ಇದು ಯಾವ ಬಾಲಿವುಡ್ ಮಸಾಲೆ ಸಿನಿಮಾಕ್ಕೂ ಕಡಿಮೆಯಿಲ್ಲದ ನೈಜ ಕಥೆ. ಯಾರೋ ಪರಿಚಯವಿಲ್ಲದ ವ್ಯಕ್ತಿಯೊಬ್ಬನ ಜತೆ ನಿಕಟ ಸಂಬಂಧ ಬೆಳೆಸಿ, ಕೊನೆಗೊಂದು ದಿನ ಆತನ ಸಲಹೆಯಂತೆ ಗಂಡ-ಮಕ್ಕಳಿಗೆ ವಿಷಪ್ರಾಶನ ಮಾಡಿ, ಮನೆಯಲ್ಲಿದ್ದ ಒಡವೆಯೊಂದಿಗೆ ಪರಾರಿಯಾದ ಪತ್ನಿಗೆ ಅದೇ ರೀತಿಯಲ್ಲಿ ಪ್ರಿಯಕರನೂ ಮೋಸ ಮಾಡಿದ ಪ್ರಸಂಗವಿದು.
ಇದು ಇಂಟರ್ನೆಟ್ ಪ್ರೀತಿಯ ಮಾಯೆ. ಸಾಮಾಜಿಕ ಸಂಪರ್ಕತಾಣ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದವರು, ರೊಮ್ಯಾನ್ಸ್ ಮಾಡಿ ಮದುವೆಯಾಗುವ ತೀರ್ಮಾನಕ್ಕೂ ಬಂದಿದ್ದರು. ಹಾಗೆಂದು ವಿವಾಹಿತ ಮಹಿಳೆ ಅಂದುಕೊಂಡಿದ್ದಳು. ಆದರೆ ಕೊನೆಗೆ ನಡೆದದ್ದೇ ಬೇರೆ. ಹಿಂದೆ-ಮುಂದೆ ನೋಡದೆ ಮಾಡಿದ ಪಾಪದಿಂದ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡು ಜೈಲಿನಲ್ಲಿ ಸೊಳ್ಳೆ ಕಚ್ಚಿಸಿಕೊಳ್ಳುತ್ತಿದ್ದಾಳೆ.
ನಾನು ಎನ್ಆರ್ಐ ಎಂದಿದ್ದ... ಸುಮಾರು ಒಂದೂವರೆ ವರ್ಷ ಹಿಂದೆ ಆರಂಭವಾಗಿದ್ದ ಪ್ರೀತಿಯಿದು. ಪಶ್ಚಿಮ ದೆಹಲಿಯ ಚಿನ್ನಾಭರಣ ವ್ಯಾಪಾರಿ ಸಮೀರ್ ಸ್ವಹಾನೆ ಪತ್ನಿ ರಾಖಿ ಎಂಬಾಕೆ, ತನ್ನ ಫೇಸ್‌ಬುಕ್ ಖಾತೆಗೆ ಬಂದ ರಾಹುಲ್ ಕುಮಾರ್ ಎಂಬಾತನ 'ಫ್ರೆಂಡ್‌ಶಿಪ್ ರಿಕ್ವೆಸ್ಟ್'ನ್ನು ಎಲ್ಲರಂತೆ ಸ್ವೀಕರಿಸಿದ್ದಳು. ಆದರೆ, ಅದು ಅಷ್ಟಕ್ಕೆ ನಿಲ್ಲದೆ ಮುಂದುವರಿದಿತ್ತು.
ತಾನು ಬ್ರಿಟನ್ ಮೂಲದ ಅನಿವಾಸಿ ಭಾರತೀಯ ಎಂದು ಪರಿಚಯಿಸಿಕೊಂಡಿದ್ದ ರಾಹುಲ್, ತಾನೀಗ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ. ನನಗೆ ಅಮೆರಿಕಾದಲ್ಲಿ ಕೆಲವು ಹೊಟೇಲುಗಳಿವೆ. ಇತರ ವ್ಯವಹಾರ ಕೂಡ ಇದೆ ಎಂದು ಹೇಳಿದ್ದ ಆತನನ್ನು ನಂಬಿದ್ದ ಎರಡು ಮಕ್ಕಳ ತಾಯಿ ರಾಖಿ, ಆತನ ಜತೆ ಡೇಟಿಂಗ್ ಆರಂಭಿಸಿದ್ದಳು. ಸಾಕಷ್ಟು ಕಡೆ ಕದ್ದು-ಮುಚ್ಚಿ ಸುತ್ತಾಡಿ ರೊಮ್ಯಾನ್ಸ್ ಮಾಡಿದ್ದಳು.
ತನ್ನ ಮಕ್ಕಳಿಗೇ ವಿಷ ಉಣ್ಣಿಸಿದಳು... ಸಂಬಂಧ ಗಾಢವಾಗುತ್ತಿದ್ದಂತೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅಷ್ಟರಲ್ಲಿ ರಾಹುಲ್ ಯೋಜನೆಯೊಂದನ್ನು ಸಿದ್ಧಪಡಿಸಿದ್ದ. ರಾಖಿ ಕುಟುಂಬವನ್ನು ನಾಶ ಮಾಡುವುದು ಆತನ ಉದ್ದೇಶವಲ್ಲದಿದ್ದರೂ, ಆ ಮೂಲಕ ಶ್ರೀಮಂತನಾಗುವುದು ಬಯಕೆಯಾಗಿತ್ತು.
