ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಸ್ ದಾಖಲಿಗೆ ಗವರ್ನರ್ ಸಮ್ಮತಿ: ಸಿಎಂ ನೆತ್ತಿಗೆ ತೂಗುಗತ್ತಿ (CM Yaddyurappa | Governor | Hansraj Bharadwaj | Karnataka Politics)
Bookmark and Share Feedback Print
 
ಬೆಂಗಳೂರು: ರಾಜ್ಯ ರಾಜಕೀಯದ ಇತಿಹಾಸದಲ್ಲಿ ಮತ್ತೊಂದು ಅಧ್ಯಾಯದ ಪುಟ ತಿರುವಿದ್ದು, ಭೂಹಗರಣಗಳ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯದ ಗೃಹ ಸಚಿವ ಆರ್.ಅಶೋಕ್ ವಿರುದ್ಧ ಪ್ರಕರಣ ದಾಖಲಿಸಲು ಶುಕ್ರವಾರ ಸಂಜೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿರುವುದರೊಂದಿಗೆ, ರಾಜ್ಯಪಾಲರು ಮತ್ತು ಬಿಜೆಪಿ ಸರಕಾರದ ನಡುವೆ ನಡೆಯುತ್ತಿದ್ದ ತಿಕ್ಕಾಟವು ನಿರ್ಣಾಯಕ ಹಂತಕ್ಕೆ ತಲುಪಿದೆ.

ಕೇಂದ್ರ ಸರಕಾರದ ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿರುವ, ಪ್ರತಿಪಕ್ಷಗಳ ನಾಯಕನಂತೆ ವರ್ತಿಸುತ್ತಿರುವ ರಾಜ್ಯಪಾಲರನ್ನು ರಾಜ್ಯದಿಂದ ಹಿಂದಕ್ಕೆ ಕರೆಸಿಕೊಳ್ಳಿ ಎಂದು ಆಗ್ರಹಿಸಿ ಶನಿವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಲು ಬಿಜೆಪಿ ನಿರ್ಧಾರ ತೆಗೆದುಕೊಳ್ಳುವ ಮುನ್ನವೇ, ಈ ರಾಜಕೀಯದಾಟದಲ್ಲಿ ಆಕ್ರಮಣಕಾರಿಯಾಗಿ ದಾಳ ಚಲಾಯಿಸಿದ್ದಾರೆ ರಾಜ್ಯಪಾಲರು.

ಇದೀಗ, ಭ್ರಷ್ಟಾಚಾರ ನಿರೋಧಕ ಕಾಯಿದೆಯ ಅನ್ವಯ ಸಿಎಂ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲ ಭಾರದ್ವಾಜ್ ಅನುಮತಿ ನೀಡಿರುವುದರಿಂದ, ಯಡಿಯೂರಪ್ಪ ಅವರ ಕುರ್ಚಿಯ ಮೇಲೆ ತೂಗುಗತ್ತಿ ನೇತಾಡುತ್ತಿದೆ. ವಕೀಲರ ನಿಯೋಗವು ಈ ಅನುಮತಿಯೊಂದಿಗೆ ವಿಶೇಷ ಕೋರ್ಟಿನ ಮೊರೆ ಹೋಗಿ, ಇನ್ನೆರಡು ದಿನಗಳಲ್ಲಿ ಯಡಿಯೂರಪ್ಪ ವಿರುದ್ಧ ಕೇಸು ದಾಖಲು ಮಾಡುವ ನಿರೀಕ್ಷೆ ಇದೆ.

ಸಿಎಂ ರಾಜೀನಾಮೆಗೆ ಒತ್ತಡ...
ಈ ನಡುವೆ, ರಾಜ್ಯದ ಇತಿಹಾಸದಲ್ಲೇ ಇದು ಪ್ರಥಮ ಪ್ರಕರಣವಾಗಿರುವುದರಿಂದ ಸಿಎಂ ರಾಜೀನಾಮೆಗೆ ಒತ್ತಡ ಹೆಚ್ಚಾಗಬಹುದಾಗಿದೆ. ಈ ನಿರ್ಧಾರವು ಬಿಜೆಪಿ ವಲಯದಲ್ಲಿ ಶಾಕ್ ಮೂಡಿಸಿದೆಯಾದರೂ, ಇಂತಹಾ ರಾಜ್ಯಪಾಲರಿಂದ ಈ ಕ್ರಮ ನಿರೀಕ್ಷಿತವೇ ಎಂದೇ ಬಿಜೆಪಿ ನಾಯಕರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿಯ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರಿನ ಜಸ್ಟೀಸ್ ಲಾಯರ್ ಫೋರಂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಈ ಮನವಿಗೆ ರಾಜ್ಯಪಾಲರು ಅನುಮತಿ ನೀಡಬಾರದು ಎಂದು ಬುಧವಾರ ಸಚಿವ ಸಂಪುಟ ಸಭೆಯಲ್ಲೇ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಸಲ್ಲಿಸಿತ್ತು.

