ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಾಕೆ ಹಿಂದೂಗಳು ಮಾತ್ರ ತಪ್ಪೊಪ್ಪಿಗೆ ನೀಡುತ್ತಾರೆ?: ಆರೆಸ್ಸೆಸ್
(RSS | Hindu radicalism | Ajmal Kasab | Swami Aseemanand)
ಯಾಕೆ ಹಿಂದೂಗಳು ಮಾತ್ರ ತಪ್ಪೊಪ್ಪಿಗೆ ನೀಡುತ್ತಾರೆ?: ಆರೆಸ್ಸೆಸ್
ನವದೆಹಲಿ, ಮಂಗಳವಾರ, 18 ಜನವರಿ 2011( 12:07 IST )
ಹಿಂದೂ ತೀವ್ರವಾದಿಗಳು ಮಾತ್ರ ತಮ್ಮ ಭಯೋತ್ಪಾದನಾ ಕೃತ್ಯಗಳ ಬಗ್ಗೆ ತನಿಖಾ ಸಂಸ್ಥೆಗಳ ಎದುರು ತಮ್ಮ ತಪ್ಪೊಪ್ಪಿಗೆ ನೀಡುತ್ತಿದ್ದಾರಾ? ತಪ್ಪಿತಸ್ಥರು ಎಂದು ಸಾಬೀತಾಗಿರುವ ಅಜ್ಮಲ್ ಕಸಬ್ ಮತ್ತು ಅಫ್ಜಲ್ ಗುರು ಮುಂತಾದ ಉಗ್ರರು ಬಾಯಿ ಬಿಡುತ್ತಿಲ್ಲವೇ? ಹೀಗೆಂದು ಪ್ರಶ್ನಿಸಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ.
ತನಿಖಾ ಸಂಸ್ಥೆಗಳ ಪಾತ್ರದ ಬಗ್ಗೆಯೇ ಶಂಕೆ ವ್ಯಕ್ತಪಡಿಸಿರುವ ಆರೆಸ್ಸೆಸ್, ಇದು ಪಿತೂರಿ ಎಂದು ಆರೋಪಿಸಿದೆ.
'ಹಿಂದೂ ತೀವ್ರಗಾಮಿಗಳು ಎಂದು ಆರೋಪಿಸಲ್ಪಟ್ಟ ವ್ಯಕ್ತಿಗಳು ಮಾತ್ರ ತಪ್ಪೊಪ್ಪಿಗೆಗಳನ್ನು ನೀಡುತ್ತಿರುವುದು ಪಿತೂರಿಯ ಭಾಗ. ಕಸಬ್ ಅಥವಾ ಅಫ್ಜಲ್ ಗುರು ಅಥವಾ ಇತರ ಯಾವುದೇ ಸೆರೆ ಸಿಕ್ಕ ಜಿಹಾದಿ ಉಗ್ರ ಇಂತಹ ತಪ್ಪೊಪ್ಪಿಗೆ ನೀಡಿರುವುದನ್ನು ನಾವು ಕೇಳಿಲ್ಲ. ಅವರು ತನಿಖಾ ಸಂಸ್ಥೆಗಳ ಎದುರು ಬಾಯಿ ಬಿಡುವುದಿಲ್ಲವೇ?' ಎಂದು ಸಂಘ ಪರಿವಾರವು ತನ್ನ ಮುಖವಾಣಿ 'ಆರ್ಗನೈಸರ್' ಸಂಪಾದಕೀಯದಲ್ಲಿ ಪ್ರಶ್ನಿಸಿದೆ.
2007ರ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಸ್ವಾಮಿ ಅಸೀಮಾನಂದ್ ಸಿಬಿಐ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದು ಮತ್ತು ಅದು ಬಹಿರಂಗವಾಗಿರುವುದನ್ನು ಉಲ್ಲೇಖಿಸಿರುವ ಆರೆಸ್ಸೆಸ್ ಮೇಲಿನಂತೆ ಸಂಪಾದಕೀಯದಲ್ಲಿ ಟೀಕಿಸಿದೆ.
