ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆಯಂತಹ ವಿಚಿತ್ರ ವ್ಯಾಖ್ಯಾನಗಳನ್ನು ಮಾಡಿದ್ದ ಕಾಂಗ್ರೆಸ್ ತನ್ನ ಪಥವನ್ನು ನಿಧಾನವಾಗಿ ಬದಲಾಯಿಸುತ್ತಿದೆ. ತನಗೆ ತಿರುಗುಬಾಣವಾಗುತ್ತಿರುವುದನ್ನು ಪರಿಗಣಿಸಿರುವ 'ಜಾತ್ಯತೀತ' ಪಕ್ಷವು ಈಗ, ಅದು ಸಂಘೀಯ ಭಯೋತ್ಪಾದನೆ ಎಂದು ಆರೋಪಿಸಿದೆ.
ಹೀಗೆಂದು ಹೇಳಿರುವುದು ಕಾಂಗ್ರೆಸ್‌ನ ವಿವಾದಿತ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್. ಲಕ್ನೋದಲ್ಲಿ ಮಾತನಾಡುತ್ತಿದ್ದ ಅವರು, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸ್ವಾಮಿ ಅಸೀಮಾನಂದ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯನ್ನು ಉಲ್ಲೇಖಿಸಿದರು.
ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಿಗೆ ಬಿಜೆಪಿ ಮತ್ತು ಆರೆಸ್ಸೆಸ್ ಆಶ್ರಯ ನೀಡುತ್ತಿರುವುದು ಅಸೀಮಾನಂದ್ ತಪ್ಪೊಪ್ಪಿಗೆ ಹೇಳಿಕೆಯಿಂದ ಸ್ಪಷ್ಟವಾಗಿದೆ. ಇದು ಸಂಘೀಯ ಭಯೋತ್ಪಾದನೆ ಎಂದು ಆರೋಪಿಸಿದರು.
ಮಾಲೆಗಾಂವ್ ಸ್ಫೋಟ ಆರೋಪಿ ಸುನಿಲ್ ಜೋಷಿ ಅವರನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣವನ್ನು ಸ್ಥಳೀಯ ಪೊಲೀಸರು ಸೂಕ್ತವಾಗಿ ತನಿಖೆ ನಡೆಸುವುದು ಅಸಾಧ್ಯವಾಗಿರುವುದರಿಂದ ಅದನ್ನು ಕೇಂದ್ರೀಯ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ದಿಗ್ವಿಜಯ್ ಒತ್ತಾಯಿಸಿದರು.
ಹಿಂದೂ ಭಯೋತ್ಪಾದನೆ ಮತ್ತು ಕೇಸರಿ ಭಯೋತ್ಪಾದನೆ ಎಂಬ ವ್ಯಾಖ್ಯಾನಗಳನ್ನು ಈ ಹಿಂದೆ ಮಾಡಿದ್ದು ಕಾಂಗ್ರೆಸ್. ಆದರೆ ಈಗ ಅದರಿಂದ ಹಿಂದಕ್ಕೆ ಸರಿದಿರುವುದು ಸ್ಪಷ್ಟವಾಗುತ್ತಿದೆ.
'ತೀವ್ರವಾದಿಗಳು ಹಿಂದೂಗಳಾಗಿರಲಿ ಅಥವಾ ಮುಸ್ಲಿಮರಾಗಿರಲಿ, ಕಾಂಗ್ರೆಸ್ ಪ್ರಕಾರ ಅವರು ದೇಶದ ಐಕ್ಯತೆಗೆ ಅಪಾಯಕಾರಿ. ಅವರ ಜತೆ ಕಠಿಣವಾಗಿ ನಡೆದುಕೊಳ್ಳಬೇಕು' ಎಂದು ಪಕ್ಷದ ನಿಲುವನ್ನು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಹೊರ ಹಾಕಿದರು.
ಭ್ರಷ್ಟಾಚಾರವನ್ನು ಸಹಿಸುವುದಿಲ್ಲ... ಕಾಂಗ್ರೆಸ್ ಯಾವತ್ತೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಅಂತಹ ಆರೋಪಗಳು ಬಂದಾಗಲೆಲ್ಲ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಅದು ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿಯ ಅಧಿಕಾರಿಗಳ ಮೇಲಿರಬಹುದು, ಆದರ್ಶ ಹೌಸಿಂಗ್ ಸೊಸೈಟಿ ಹಗರಣವಿರಬಹುದು. ತನಿಖೆಗೆ ಆದೇಶ ನೀಡಿದ್ದಲ್ಲದೆ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ದಿಗ್ವಿಜಯ್ ಸಮರ್ಥಿಸಿಕೊಂಡರು.
2ಜಿ ಹಗರಣದ ಕುರಿತು ಪ್ರಸ್ತಾಪ ಮಾಡಿರುವ ಅವರು, ಇದರ ಹೊಣೆಗಾರಿಕೆಯನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಮೇಲೆ ಹೊರಿಸಿದರು.
'ತರಂಗಾಂತರಗಳನ್ನು ಹಂಚಿಕೆ ಮಾಡಲು ಮೊದಲು ಬಂದವರಿಗೆ ಆದ್ಯತೆ ಎಂಬ ನೀತಿಯನ್ನು ರೂಪಿಸಿದ್ದು ನಾವಲ್ಲ. ಅದು ಎನ್‌ಡಿಎ. ಆರೋಪಗಳನ್ನು ಮಾಡುವಾಗ ಇದನ್ನು ಗಮನಿಸಬೇಕು. ಆದರೂ ಆರೋಪಗಳು ಬಂದಾಗ ನಾವು ರಾಜಾ ಅವರ ರಾಜೀನಾಮೆ ಪಡೆದಿದ್ದೇವೆ' ಎಂದರು.