ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರ ಸಂಪುಟ ವಿಸ್ತರಣೆ ನೀರಸ; ಕೃಷ್ಣ, ಮೊಯ್ಲಿ ಸೇಫ್
(SM Krishna | M Veerappa Moily | Manmohan Singh | Cabinet resuffle)
ಕಾರ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದ ಹಲವು ಸಚಿವರುಗಳನ್ನು ಬದಲಾವಣೆ ಮಾಡದೆ ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದ ನಂತರ ನಡೆದಿರುವ ಮೊತ್ತ ಮೊದಲ ಸಂಪುಟ ವಿಸ್ತರಣೆ ತೀವ್ರ ನಿರಾಸೆಗೆ ಕಾರಣವಾಗಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತು ಕಾನೂನು ಸಚಿವ ವೀರಪ್ಪ ಮೊಯ್ಲಿಯವರನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇಬ್ಬರೂ ಸಚಿವರುಗಳು ಜೀವದಾನ ಪಡೆದುಕೊಂಡಿದ್ದಾರೆ.
ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಭಾ ಸಿಂಗ್ ಪಾಟೀಲ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ಮಂದಿ ಹಾಜರಿದ್ದರು.
ಪವಾರ್ ಹೊರೆ ಇಳಿಕೆ... ಬೆಲೆಯೇರಿಕೆ ನಿಯಂತ್ರಣದಲ್ಲಿ ಸಂಪೂರ್ಣ ವಿಫಲರಾಗಿರುವ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರ ಹೊಣೆಗಾರಿಕೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕರ ವ್ಯವಹಾರಗಳ ಖಾತೆಯ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದ ಕೃಷಿ ಸಚಿವ ಪವಾರ್ ಅವರಿಂದ ಮೊದಲೆರಡು ಖಾತೆಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ ಆಹಾರ ಸಂಸ್ಕರಣಾ ಖಾತೆಯನ್ನು ವಹಿಸಲಾಗಿದೆ.
ಅವರೀಗ ಕೃಷಿ ಮತ್ತು ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರು.
ಪ್ರಫುಲ್ ಪಟೇಲ್‌ಗೆ ಭಡ್ತಿ... ನಾಗರಿಕ ವಾಯು ಯಾನ ಸಚಿವ ಪ್ರಫುಲ್ ಪಟೇಲ್ ಅವರಿಗೆ ಸಂಪುಟಕ್ಕೆ ಭಡ್ತಿ ನೀಡಲಾಗಿದೆ. ಅವರನ್ನು ಘನ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆಯ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ದಿಯೋರಾಗೆ ಕೊಕ್, ಜೈಪಾಲ್‌ಗೆ ಪೆಟ್ರೋಲಿಯಂ... ನಗರಾಭಿವೃದ್ಧಿ ಸಚಿವರಾಗಿದ್ದ ಜೈಪಾಲ್ ರೆಡ್ಡಿಯವರಿಗೆ ಭಡ್ತಿ ನೀಡಲಾಗಿದೆ. ಅವರ ಹೆಗಲಿಗೆ ಮಹತ್ವದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯನ್ನು ಹೊರಿಸಲಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವರಾಗಿದ್ದ ಮುರಳಿ ದಿಯೋರಾ ಅವರಿಗೆ ಕಾರ್ಪೊರೇಟ್ ವ್ಯವಹಾರಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ.
ಸಲ್ಮಾನ್ ಖುರ್ಷೀದ್... ಕಾರ್ಪೊರೇಟ್ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾಗಿದ್ದ ಸಲ್ಮಾನ್ ಖುರ್ಷೀದ್ ಅವರ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಜಲ ಸಂಪನ್ಮೂಲದ ಜತೆಗೆ ಅವರಿಗೀಗ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅವರೀಗ ಕ್ಯಾಬಿನೆಟ್ ಸಚಿವ.
ದೇಶ್‌ಮುಖ್‌ಗೆ ಹೆಚ್ಚುವರಿ... ಗ್ರಾಮೀಣಾಭಿವೃದ್ಧಿ ಮತ್ತು ಘನ ಕೈಗಾರಿಕೆಗಳ ಸಚಿವರಾಗಿದ್ದ ವಿಲಾಸ್‌ರಾವ್ ದೇಶ್‌ಮುಖ್ ಅವರಿಗೆ ಪಂಚಾಯತ್ ರಾಜ್ ಖಾತೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಆದರೆ ಘನ ಕೈಗಾರಿಕೆಯನ್ನು ಅವರಿಂದ ಹಿಂದಕ್ಕೆ ಪಡೆಯಲಾಗಿದೆ.
ನಗರಾಭಿವೃದ್ಧಿ ಕಮಲನಾಥ್‌ಗೆ... ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆಯ ಜವಾಬ್ದಾರಿ ಹೊತ್ತಿದ್ದ ಕಮಲನಾಥ್ ಅವರನ್ನು ನಗರಾಭಿವೃದ್ಧಿ ಖಾತೆಗೆ ವರ್ಗಾವಣೆ ಮಾಡಲಾಗಿದೆ.
ವಯಲಾರ್ ರವಿಗೆ ವಿಮಾನ... ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಅವರಿಗೆ ನಾಗರಿಕ ವಾಯುಯಾನ ಖಾತೆ ಸಚಿವಾಲಯದ ಹೊಣೆಗಾರಿಕೆಯನ್ನು ವಹಿಸಲಾಗಿದೆ.
