ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಮಾ ಭಾರತಿ ಬಿಜೆಪಿ ಮರಳುವುದು ಕಷ್ಟ: ನಿತಿನ್ ಗಡ್ಕರಿ (Uma Bharti | BJP | Nitin Gadkari | Bharatiya Janashakti)
Bookmark and Share Feedback Print
 
ಹಿಂದೂ ನಾಯಕಿ, ಬೆಂಕಿಯ ಚೆಂಡು ಖ್ಯಾತಿಯ ಉಮಾ ಭಾರತಿ ತನ್ನ ಮಾತೃಪಕ್ಷ ಬಿಜೆಪಿಗೆ ಮರಳಲಿದ್ದಾರೆ ಎನ್ನುವುದು ಹತ್ತಾರು ಬಾರಿ ಸುದ್ದಿಯಾಗಿದೆ. ಆದರೆ ಅದು ಸಾಧ್ಯವಿಲ್ಲ ಎನ್ನುವುದು ಇತ್ತೀಚಿನ ಕೆಲ ದಿನಗಳಿಂದ ಖಚಿತವಾಗುತ್ತಿದೆ. ಅದನ್ನೇ ಬಿಜೆಪಿ ಅಧ್ಯಕ್ಷರೂ ಹೇಳಿದ್ದಾರೆ.

ಸದ್ಯದ ಮಟ್ಟಿಗೆ ಉಮಾ ಭಾರತಿಯವರು ಬಿಜೆಪಿ ಮರಳುವುದು ಕಷ್ಟ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪತ್ರಕರ್ತರ ಜತೆ ಮಾತನಾಡಿದ್ದ ಉಮಾ ಭಾರತಿ ಕೂಡ ಇದೇ ಮಾತನ್ನು ಹೇಳಿದ್ದರು.

'ಆರೋಗ್ಯದ ಕಾರಣಗಳಿಂದಾಗಿ ಸದ್ಯದ ಮಟ್ಟಿಗೆ ಪಕ್ಷಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಉಮಾ ಭಾರತಿಯವರು ನನಗೆ ಹೇಳಿದ್ದಾರೆ' ಎಂದಿರುವ ಗಡ್ಕರಿ, ಆಕೆ ಯಾವಾಗ ಬೇಕಾದರೂ ಪಕ್ಷಕ್ಕೆ ಬರಬಹುದು. ಅವರಿಗಾಗಿ ಪಕ್ಷದ ಬಾಗಿಲು ಯಾವತ್ತೂ ತೆರೆದಿರುತ್ತದೆ ಎಂದರು.

ಉಮಾ ಭಾರತಿಯವರು ಆರೋಗ್ಯದ ಕಾರಣಗಳನ್ನು ನೀಡಿರುವುದರಿಂದ ಪಕ್ಷವು ಈ ವಿಚಾರದಲ್ಲಿ ಯಾವುದೇ ಪ್ರಸ್ತಾವನೆಯನ್ನು ಈಗ ಹೊಂದಿಲ್ಲ ಎಂದು ಇದುವರೆಗೆ ಹರಡಿದ್ದ ಸುದ್ದಿಗಳಿಗೆ ಗಡ್ಕರಿ ಸ್ಪಷ್ಟನೆ ನೀಡಿದರು.

ನಾನು ಬಿಜೆಪಿಯಲ್ಲಿದ್ದಷ್ಟು ದಿನ ನನ್ನನ್ನು ಬೇಕಾದಂತೆ ಬಳಸಿಕೊಳ್ಳಲಾಯಿತು. ಪಕ್ಷದ ಏಳ್ಗೆಗಾಗಿ ಸಾಕಷ್ಟು ಶ್ರಮಿಸಿದರೂ, ಅದಕ್ಕೆ ಪಕ್ಷವು ನನಗೆ ಕೊಟ್ಟ ಪ್ರತಿಫಲವೇನು ಎಂದು ಇತ್ತೀಚೆಗಷ್ಟೇ ಪ್ರಶ್ನಿಸಿದ್ದ ಉಮಾ ಭಾರತಿ, ಇದನ್ನೆಲ್ಲ ಅಷ್ಟು ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ. ಕಳೆದ ಐದು ವರ್ಷಗಳಲ್ಲಿ ನಾನು ಅನುಭವಿಸಿದ್ದನ್ನು ಮರೆತು ಬಿಡಿ ಎಂದು ಹೇಳುವುದು ಕಷ್ಟ ಎಂದಿದ್ದರು.

ತಾನು ಅಡ್ವಾಣಿ ಮತ್ತು ಗಡ್ಕರಿ ಜತೆ ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ ಸದ್ಯದ ಮಟ್ಟಿಗೆ ಹೇಳುವುದಾದರೆ, ನಾನು ಬಿಜೆಪಿಗೆ ಮರಳಲು ಆಸಕ್ತಿ ಹೊಂದಿಲ್ಲ. ಮುಂದೆ ನೋಡೋಣ ಎಂದಷ್ಟೇ ತಿಳಿಸಿದ್ದರು.

ಅಡ್ವಾಣಿ ವಿರುದ್ಧ ಟಿವಿ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತೀವ್ರವಾಗಿ ಟೀಕಿಸಿದ್ದಕ್ಕಾಗಿ ಅವರನ್ನು 2004ರ ನವೆಂಬರ್ ತಿಂಗಳಲ್ಲಿ ಬಿಜೆಪಿಯಿಂದ ಅಮಾನತು ಮಾಡಲಾಗಿತ್ತು. ಈ ಅಮಾನತನ್ನು ನಂತರದ ಕೆಲವೇ ತಿಂಗಳಲ್ಲಿ ರದ್ದು ಮಾಡಲಾಯಿತು. 2005ರ ಮೇ ತಿಂಗಳಲ್ಲಿ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ಆಯ್ಕೆಯಾದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನೇಮಕವನ್ನು ಆಕ್ಷೇಪಿಸಿದ್ದಕ್ಕಾಗಿ ಮತ್ತೆ ಅದೇ ವರ್ಷ ಪಕ್ಷದಿಂದ ಆಕೆಯನ್ನು ಉಚ್ಛಾಟಿಸಲಾಯಿತು. ಬಳಿಕ ಅವರು ಭಾರತೀಯ ಜನಶಕ್ತಿ ಎಂಬ ತನ್ನದೇ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