ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ವಾಮಿಗೆ ಮಾನವೀಯತೆಯ ಪಾಠ ಕಲಿಸಿದ್ದು ಅಬ್ದುಲ್ ಕಲೀಮ್? (Abdul Kaleem | Swami Aseemanand | Mecca Masjid blast | RSS)
Bookmark and Share Feedback Print
 
PTI
ಕಂಡ ಕಂಡವರನ್ನು ದೋಚುತ್ತಿದ್ದ ಯುವಕ ರತ್ನ ನಾರದರ ಪ್ರಭಾವದಿಂದ ವಾಲ್ಮೀಕಿ ಮಹರ್ಷಿಯಾಗಿ ಬದಲಾದ. ಅದೇ ರೀತಿ ದೇಶದಲ್ಲಿ ದುಷ್ಕೃತ್ಯಗಳನ್ನು ನಡೆಸಿದ ಆರೋಪಗಳನ್ನು ಹೊತ್ತಿರುವ ಸ್ವಾಮಿ ಅಸೀಮಾನಂದರು ಜೈಲಿನಲ್ಲಿ ಅಬ್ದುಲ್ ಕಲೀಮ್ ಎಂಬ ಮುಸ್ಲಿಂ ಯುವಕನಿಂದಾಗಿ ಮಾನವೀಯತೆಯ ಪಾಠಗಳನ್ನು ಕಲಿತರೇ? ಕಲೀಮನಿಂದಾಗಿ ಅಸೀಮಾನಂದರ ಮನಪರಿವರ್ತನೆಯಾಯಿತೇ?

ಇದನ್ನೂ ಓದಿ: ಹಿಂದೂಗಳಿಂದ ಸಂಜೋತಾ ಸ್ಫೋಟ; ಒಪ್ಪಿಕೊಂಡ ಸ್ವಾಮಿ?

ಆರೆಸ್ಸೆಸ್ ಜತೆ ಸಂಬಂಧ ಹೊಂದಿರುವ ಸ್ವಾಮಿ ಅಸೀಮಾನಂದ್ ಅವರು ಸಂಜೋತಾ ಎಕ್ಸ್‌ಪ್ರೆಸ್, ಮೆಕ್ಕಾ ಮಸೀದಿ ಮತ್ತು ಅಜ್ಮೀರ್ ಸ್ಫೋಟ ಪ್ರಕರಣಗಳಲ್ಲಿ ಈಗ ಆರೋಪಿ. ಇದಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಅವರನ್ನು ಬಂಧಿಸಲಾಗಿತ್ತು. ಹೌದು, ನಾನು ತಪ್ಪು ಮಾಡಿದ್ದೇನೆ ಎಂದು ಸ್ವಾಮಿ ಸಿಬಿಐ ಮುಂದೆ ತಪ್ಪೊಪ್ಪಿಗೆ ನೀಡಿದ್ದರು ಎಂದು ಕೆಲ ದಿನಗಳ ಹಿಂದಷ್ಟೇ ಮಾಧ್ಯಮ ವರದಿಗಳು ಹೇಳಿದ್ದವು.

ಈ ರೀತಿಯಾಗಿ ತಪ್ಪೊಪ್ಪಿಗೆ ನೀಡಲು ಕಾರಣನಾಗಿದ್ದು ಕಲೀಮ್. ಅದರಲ್ಲೂ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಮುಸ್ಲಿಂ ಹುಡುಗ ಕಲೀಮ್ ಸ್ವಾಮಿಯವರ ಮನ ಪರಿವರ್ತನೆ ಮಾಡಿದ್ದ ಎನ್ನುವುದೀಗ ಭಾರೀ ಪ್ರಚಾರ ಪಡೆದುಕೊಳ್ಳುತ್ತಿದೆ. ಈ ಕುರಿತು ಕಲೀಮ್ ಏನು ಹೇಳಿದ್ದಾನೆ ಎಂಬುದನ್ನು ಆತನ ಮಾತುಗಳಲ್ಲೇ ನೋಡೋಣ.