ಸಿಬಲ್ ಹೊರೆ ಕಡಿಮೆ... ಮಾನವ ಸಂಪನ್ಮೂಲಾಭಿವೃದ್ಧಿ ಸಚಿವರಾಗಿದ್ದ ಕಪಿಲ್ ಸಿಬಲ್ ಅವರಿಗೆ, ಸ್ಪೆಕ್ಟ್ರಂ ರಾಜಾ ರಾಜೀನಾಮೆ ನೀಡಿದ ನಂತರ ದೂರಸಂಪರ್ಕ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ಅವರಿಂದ ಕಿತ್ತುಕೊಳ್ಳಲಾಗಿದೆ.
ಜೈರಾಮ್ ರಮೇಶ್... ಕರ್ನಾಟಕ ಮೂಲದ ಕೇಂದ್ರ ಸಚಿವ ಜೈರಾಮ್ ರಮೇಶ್ ಖಾತೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕುಲಾಂತರಿ ಬದನೆ ವಿವಾದದಲ್ಲಿ ಭಾರೀ ಸುದ್ದಿಯಾಗಿದ್ದ ಅವರು ಪರಿಸರ ಖಾತೆಯಲ್ಲೇ ಮುಂದುವರಿದಿದ್ದಾರೆ.
ಗಿಲ್‌ಗೆ ಕೊಕ್... ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ಎಂ.ಎಸ್. ಗಿಲ್ ಅವರನ್ನು ಕ್ಯಾಬಿನೆಟ್‌ನಿಂದ ಹೊರ ದಬ್ಬಲಾಗಿದೆ. ಅವರನ್ನು ಅಂಕಿ-ಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯಕ್ಕೆ (ಸ್ವತಂತ್ರ ಖಾತೆ) ಹಿಂಬಡ್ತಿ ನೀಡಲಾಗಿದೆ.
ಇತರೆ ಸಚಿವರು... ಶ್ರೀ ಪ್ರಕಾಶ್ ಜೈಸ್ವಾಲ್ ಅವರನ್ನು ಕಲ್ಲಿದ್ದಲು ಖಾತೆ ಸಚಿವರನ್ನಾಗಿ, ಅಜಯ್ ಮೇಕನ್ ಅವರನ್ನು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಬೆನಿ ಪ್ರಸಾದ್ ವರ್ಮಾಗೆ ಉಕ್ಕು ಖಾತೆ, ಪ್ರೊಫೆಸರ್ ಕೆ.ವಿ. ಥಾಮಸ್ ಅವರಿಗೆ ಗ್ರಾಹಕರ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯನ್ನು ನೀಡಲಾಗಿದೆ.
ಅಶ್ವಿನ್ ಕುಮಾರ್‌ಗೆ ಯೋಜನಾ ಮತ್ತು ಸಂಸದೀಯ ವ್ಯವಹಾರಗಳ ಖಾತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಹಾಗೂ ಕೆ.ಸಿ. ವೇಣುಗೋಪಾಲ್‌ಗೆ ವಿದ್ಯುತ್ ಖಾತೆ ಜವಾಬ್ದಾರಿ ವಹಿಸಲಾಗಿದೆ.
ಡಿಎಂಕೆ-ಟಿಎಂಸಿಗೆ ಕಿಮ್ಮತ್ತಿಲ್ಲ... ಎ. ರಾಜಾ ರಾಜೀನಾಮೆಯಿಂದ ತೆರವಾಗಿದ್ದ ಕ್ಯಾಬಿನೆಟ್ ಸ್ಥಾನ ಸೇರಿದಂತೆ ಮಿತ್ರಪಕ್ಷಗಳಾದ ಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್‌ಗೆ ಕನಿಷ್ಠ ಎರಡೆರಡು ಸ್ಥಾನಗಳನ್ನು ನೀಡಲಾಗುತ್ತದೆ ಎಂಬ ಸುದ್ದಿ ಸುಳ್ಳಾಗಿದೆ.
ಕ್ಯಾಬಿನೆಟ್‌ನಲ್ಲಿ ಕನಿಷ್ಠ ಒಂದು ಸ್ಥಾನ ಬೇಕು ಎಂದು ಮಮತಾ ಬ್ಯಾನರ್ಜಿ ಪಟ್ಟು ಹಿಡಿದಿದ್ದರು. ಎಂ. ಕರುಣಾನಿಧಿಯವರ ಡಿಎಂಕೆ ಕೂಡ ರಾಜಾ ಬದಲಿ ಸ್ಥಾನವನ್ನು ತನ್ನವರಿಗೆ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿತ್ತು.
ಆದರೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಲಗಳಲ್ಲಿನ ಚುನಾವಣೆಗಳ ನಂತರವಷ್ಟೇ ಈ ಪಕ್ಷಗಳಿಗೆ ಸಂಪುಟದಲ್ಲಿ ಹೆಚ್ಚುವರಿ ಅಥವಾ ಕಳೆದುಕೊಂಡ ಸ್ಥಾನಗಳನ್ನು ನೀಡಲು ಯುಪಿಎ ನಿರ್ಧರಿಸಿದೆ.