ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ; ಸಿಬಲ್ 'ಅಧಿಕ ಪ್ರಸಂಗ'ಕ್ಕೆ ಸುಪ್ರೀಂ ತರಾಟೆ (2G scam | CBI | Supreme Court | Kapil Sibal)
Bookmark and Share Feedback Print
 
ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರು 2ಜಿ ತರಂಗಾಂತರ ಹಂಚಿಕೆ ಹಗರಣದ ಸಿಎಜಿ ವರದಿ ಬಗ್ಗೆ ನೀಡಿರುವ ಹೇಳಿಕೆ ದುರದೃಷ್ಟಕರ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಯಾರದೇ ಹೇಳಿಕೆ ಅಥವಾ ಮಾಧ್ಯಮ ವರದಿಗಳಿಂದ ಪ್ರಚೋದನೆಗೆ ಒಳಗಾಗದೆ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.

2ಜಿ ತರಂಗಾಂತರ ಹಂಚಿಕೆಯಲ್ಲಿ ಸರಕಾರದ ಬೊಕ್ಕಸಕ್ಕೆ ಮೋಸ ಆಗಿಲ್ಲ. ಮಹಾ ಲೇಖಪಾಲರು (ಸಿಎಜಿ) ಈ ಸಂಬಂಧ ನೀಡಿರುವ ವರದಿ ಆಧಾರ ರಹಿತವಾದದ್ದು ಮತ್ತು ತಪ್ಪಾಗಿರುವಂತದ್ದು ಎಂದು ಕಪಿಲ್ ಸಿಬಲ್ ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಸಚಿವರು ಕೊಂಚ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಬುದ್ಧಿವಾದ ಹೇಳಿದೆ.

ಸಿಎಜಿ ವರದಿಯಲ್ಲಿ ಹೇಳಿರುವಂತೆ ಯಾವುದೇ ನಷ್ಟ ಆಗಿಲ್ಲ ಎಂದು ಸಚಿವರು ಹೇಳಿರುವುದು ದುರದೃಷ್ಟಕರ. ಆದರೂ ಆದರೂ ಅವರ ಹೇಳಿಕೆ ಸಿಬಿಐ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರದು ಮತ್ತು ಬೀರಬಾರದು. ತನಿಖೆ ಯಾವುದೇ ಪ್ರಭಾವವಿಲ್ಲದೆ ಮುಂದುವರಿಯಬೇಕು ಎಂದು ಕೋರ್ಟ್ ಆದೇಶಿಸಿದೆ.

2008ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಹರಾಜು ನಡೆಸದೆ 2ಜಿ ತರಂಗಾಂತರಗಳನ್ನು ಕಂಪನಿಗಳಿಗೆ ಹಂಚಿಕೆ ಮಾಡಿತ್ತು. ಇದರಿಂದ ರಾಷ್ಟ್ರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿಗಳು ನಷ್ಟವಾಗಿವೆ ಎಂದು ಸಿಎಜಿ ವರದಿ ನೀಡಿದ ನಂತರ 'ಸ್ಪೆಕ್ಟ್ರಮ್' ರಾಜಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಜಾ ಪದತ್ಯಾಗದ ನಂತರ ದೂರಸಂಪರ್ಕ ಸಚಿವಾಲಯದ ಹೊಣೆಗಾರಿಕೆ ಕಪಿಲ್ ಸಿಬಲ್ ಹೆಗಲ ಮೇಲೆ ಬಿದ್ದಿತ್ತು. ಸರಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರು ಸಿಎಜಿ ವರದಿ ಬಹುದೊಡ್ಡ ಪ್ರಮಾದ ಎಂದು ಹೇಳಿಕೆ ನೀಡಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಿಎಜಿ ವರದಿ ಅಥವಾ 2ಜಿ ಹಗರಣದ ಕುರಿತು ಹೊರ ಬರುವ ಯಾವುದೇ ಹೇಳಿಕೆಗಳನ್ನು ಪರಿಗಣಿಸದೆ, ಯಾರಿಂದಲೂ ಪ್ರಭಾವಕ್ಕೊಳಗಾಗದೆ ಸಿಬಿಐ ತನಿಖೆ ಮುಂದುವರಿಸಬೇಕು ಎಂದು ಜನತಾ ಪಕ್ಷದ ನಾಯಕ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿಯವರನ್ನೊಳಗೊಂಡ ಪೀಠವು ನಿರ್ದೇಶನ ನೀಡಿದೆ.

'2ಜಿ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಮಾಧ್ಯಮ ಸೇರಿದಂತೆ ಯಾರದೇ, ಯಾವುದೇ ಹೇಳಿಕೆಗಳಿಂದ ಪ್ರಭಾವಕ್ಕೊಳಗಾಗದೆ ತನಿಖೆ ನಡೆಸಬೇಕು ಎನ್ನುವುದು ನಮ್ಮ ನಿಲುವು' ಎಂದು ಪೀಠವು ಸ್ಪಷ್ಟಪಡಿಸಿತು.
ಸಂಬಂಧಿತ ಮಾಹಿತಿ ಹುಡುಕಿ