'ಮೆಕ್ಕಾ ಮಸೀದಿ ಸ್ಫೋಟ ಸಂಬಂಧ ಸ್ವಾಮಿ ಅಸೀಮಾನಂದ ಎಂಬ ವ್ಯಕ್ತಿಯನ್ನು ಸಿಬಿಐ ಬಂಧಿಸಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ ಎಂದು ನಾನು ಅವರನ್ನು ಭೇಟಿಯಾಗುವುದಕ್ಕೂ ಮೊದಲು ನನಗೆ ತಿಳಿದು ಬಂತು. ಆದರೆ ಅವರು ಕೆಲ ದಿನಗಳ ಕಾಲ ಮಾತ್ರ ಈ ಜೈಲಿನಲ್ಲಿರುತ್ತಾರೆ. ಅವರನ್ನು ಸಿಬಿಐ ವಿಚಾರಣೆಗೆ ಕರೆದೊಯ್ಯಲಿದೆ ಎಂಬ ಮಾಹಿತಿ ನನಗೆ ಗೊತ್ತಾಯಿತು'

'ಹೀಗೆ ಜೈಲಿನಲ್ಲಿರುವ ಹೊತ್ತಿನಲ್ಲಿ ಅಸೀಮಾನಂದರು, ಜೈಲಿನಲ್ಲಿರುವ ಇತರ ಕೈದಿಗಳ ಕುರಿತು ಅಧಿಕಾರಿಗಳಲ್ಲಿ ವಿಚಾರಿಸಿದ್ದರು. ನನ್ನ ಬಗ್ಗೆಯೂ ತಿಳಿದುಕೊಂಡರು. 2007ರ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ತಾನು ಜೈಲಿಗೆ ಬಂದಿದ್ದೇನೆ, 18 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದೇನೆ ಎಂದು ಯಾರೋ ಅವರಿಗೆ ಹೇಳಿದರು. ಇದನ್ನು ಕೇಳಿದ ಅವರಿಗೆ, ಸ್ವತಃ ನಾನೇ (ಅಸೀಮಾನಂದ್) ಬಂಧನಕ್ಕೊಳಗಾಗಿರುವ ಪ್ರಕರಣದಲ್ಲಿ ಹುಡುಗ (ಕಲೀಮ್) ಜೈಲು ಸೇರಿದ್ದಾನಲ್ಲ ಎಂದು ಕೊರಗಿದರು. ಜತೆಗೆ ನನ್ನಂತಹ ಇತರ ಕೆಲವರ ದುರವಸ್ಥೆಯೂ ತಿಳಿಯಿತು'

'ಚರಲಪಲ್ಲಿ ಜೈಲಿನಲ್ಲಿರುವ ನನ್ನ ಅಣ್ಣ ಶೇಖ್ ಖ್ವಾಜಾಗೆ ಮೊಬೈಲ್ ಪೂರೈಸಿದ ಸುಳ್ಳು ಆರೋಪದ ಮೇಲೆ ನನ್ನನ್ನು ಅಕ್ಟೋಬರ್ 30ರಂದು ಎರಡನೇ ಬಾರಿ ಬಂಧಿಸಿ, ಚಂಚಲಗುಡಾ ಜೈಲಿನಲ್ಲಿ ಇಡಲಾಯಿತು'

'ಡಿಸೆಂಬರ್ ತಿಂಗಳಲ್ಲಿ ನಾನು ಸ್ವಾಮಿ ಅಸೀಮಾನಂದರನ್ನು ಜೈಲಿನಲ್ಲಿ ಭೇಟಿಯಾದೆ. ಅವರೇ ಮುಂದಾಗಿ ನನ್ನ ಜತೆ ಮಾತನಾಡಿದರು. ನನ್ನ ಜತೆ ಯಾಕೆ ಮಾತನಾಡುವುದಿಲ್ಲ ಎಂದು ನನ್ನಲ್ಲಿ ಪ್ರಶ್ನಿಸಿದರು. ನನ್ನ ಕೃತ್ಯಗಳಿಂದಾಗಿ ನೀನು ಮತ್ತು ನಿನ್ನ ಕುಟುಂಬ ದುರ್ದೆಸೆ ಅನುಭವಿಸುತ್ತಿರುವುದಕ್ಕೆ ನನ್ನನ್ನು ಕ್ಷಮಿಸು ಎಂದರು. ನೀವು ನನ್ನಲ್ಲಿ ಕ್ಷಮೆ ಕೇಳಬೇಡಿ, ಸ್ಫೋಟದಲ್ಲಿ ಬಲಿಯಾದ ಎಲ್ಲಾ ಅಮಾಯಕರ ಕುಟುಂಬಗಳನ್ನು ಮತ್ತು ಇದೇ ಪ್ರಕರಣದಲ್ಲಿ ಚಿತ್ರಹಿಂಸೆ ಅನುಭವಿಸಿದ, ಜೈಲು ಸೇರಿದ ಯುವಕರ ಕ್ಷಮೆ ಕೇಳಿ ಎಂದು ನಾನು ಅವರಿಗೆ ಹೇಳಿದೆ'