ತನಿಖಾ ಸಂಸ್ಥೆಗಳು ನಿಜವಾಗಿಯೂ ಇಂತಹ ಭಯೋತ್ಪಾದನಾ ದಾಳಿ ಸಂಚುಗಳನ್ನು ಬಯಲಿಗೆ ಎಳೆಯಲು ಬಯಸಿದ್ದೇ ಆದಲ್ಲಿ, ಅಸೀಮಾನಂದ್ ನೀಡಿದ್ದಾರೆ ಎಂದು ಹೇಳಲಾಗಿರುವ ಸೋ-ಕಾಲ್ಡ್ ತಪ್ಪೊಪ್ಪಿಗೆಗಳಿಗೆ ಈ ರೀತಿಯ ಪ್ರಚಾರವನ್ನು ನೀಡುತ್ತಿರಲಿಲ್ಲ. ತಪ್ಪೊಪ್ಪಿಗೆ ಹೇಳಿಕೆಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ರಾಜಕೀಯ ಲಾಭಗಳ ಉದ್ದೇಶದಿಂದ ಎಂದೂ ಆರೆಸ್ಸೆಸ್ ಆರೋಪಿಸಿದೆ.
ಮೆಕ್ಕಾ ಮಸೀದಿ ಸ್ಫೋಟ ಪ್ರಕರಣವು ಸಿಬಿಐ ಕೈಗೆ ಬರುವ ಮೊದಲು ತನಿಖೆ ನಡೆಸಿದ್ದ ಹೈದರಾಬಾದ್ ಪೊಲೀಸರು, ಈ ಸ್ಫೋಟ ನಡೆಸಿದ್ದು ನಿಷೇಧಿತ ಸಂಘಟನೆ ಹುಜಿ ಎಂದು ಹೇಳಿದ್ದರು ಎಂಬುದನ್ನು ಉಲ್ಲೇಖಿಸಲಾಗಿದೆ.
'ಎಲ್ಲಾ ಭಯೋತ್ಪಾದನಾ ಸಂಘಟನೆಗಳು ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತವೆ ಅಥವಾ ತಾವು ಇದ್ದೇವೆ ಎಂಬುದನ್ನು ಹೇಳಿಕೊಳ್ಳುತ್ತವೆ. ಇದು ಆ ಸಂಘಟನೆಗಳಿಗೆ ಸೇರಿಕೊಳ್ಳಲು ಅಥವಾ ನಿಧಿ ಸಂಗ್ರಹಿಸಲು ಅವುಗಳಿಗೆ ಅಗತ್ಯವಾಗಿರುತ್ತದೆ. ಲಷ್ಕರ್ ಇ ತೋಯ್ಬಾ, ಇಂಡಿಯನ್ ಮುಜಾಹಿದೀನ್, ಹುಜಿ, ಸಿಮಿ, ಹಿಜ್ಬುಲ್ ಮುಜಾಹಿದೀನ್, ಎಲ್‌ಟಿಟಿಇ, ಉಲ್ಫಾ, ಮಾವೋವಾದಿಗಳು ಸೇರಿದಂತೆ ಎಲ್ಲಾ ಉಗ್ರ ಸಂಘಟನೆಗಳು ಸಾರ್ವಜನಿಕವಾಗಿ ಪ್ರಚಾರದಲ್ಲಿರುವಂತೆ ನೋಡಿಕೊಂಡಿವೆ'
'ಆದರೆ ಯಾವುದೇ ಹಿಂದೂ ಸಂಘಟನೆ ಈ ರೀತಿಯಾಗಿ ತನ್ನ ತಪ್ಪು ಒಪ್ಪಿಕೊಂಡಿಲ್ಲ. ಯಾವುದೇ ಭಯೋತ್ಪಾದನಾ ಕೃತ್ಯವನ್ನು ನಡೆಸಿದ್ದು ತಾನು ಎಂದು ಹೇಳಿಕೊಂಡ ಉದಾಹರಣೆಯಿಲ್ಲ. ಹಿಂದೂ ಅಜೆಂಡಾ ಸಾಧನೆಗಾಗಿ ಭೂಗತವಾಗಿ ಕೆಲಸ ಮಾಡುವುದನ್ನು ಹೇಳಿಕೊಂಡ ಸಂಘಟನೆಯೂ ಇಲ್ಲ' ಎಂದು ಆರೆಸ್ಸೆಸ್ ಇನ್ನೊಂದು ವಾದವನ್ನು ಮುಂದಿಟ್ಟಿದೆ.