ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಡವರ ಬಗ್ಗೆ ಕಾಂಗ್ರೆಸ್ ಚಿಂತೆ ಮಾಡಿಯೇ ಇಲ್ಲ: ಗಡ್ಕರಿ (Congress | Nitin Gadkari | BJP | UPA)
Bookmark and Share Feedback Print
 
ದೇಶದ ರೈತರು ಮತ್ತು ಬಡವರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷವು ಯಾವತ್ತೂ ಗಂಭೀರವಾಗಿ ಯೋಚನೆ ಮಾಡಿಲ್ಲ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಆರೋಪಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅತಿ ಹೆಚ್ಚು ವರ್ಷಗಳ ಕಾಲ ದೇಶವನ್ನು ಆಳಿದರೂ ಜನಸಾಮಾನ್ಯನ ಸ್ಥಿತಿ ಬದಲಾಗಿಲ್ಲ, ಆತ ಶ್ರೀಮಂತನಾಗಿಲ್ಲ. ಬದಲಿಗೆ ಕಾಂಗ್ರೆಸ್ ನಾಯಕರು ಮತ್ತು ಅದರ ಕಾರ್ಯಕರ್ತರು ಶ್ರೀಮಂತರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಒರಿಸ್ಸಾ ರಾಜಧಾನಿ ಭುವನೇಶ್ವರದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ, ಕಾಂಗ್ರೆಸ್ ನೇತೃತ್ವದ ಸರಕಾರಗಳ ಕಳಪೆ ಆರ್ಥಿಕ ನೀತಿಗಳಿಂದಾಗಿ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದರು.

ಕೇಂದ್ರ ಸರಕಾರದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಇದೇ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಚಾಲನೆ ನೀಡಿರುವ ಬಿಜೆಪಿ, ಅದರ ಅಂಗವಾಗಿ ಒರಿಸ್ಸಾದಲ್ಲೂ ಸಮಾವೇಶ ನಡೆಸಿದೆ.

ಬಡವರು ಮತ್ತು ರೈತರ ದುರವಸ್ಥೆ ಈ ಪರಿಗೆ ತಲುಪಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ ಕಾರಣ ಎಂದು ಆಪಾದಿಸಿದ ಅವರು, ವಿಮಾನಗಳನ್ನು ಖರೀದಿಸಲು ಸರಕಾರದಲ್ಲಿ 70,000 ಕೋಟಿ ರೂಪಾಯಿ ಹಣ ಇದೆ. ಆದರೆ ರೈತರ ಆತ್ಮಹತ್ಯೆಗಳನ್ನು ತಡೆಯಲು ಹಣವಿಲ್ಲ ಎಂದು ಲೇವಡಿ ಮಾಡಿದರು.

2ಜಿ ತರಂಗಾಂತರ, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಆದರ್ಶ ವಸತಿ ಮುಂತಾದ ಯುಪಿಎ ಅವಧಿಯ ಹಗರಣಗಳನ್ನು ಉಲ್ಲೇಖಿಸಿದ ಗಡ್ಕರಿ, 1947 ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷ ಎಂದು ಎಲ್ಲರಿಗೂ ಗೊತ್ತಿರುವಂತದ್ದು. ಆದರೆ 2010ರ ವರ್ಷವು ಹಗರಣಗಳ ವರ್ಷ ಎಂದು ಕುಟುಕಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಇರುವ ಏಕೈಕ ಪರ್ಯಾಯ ಎಂದ ಅವರು, ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದ ಸಾಧನೆಗಳನ್ನು ಕೊಂಡಾಡಿದರು.

ಅತ್ತ ಬಿಜೆಪಿ ಸಂಸದ ಶಹನಾವಾಜ್ ಹುಸೇನ್ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಮತ್ತು ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವ ಯುಪಿಎ ಸರಕಾರದಿಂದ ಅಂಗ ಪಕ್ಷಗಳು ಹೊರಗೆ ಬರಬೇಕು ಎಂದು ಅವರು ಕರೆ ನೀಡಿದ್ದಾರೆ.

ಜೈಪುರದಲ್ಲಿ ಮಾತನಾಡುತ್ತಿದ್ದ ಅವರು, ಬೆಲೆಯೇರಿಕೆ ಮತ್ತು ಭ್ರಷ್ಟಾಚಾರಗಳ ಕುರಿತು ಯುಪಿಎ ಮಿತ್ರಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಕೇವಲ ಒಳಗಿದ್ದುಕೊಂಡು ವಿರೋಧಿಸುವ ಬದಲು ಹೊರಗೆ ಬಂದು ಹೋರಾಡಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