ಇದನ್ನು ಅರಿಯದ ರಾಖಿ, ಆತ ಹೇಳಿದಂತೆ ನಡೆದುಕೊಂಡಳು. ಇಡೀ ಕುಟುಂಬಕ್ಕೆ ವಿಷಪ್ರಾಶನ ಮಾಡು ಎಂದಾಗ ಕೊಂಚ ಅಳುಕಿದರೂ, ನಂತರ ಸುಧಾರಿಸಿಕೊಂಡು ಹಾಗೆಯೇ ಮಾಡುವುದಾಗಿ ಹೇಳಿದಳು. ಆದರೆ ಅದರಿಂದ ಗಂಡ ಸಮೀರ್ ಮಾತ್ರ ಪಾರಾಗಿದ್ದ.
ಆಕೆ ಇಡೀ ಕುಟುಂಬಕ್ಕೆ ಆಹಾರದಲ್ಲಿ ವಿಷ ಹಾಕಿದ ದಿನ ಗಂಡ ಸಮೀರ್ ಹೊರಗಡೆ ಊಟ ಮುಗಿಸಿ ಬಂದಿದ್ದ. ಆದರೆ ಸಮೀರ್-ರಾಖಿ ದಂಪತಿಯ ಇಬ್ಬರು ಪುಟ್ಟ ಮಕ್ಕಳು ಅದೇ ವಿಷಪೂರಿತ ಆಹಾರವನ್ನು ಸೇವಿಸಿ ಪ್ರಜ್ಞೆ ಕಳೆದುಕೊಂಡರು. ತಕ್ಷಣವೇ ಸಮೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಬದುಕಿಸಿದ್ದ.
ತಿರುಗುಬಾಣವಾಯ್ತು... ಪ್ರಿಯಕರ ರಾಹುಲ್ ಹೇಳಿದಂತೆ ವಿಷಪ್ರಾಶನ ಮಾಡಿದ ನಂತರ ಐದು ಲಕ್ಷ ರೂಪಾಯಿ ನಗದು, ಚಿನ್ನ-ವಜ್ರದ ಒಡವೆಗಳೊಂದಿಗೆ ರಾಖಿ ಗಂಡನ ಮನೆಯಿಂದ ಕಾಲ್ಕಿತ್ತಿದ್ದಳು.
ಅಲ್ಲಿಂದ ನೇರವಾಗಿ ಹೋಗಿದ್ದು ರಾಹುಲ್ ಹೇಳಿದ್ದ ಜಾಗಕ್ಕೆ. ಆಕೆಯನ್ನು ಬೇರೊಂದು ಕಡೆಗೆ ಕರೆದುಕೊಂಡು ಹೋದ ರಾಹುಲ್, ಆಕೆ ತನ್ನ ಗಂಡ ಮತ್ತು ಮಕ್ಕಳಿಗೆ ಮಾಡಿದ್ದನ್ನೇ ಆಕೆಯ ಮೇಲೂ ಪ್ರಯೋಗಿಸಿದ. ಅಮಲು ಪದಾರ್ಥಗಳನ್ನು ಊಟದಲ್ಲಿ ಹಾಕಿ ರಾಖಿಗೆ ಕೊಟ್ಟಿದ್ದ. ಆಕೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಹಣ ಮತ್ತು ಒಡವೆಯೊಂದಿಗೆ ಪರಾರಿಯಾಗಿದ್ದ.
ಈ ನಡುವೆ ರಾಖಿಯ ಬಡಪಾಯಿ ಗಂಡ ಸಮೀರ್ ಪೊಲೀಸರಿಗೆ ದೂರು ನೀಡಿದ್ದ. ಮೊಬೈಲ್ ಕರೆ ದಾಖಲೆಗಳನ್ನು ಆಧರಿಸಿ ಹೊಟೇಲೊಂದರಲ್ಲಿ ರಾಖಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಈಗ ರಾಹುಲ್ ಜಾತಕವನ್ನು ಅಧ್ಯಯನ ಮಾಡುತ್ತಿದ್ದಾರೆ.
ಅವರ ಪ್ರಕಾರ ಈ ರಾಹುಲ್ ಸಾಮಾನ್ಯನಲ್ಲ. ಈ ಹಿಂದೆಯೂ ಇದೇ ರೀತಿಯಲ್ಲಿ ಹಲವರಿಗೆ ಮೋಸ ಮಾಡಿರುವ ಟ್ರ್ಯಾಕ್ ರೆಕಾರ್ಡ್ ಹೊಂದಿರುವಾತ. ಆತನ ವಿರುದ್ಧ ದೆಹಲಿಯ ಹತ್ತಾರು ಕಡೆ ಪ್ರಕರಣಗಳು ದಾಖಲಾಗಿವೆ.