'ನಾನು ಪ್ರತಿಯೊಬ್ಬರಲ್ಲೂ ಕ್ಷಮೆ ಯಾಚಿಸುತ್ತೇನೆ. ಕೇವಲ ಹೈದರಾಬಾದ್ ಮಾತ್ರವಲ್ಲ, ಇತರ ಜಾಗಗಳಲ್ಲಿನ ಬಲಿಪಶುಗಳಲ್ಲಿಗೂ ತೆರಳಿ ಪ್ರತ್ಯೇಕವಾಗಿ ಕ್ಷಮೆ ಯಾಚಿಸುತ್ತೇನೆ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡು, ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ. ನಾನು ಜೈಲಿನಲ್ಲೇ ಸಾಯುವಂತಾದರೆ, ನನ್ನ ಎಲ್ಲಾ ಅಂಗಾಗಗಳನ್ನು ಮಾರಾಟ ಮಾಡಬೇಕು ಮತ್ತು ಅದರಿಂದ ಬರುವ ಹಣವನ್ನು ಸ್ಫೋಟದ ಬಲಿಪಶುಗಳ ಕುಟುಂಬಕ್ಕೆ ನೀಡಬೇಕು ಎಂದು ಮೊದಲೇ ವಿಲ್ ಬರೆಯುತ್ತೇನೆ. ಒಂದು ವೇಳೆ ಬಿಡುಗಡೆಯಾದರೆ, ಆ ಕುಟುಂಬಗಳ ಸೇವೆ ಮಾಡುತ್ತೇನೆ ಎಂದು ಹೇಳಿದರು'

'ನಾನು ಮತ್ತು ಅಸೀಮಾನಂದರು ಕನಿಷ್ಠ ನಾಲ್ಕು ಬಾರಿ ಭೇಟಿಯಾಗಿದ್ದೇವೆ. 10ರಿಂದ 12 ಗಂಟೆ ಪರಸ್ಪರ ಮಾತುಕತೆ ನಡೆಸಿದ್ದೇವೆ. ಆಹಾರ ಮತ್ತು ಬಿಸ್ಕತ್ತುಗಳನ್ನು ಹಂಚಿಕೊಂಡಿದ್ದೇವೆ. ಸ್ಫೋಟ ಪ್ರಕರಣದಲ್ಲಿ ಪೊಲೀಸರು ನನ್ನ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಿರುವುದನ್ನು ಅವರಿಗೆ ಹೇಳಿದೆ. ನನ್ನಂತೆ ಹಲವು ಮಂದಿ ಜೈಲಿನಲ್ಲಿದ್ದಾರೆ. ಸ್ಫೋಟದಿಂದಾಗಿ ಹಲವು ಕುಟುಂಬಗಳು ಬೀದಿ ಪಾಲಾಗಿವೆ ಎಂದು ಹೇಳಿದೆ. ಆಗೆಲ್ಲ ಅವರು ಮಕ್ಕಳಂತೆ ಅಳುತ್ತಿದ್ದರು. ಕೆಲವೊಮ್ಮೆ ಮೌನವಾಗಿರುತ್ತಿದ್ದರು. ಆದರೆ ಅವರು ತನ್ನ ಕೃತ್ಯಗಳಿಂದ ನೊಂದಿರುವುದು ಮತ್ತು ಪ್ರಶ್ಚಾತಾಪಪಡುತ್ತಿರುವುದು ಸ್ಪಷ್ಟವಾಗಿತ್ತು'

