ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಪ್ಪುಹಣ ಮಾಹಿತಿ ಬಹಿರಂಗ ಸಾಧ್ಯವಿಲ್ಲ: ಪ್ರಧಾನಿ ಸಿಂಗ್ (Black money | Manmohan Singh | Supreme Court | India)
Bookmark and Share Feedback Print
 
ತೆರಿಗೆ ವಂಚಿಸಿ ವಿದೇಶಗಳ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿರುವ ಕಪ್ಪು ಹಣದ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವುದು ಸಾಧ್ಯವೇ ಇಲ್ಲ ಎಂದು ಸ್ವತಃ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯರು ಕಪ್ಪುಹಣವನ್ನು ವಿದೇಶಗಳ ಬ್ಯಾಂಕುಗಳಲ್ಲಿ ಇಟ್ಟಿರುವ ಬಗ್ಗೆ ಸರಕಾರದ ನಿಲುವೇನು ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಆ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗ ಮಾಡುವುದು ಸಾಧ್ಯವಿಲ್ಲ. ಹಾಗೆ ಮಾಡಿದಲ್ಲಿ ಅದು ಒಪ್ಪಂದಗಳ ಉಲ್ಲಂಘನೆಯಾಗುತ್ತದೆ ಎಂದು ಪ್ರಧಾನಿ ಉತ್ತರಿಸಿದರು.

'ಕಪ್ಪುಹಣವೆಂದು ಹೇಳಲಾಗುತ್ತಿರುವುದನ್ನು ದೇಶಕ್ಕೆ ಮರಳಿ ತರಲು ತಕ್ಷಣದ ಪರಿಹಾರ ಇಲ್ಲ. ಕಪ್ಪುಹಣದ ಬಗ್ಗೆ ನಮಗೆ ಕೆಲವು ಮಾಹಿತಿಗಳು ಸಿಕ್ಕಿವೆ ಮತ್ತು ಅದನ್ನು ನಾವು ಪಡೆದುಕೊಂಡಿರುವುದು ತೆರಿಗೆ ಸಂಗ್ರಹಕ್ಕೆ ಬಳಸಿಕೊಳ್ಳಲು. ಹಾಗಾಗಿ ಅದನ್ನು ಬೇರೆ ವಿಚಾರಗಳಿಗಾಗಿ ಬಳಸಿಕೊಳ್ಳಲಾಗದು' ಎಂದರು.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (ಒಇಸಿಡಿ) ನಿಯಮಾವಳಿಗಳ ಪ್ರಕಾರ ಕಪ್ಪುಹಣದ ವ್ಯವಹಾರಗಳ ಕುರಿತ ಮಾಹಿತಿಗಳನ್ನು ಹಂಚಿಕೊಳ್ಳುವ ಸಂಬಂಧ ಭಾರತವು ಇದಕ್ಕೆ ಸಂಬಂಧಪಟ್ಟ ದೇಶಗಳೊಡನೆ ಒಪ್ಪಂದ ಮಾಡಿಕೊಂಡಿದ್ದು, ಇದನ್ನು ತೆರಿಗೆ ಸಂಗ್ರಹಕ್ಕೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಹಾಗಾಗಿ ಮಾಹಿತಿಯನ್ನು ಬಹಿರಂಗಪಡಿಸುವುದು ಅಸಾಧ್ಯ ಎಂದು ಸಿಂಗ್ ಹೇಳಿದರು.

ವಿದೇಶದ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಕಪ್ಪುಹಣದ ವಾರಸುದಾರರಾಗಿರುವ ಭಾರತೀಯರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸರಕಾರ ಹೇಳಿದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಿಗೆ ಸ್ವತಃ ಪ್ರಧಾನಿಯೂ ಅದನ್ನೇ ಪುನರುಚ್ಛರಿಸಿದ್ದಾರೆ.

ಅತ್ತ ಬಿಜೆಪಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ. ಕಾಂಗ್ರೆಸ್ ನಾಯಕರ ಹೆಸರುಗಳು ಅದರಲ್ಲಿ ಇರುವುದರಿಂದ ಸರಕಾರ ಅದನ್ನು ಬಹಿರಂಗಪಡಿಸಲು ನಿರಾಕರಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಆರೋಪಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