ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಗುಜರಾತಿಗೆ ಮುಸ್ಲಿಮರ ಪರಮೋಚ್ಚ ಸಂಸ್ಥೆ ಮೆಚ್ಚುಗೆ (Gujarat | Maulana Ghulam Mohammed Vastanvi | Narendra Modi | Deoband)
Bookmark and Share Feedback Print
 
ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿರುವ ಗುಜರಾತಿನಲ್ಲಿ ಎಲ್ಲಾ ಸಮುದಾಯದವರು ಪ್ರಗತಿ ಹೊಂದುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಮುಸ್ಲಿಮರಿಗೆ ರಾಜ್ಯದಲ್ಲಿ ತಾರತಮ್ಯ ಮಾಡಲಾಗುತ್ತಿಲ್ಲ ಎಂದು ದಾರುಲ್ ಉಲೂಮ್ ದಿಯೋಬಂದ್ ನೂತನ ಉಪ-ಕುಲಪತಿ ಮೌಲಾನಾ ಗುಲಾಮ್ ಮೊಹಮ್ಮದ್ ವಸ್ತಾನ್ವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಪ್ರಮುಖ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ಮತ್ತು ಫತ್ವಾಗಳನ್ನು ಹೊರಡಿಸುವ ಅಧಿಕೃತ ಮುಖಂಡರನ್ನೊಳಗೊಂಡ ಸಂಘಟನೆಯಾಗಿರುವ 'ದಾರುಲ್ ಉಲೂಮ್' ಪ್ರಧಾನ ಕಚೇರಿ ಇರುವುದು ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ದಿಯೋಬಂದ್ ನಗರದಲ್ಲಿ. ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲೂ ದಿಯೋಬಂದ್‌ ಅನುಯಾಯಿಗಳನ್ನು ಹೊಂದಿರುವ ಈ ಸಂಸ್ಥೆಯೀಗ ಮೋದಿಯನ್ನು ಸ್ತುತಿಸಿರುವುದು ಪ್ರಮುಖ ಬೆಳವಣಿಗೆ ಎಂದೇ ಪರಿಗಣಿಸಲಾಗಿದೆ.

ಮೂಲತಃ ಗುಜರಾತಿನ ಸೂರತ್‌ನವರಾಗಿರುವ ವಸ್ತಾನ್ವಿ ಓರ್ವ ಎಂಬಿಎ ಪದವೀಧರ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿನ ದಿಯೋಬಂದ್ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಅವರೀಗ ದಿಯೋಬಂದ್ ಮುಖ್ಯಸ್ಥರಾಗಿ ನೇಮಕಗೊಂಡಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

2002ರ ಗುಜರಾತ್ ಗಲಭೆಯಲ್ಲಿ ಮುಸ್ಲಿಮರ ಮಾರಣಹೋಮ ನಡೆಸಿರುವ ಆರೋಪ ಹೊತ್ತಿರುವ ಮೋದಿಯತ್ತ ದಿಯೋಬಂದ್ ಮುಖ್ಯಸ್ಥನೊಬ್ಬ ಉದಾರತೆ ಪ್ರದರ್ಶಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ವಸ್ತಾನ್ವಿಯವರು ವಾಸ್ತವವಾದಿ. ಅವರು ಗಲಭೆಯಲ್ಲಿ ಮೋದಿಗೆ ಕ್ಲೀನ್ ಚಿಟ್ ನೀಡುತ್ತಿಲ್ಲ. ಆದರೆ ನಾವು ಮುಂದಕ್ಕೆ ಹೋಗಬೇಕೇ ಹೊರತು, ಹಿಂದಿನದ್ದನ್ನು ಯೋಚಿಸುತ್ತಾ ಅಲ್ಲೇ ಉಳಿಯಬಾರದು ಎಂಬ ಮನೋಸ್ಥಿತಿಯವರು.

