರನ್ನು ತರುವ ಸಾಧ್ಯತೆಗಳಿವೆ.

ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳಿಗೆ ಮೊಯ್ಲಿ ಕೊಟ್ಟಿದ್ದ ಪ್ರತಿಕ್ರಿಯೆಗಳು ಸರಕಾರಕ್ಕೆ ಮುಜುಗರ ತಂದಿದ್ದವು. ನೇರವಾಗಿ ತೀರ್ಪುಗಳನ್ನು ಟೀಕಿಸುವ ಮಟ್ಟಕ್ಕೆ ಮೊಯ್ಲಿ ಹೋಗಿದ್ದರು. ನ್ಯಾಯಾಧೀಶರ ಕುರಿತು ಕೂಡ ಮೊಯ್ಲಿ ಅಭಿಪ್ರಾಯ ಉತ್ತಮವಾಗಿಲ್ಲ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮೊಯ್ಲಿಯವರಿಗೆ ಬೇರೆ ಸಚಿವಾಲಯದ ಜವಾಬ್ದಾರಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಹಲವರಿಗೆ ಕೊಕ್, ಭಾರ ಇಳಿಕೆ...
ಕಪಿಲ್ ಸಿಬಲ್ ಅವರಲ್ಲೀಗ ಮಾನವ ಸಂಪನ್ಮೂಲಾಭಿವೃದ್ಧಿ ಮತ್ತು ದೂರಸಂಪರ್ಕ ಖಾತೆಗಳಿವೆ. ಡಿಎಂಕೆಯ 'ಸ್ಪ್ರೆಕ್ಟ್ರಮ್' ರಾಜಾ ರಾಜೀನಾಮೆ ನೀಡಿದ ನಂತರ ಅವರಿಗೆ ದೂರಸಂಪರ್ಕ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿತ್ತು.

ಕಾಂಗ್ರೆಸ್ ಮೂಲಗಳ ಪ್ರಕಾರ ದೂರಸಂಪರ್ಕ ಖಾತೆಯನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಂಡು, ಮಾನವ ಸಂಪನ್ಮೂಲಾಭಿವೃದ್ಧಿ ಖಾತೆಯನ್ನು ಬೇರೆಯವರಿಗೆ ನೀಡಲಾಗುತ್ತದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ವಿದೇಶಾಂಗ ಖಾತೆಯ ರಾಜ್ಯ ಸಚಿವ ಸ್ಥಾನಕ್ಕೆ ತರಲಾಗುತ್ತದೆ.

ಸಲ್ಮಾನ್ ಖುರ್ಷೀದ್ ಅವರಿಗೆ ಭಡ್ತಿ ನೀಡುವ ಸಾಧ್ಯತೆಗಳಿವೆ. ತೃಣಮೂಲ ಕಾಂಗ್ರೆಸ್‌ಗೆ ರಾಜ್ಯ ಸಚಿವ ಸ್ಥಾನವೊಂದು ಹೆಚ್ಚುವರಿಯಾಗಿ ಸಿಗುವ ಸಾಧ್ಯತೆಗಳಿವೆ.

ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಖಾತೆಯ ಹೆಚ್ಚುವರಿ ಜವಾಬ್ದಾರಿ ಹೊಂದಿರುವ ಕೃಷಿ ಸಚಿವ ಶರದ್ ಪವಾರ್ ಹೊರೆ ಇಳಿಸಿಕೊಳ್ಳಲಿದ್ದರೆ, ನಾಗರಿಕ ವಾಯುಯಾನ ಸಚಿವ ಪ್ರಫುಲ್ ಪಟೇಲ್ ಬೇಡಿಕೆಯಂತೆ ಭಡ್ತಿ ಪಡೆಯಲಿದ್ದಾರೆ.

ಎ. ರಾಜಾ ರಾಜೀನಾಮೆ ನೀಡಿರುವುದರಿಂದ ಡಿಎಂಕೆ ಕೋಟಾದಲ್ಲಿ ಒಂದು ಕ್ಯಾಬಿನೆಟ್ ಸ್ಥಾನ ಖಾಲಿಯಿದೆ. ಇದಕ್ಕೆ ಟಿ.ಆರ್. ಬಾಲು ಅಥವಾ ಇ.ವಿ. ಇಳಂಗೋವನ್ ಬರುವ ಸಾಧ್ಯತೆಗಳಿವೆ. ಅದೇ ಹೊತ್ತಿಗೆ ಅತ್ತ ಕ್ಯಾಬಿನೆಟ್‌ನಲ್ಲಿರುವ ಸಿ.ಪಿ. ಜೋಷಿ ಮತ್ತು ವೀರಭದ್ರ ಸಿಂಗ್ ಅವರಿಗೆ ಕೊಕ್ ನೀಡಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