'ಮಾಧ್ಯಮಗಳು ಬಣ್ಣಿಸುತ್ತಿರುವಂತೆ ಅಸೀಮಾನಂದರ ಬದಲಾವಣೆಯ ಕೀರ್ತಿಗೆ ನಾನು ಅರ್ಹನಲ್ಲ. ಅಸೀಮಾನಂದಜೀ ಅವರನ್ನು ಬದಲಾಯಿಸಲು ನನ್ನನ್ನು ಅಲ್ಲಾಹು ಬಳಸಿಕೊಂಡಿದ್ದಾನೆ. ಅದಕ್ಕಾಗಿ ಸಂತೋಷವಿದೆ. ನನ್ನ ನಂಬಿಕೆಯ ಪ್ರಕಾರ, ನಾನು ಎರಡನೇ ಬಾರಿ ಜೈಲಿಗೆ ಹೋಗುವಂತಾಗಲು ಕಾರಣ ದೇವರು. ಯಾಕೆಂದರೆ, ನಾನು ಸ್ವಾಮಿಯನ್ನು ಭೇಟಿ ಮಾಡಬೇಕು ಮತ್ತು ಅವರ ಕಣ್ಣು ತೆರೆಸಬೇಕು ಎನ್ನುವುದು ಅಲ್ಲಾಹುವಿನ ಬಯಕೆಯಾಗಿತ್ತು'

'ಅವರು ಈಗಾಗಲೇ ಸಾಕಷ್ಟು ನೋವುಂಡಿದ್ದಾರೆ. ಇದಕ್ಕಿಂತ ಶಿಕ್ಷೆ ಬೇರೆ ಬೇಕಿಲ್ಲ. ಅವರಿಗೆ ನ್ಯಾಯಾಲಯವು ಶಿಕ್ಷೆ ನೀಡಿದರೆ ನಿಜಕ್ಕೂ ಅದು ನನಗೆ ತೀವ್ರ ನೋವನ್ನುಂಟು ಮಾಡುತ್ತದೆ. ತಪ್ಪನ್ನು ಒಪ್ಪಿಕೊಂಡು ಬದಲಾವಣೆಯನ್ನು ಬಯಸಿದವರಿಗೆ ಅವಕಾಶ ನೀಡಬೇಕು. ಅವರನ್ನು ಬಿಡುಗಡೆ ಮಾಡಬೇಕು. ಖಂಡಿತಾ ಅವರು ಹಿಂದೂ ಮತ್ತು ಮುಸ್ಲಿಮರು ಜತೆಯಾಗಿ ಬಾಳುವಂತೆ ಮಾಡುವಲ್ಲಿ ಶ್ರೇಷ್ಠ ಶ್ರಮವಹಿಸುತ್ತಾರೆ ಎಂಬ ಭರವಸೆ ನನ್ನಲ್ಲಿದೆ'

ಯಾರೀತ ಕಲೀಮ್?
ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಶಂಕಿತ ಎಂದು ಕಲೀಮ್‌ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಆತನ ವಿರುದ್ಧದ ಆರೋಪಗಳು ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಕೆಲ ತಿಂಗಳ ನಂತರ ಬಿಡುಗಡೆಯಾಗಿದ್ದ.

ಆದರೆ ಜೈಲಿನಲ್ಲಿದ್ದ ತನ್ನ ಸಹೋದರನಿಗೆ ಮೊಬೈಲ್ ಪೂರೈಸಿದ ಆರೋಪದ ಮೇಲೆ ಮತ್ತೆ ಕಲೀಮ್‌ನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಪ್ರಸಕ್ತ ಜಾಮೀನು ಪಡೆದಿರುವ ಕಲೀಮ್ ಬಿಡುಗಡೆಯಾಗಿದ್ದಾನೆ.

21ರ ಹರೆಯ ಕಾನೂನು ವಿದ್ಯಾರ್ಥಿಯಾಗಿದ್ದ ಕಲೀಮ್, ಬಂಧನದಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತನಾಗಿದ್ದ. ಆದರೆ ಈಗ ಬಿಡುಗಡೆಯಾಗಿರುವುದರಿಂದ ಮತ್ತೆ ಮುಂದುವರಿಸುವ ಆಸ್ಥೆಯಲ್ಲಿದ್ದಾನೆ. ಸಹಜವೆಂಬಂತೆ ಆತನ ಕುಟುಂಬ ತೀವ್ರ ಸಂತಸದಿಂದಿದೆ.
ಸಂಬಂಧಿತ ಮಾಹಿತಿ ಹುಡುಕಿ