'ಆ ಘಟನೆಗೀಗ ಬಹುತೇಕ ಎಂಟು ವರ್ಷಗಳು ಸಂದಿವೆ. ನಾವು ಅದನ್ನು ಅಲ್ಲೇ ಬಿಟ್ಟು ಮುಂದಕ್ಕೆ ಹೋಗಬೇಕು. ಗಲಭೆ ಗುಜರಾತಿನಲ್ಲಾಗಲಿ ಅಥವಾ ವಿಶ್ವದ ಯಾವುದೇ ಭಾಗದಲ್ಲಾಗಲಿ, ಅದು ಮಾನವೀಯತೆಗೆ ವಿರುದ್ಧವಾದುದು ಮತ್ತು ಅದು ನಡೆಯಬಾರದು. ಗುಜರಾತ್ ಹಿಂಸಾಚಾರಗಳು ಭಾರತಕ್ಕೆ ಕಳಂಕ, ಇದರ ಹಿಂದಿನ ಎಲ್ಲಾ ದುಷ್ಕರ್ಮಿಗಳಿಗೂ ಶಿಕ್ಷೆಯಾಗಬೇಕು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತಿನಲ್ಲಿ ಅಭಿವೃದ್ಧಿಯೇ ಆಗಿಲ್ಲ, ಅಲ್ಲಿ ಉದ್ಯಮ ಭಾರೀ ಪ್ರಮಾಣದಲ್ಲಿ ಬೆಳೆದಿದೆ ಎನ್ನುವುದು ಸುಳ್ಳು ಎಂದು ಕೆಲವು ರಾಷ್ಟ್ರೀಯ ಮಾಧ್ಯಮಗಳು ಮತ್ತು ಕಾಂಗ್ರೆಸ್ ಮುಂತಾದ ರಾಜಕೀಯ ಪಕ್ಷಗಳು ಪ್ರಚಾರ ಮಾಡುತ್ತಿರುವುದನ್ನು ದಿಯೋಬಂದ್ ಮುಖ್ಯಸ್ಥರು ಪರೋಕ್ಷವಾಗಿ ಪ್ರಸ್ತಾಪಿಸಿ, ಅದು ಸುಳ್ಳು ಎಂದಿದ್ದಾರೆ.

'ಪ್ರಸಕ್ತ ಬಿಂಬಿಸಲಾಗುತ್ತಿರುವ ರೀತಿಯಲ್ಲಿ ಗುಜರಾತಿನಲ್ಲಿ ಸಮಸ್ಯೆಗಳಿಲ್ಲ. ಯುಪಿಎ ಸರಕಾರ ಅಥವಾ ಗಲಭೆಯ ಬಲಿಪಶುಗಳ ಪರ ಕೆಲಸ ಮಾಡುತ್ತಿರುವ ಸಂಘಟನೆಗಳು ಆರೋಪಿಸುತ್ತಿರುವಂತೆ, ಗಲಭೆಯಲ್ಲಿನ ಪರಿಹಾರ ಅಥವಾ ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ತಾರತಮ್ಯ ಮಾಡುತ್ತಿಲ್ಲ. ಇಲ್ಲಿನ ಸರಕಾರ ಮತ್ತು ಇಲ್ಲಿನ ಜನತೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ವಸ್ತಾನ್ವಿ ಶ್ಲಾಘಿಸಿದರು.

ಗುಜರಾತ್ ಸಾಧಿಸಿರುವ ಆರ್ಥಿಕ ಪ್ರಗತಿಯ ಕುರಿತಂತೂ ದಿಯೋಬಂದ್ ನಿಸ್ಸಂಶಯವಾಗಿ ಖುಷಿಗೊಂಡಿದೆ. 'ಸಂಶಯಾತೀತವಾಗಿ ಗುಜರಾತ್ ಗಮನಾರ್ಹ ಪ್ರಗತಿ ಕಂಡಿದೆ. ಖಂಡಿತಾ ಇದು ಮುಂದುವರಿಯಲಿದೆ ಎಂದು ನಾವು ಭಾವಿಸಿದ್ದೇವೆ. ಮುಸ್ಲಿಮರು ಅತ್ಯುತ್ತಮ ವಿದ್ಯಾಭ್ಯಾಸ ಪಡೆಯಬೇಕು ಎಂದು ನಾನು ಸಲಹೆ ನೀಡಲು ಬಯಸುತ್ತಿದ್ದೇನೆ. ಖಂಡಿತಾ ಅವರಿಗೆ ನಮ್ಮ ಗುಜರಾತ್ ಸರಕಾರವು ಉದ್ಯೋಗ ನೀಡುತ್ತದೆ. ಅದಕ್ಕಿರುವ ಅಗತ್ಯವೆಂದರೆ ಅತ್ಯುತ್ತಮ ಶಿಕ್ಷಣ' ಎಂದರು.
ಸಂಬಂಧಿತ ಮಾಹಿತಿ ಹುಡುಕಿ