ಈ ಮೊದಲು, ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಲ್ಲಿ ರಾಜ್ಯ ಬಂದ್ ಮಾಡಲಾಗುತ್ತದೆ ಎಂದೂ ಬಿಜೆಪಿ ಮುಖಂಡರಿಂದ ಹೇಳಿಕೆಗಳು ಬಂದಿದ್ದವು.

ಜಸ್ಟೀಸ್ ಲಾಯರ್ ಫೋರಂ 2010ರ ಡಿಸೆಂಬರ್ 28ರಂದು ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕೆಂದು ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದ ನಂತರ, ಈ ಬಗ್ಗೆ ಸರಕಾರದಿಂದ ವಿವರಣೆ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು.

ಕಾನೂನು ಪಂಡಿತರು ಏನು ಹೇಳುತ್ತಾರೆ?
ಒಂದು ವರ್ಗದ ಕಾನೂನು ತಜ್ಞರ ಪ್ರಕಾರ, ರಾಜ್ಯಪಾಲರು ಯಾವುದೇ ಪ್ರಾಥಮಿಕ ವಿಚಾರಣಾ ವರದಿಯನ್ನು ತರಿಸಿಕೊಳ್ಳದೆ, ಸಿಐಡಿ, ಲೋಕಾಯುಕ್ತ ಅಥವಾ ಬೇರಾವುದೇ ವಿಚಾರಣಾ ಏಜೆನ್ಸಿಗಳ ವರದಿ ನೋಡದೆ, ದಿಢೀರ್ ಆಗಿ ಕೇಸು ದಾಖಲಿಸಲು ಅನುಮತಿ ನೀಡಿದ್ದು ಸರಿಯಲ್ಲ.

ರಾಜ್ಯಪಾಲರ ತೀರ್ಮಾನವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂಬ ನಿಯಮವಿದ್ದರೂ, ಅವರು ತಮ್ಮ ವಿವೇಚನಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಕಂಡುಬಂದರೆ ಅದನ್ನು ಪ್ರಶ್ನಿಸಬಹುದು ಎಂಬ ವಾದವೂ ಇನ್ನೊಂದೆಡೆಯಿಂದ ಕೇಳಿಬರುತ್ತಿದೆ.

ಅರುಣ್ ಜೇಟ್ಲಿ ಪ್ರತಿಕ್ರಿಯೆ
ರಾಜ್ಯಪಾಲರ ಕ್ರಮದ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ, ಭೂಹಗರಣಗಳ ಆರೋಪಗಳ ಕುರಿತು ಈಗಾಗಲೇ ಲೋಕಾಯುಕ್ತ ತನಿಖೆಯೂ, ನ್ಯಾ.ಪದ್ಮರಾಜ್ ಆಯೋಗದ ತನಿಖೆಯೂ ಚಾಲ್ತಿಯಲ್ಲಿದೆ. ಹೀಗಿರುವಾಗ, ಯಾರೋ ಒಂದಿಬ್ಬರು ನಾಗರಿಕರು, ನಾವು ಮುಖ್ಯಮಂತ್ರಿ ವಿರುದ್ಧ ಕೇಸು ದಾಖಲಿಸಲು ಹೋಗುತ್ತಿದ್ದೇವೆ, ದಯವಿಟ್ಟು ಅನುಮತಿ ನೀಡಿ ಎಂದು ಕೇಳಿದಾಕ್ಷಣ, ಯಾವುದೇ ವಿಚಾರಣೆ ಮಾಡದೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಟೀಕಿಸಿದರು.

ಸಿ.ಟಿ.ರವಿ ಪ್ರತಿಕ್ರಿಯೆ
ಈ ಮಧ್ಯೆ, ಟಿವಿ ವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದ ಬಿಜೆಪಿ ಶಾಸಕ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ವಿರುದ್ಧದ ಭೂಹಗರಣ ಆರೋಪದ ಕುರಿತು ಲೋಕಾಯುಕ್ತ ವರದಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲದ ರಾಜ್ಯಪಾಲರು, ಬಿಜೆಪಿ ಮುಖ್ಯಮಂತ್ರಿಯ ವಿರುದ್ಧ ಬಂದ ದೂರಿಗೆ ದಿಢೀರನೆ ಸ್ಪಂದಿಸಿ, ಕ್ರಮ ಕೈಗೊಳ್ಳಲು ಅನುಮತಿ ನೀಡಿರುವುದು ಸರಿಯಲ್ಲ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