ಹೈದರಾಬಾದ್ ಹೊರವಲಯದ ಶಾಲೆಯೊಂದರಲ್ಲಿ ಶಿಕ್ಷಕನಾಗಿರುವ ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ಮೂರನೇ ತರಗತಿಯ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ, ಆತನಿಗೆ ಸಾರ್ವಜನಿಕರು ಮನಸಾರೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.
ಕುಕತಪಳ್ಳಿ ಎಂಬಲ್ಲಿನ ಪಾಪಿರೆಡ್ಡಿ ನಗರ ಎಂಬಲ್ಲಿನ ಶಾಲೆಯೊಂದರ ಮೂರನೇ ತರಗತಿಯ ವಿದ್ಯಾರ್ಥಿನಿಗೆ 55ರ ಹರೆಯದ ಅಂತೋಣಿ ಕ್ಸೇವಿಯರ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದ. ಇದು ಬಹಿರಂಗವಾದ ನಂತರ ಸಾರ್ವಜನಿಕರು ಶಾಲೆಗೆ ಬಂದು, ಆತನಿಗೆ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದರು.
ಕರ್ನಾಟಕದ ಗುಲ್ಬರ್ಗಾ ನಿವಾಸಿಯಾಗಿರುವ ಅಂತೋಣಿ ಮಂಗಳವಾರ ಶಾಲೆ ಬಿಟ್ಟ ನಂತರ ಸಂಜೆ ಹೊತ್ತು ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳಲು ಯತ್ನಿಸಿದ್ದ.
ಎರಡು ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿರುವ ಅಂತೋಣಿ, ತನ್ನ ಸಹೋದರನ ಮನೆಯಲ್ಲಿ ಉಳಿದುಕೊಂಡಿದ್ದ. ಇಲ್ಲಿನ ಪ್ರಜ್ಞಾ ಪ್ಲೇ ಸ್ಕೂಲ್‌ನಲ್ಲಿ ನಾಲ್ಕನೇ ತರಗತಿಯವರೆಗಿನ ಮಕ್ಕಳಿಗೆ ಈತ ಬೋಧನೆ ಮಾಡುತ್ತಿದ್ದ.
ಶಾಲೆಯ ಪಕ್ಕದಲ್ಲೇ ಇರುವ ತನ್ನ ಕೊಠಡಿಗೆ ಮಂಗಳವಾರ ಸಂಜೆ 4.30ಕ್ಕೆ ಬಾಲಕಿಯನ್ನು ಚಾಕೋಲೇಟ್ ಆಮಿಷ ಒಡ್ಡಿ ಕರೆದೊಯ್ದಿದ್ದ ಈತ, ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ.
ಇದರ ನಂತರ ಮನೆಗೆ ಮರಳಿದ್ದ ಬಾಲಕಿ, ರಾತ್ರಿ 10 ಗಂಟೆ ಹೊತ್ತಿಗೆ ತನಗೆ ಕಿಬ್ಬೊಟ್ಟೆ ನೋಯುತ್ತಿದೆ ಎಂದು ಹೆತ್ತವರಲ್ಲಿ ದೂರಿಕೊಂಡಿದ್ದಳು. ಈ ಬಗ್ಗೆ ಬಾಲಕಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ, ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ್ದು ಬಹಿರಂಗವಾಗಿತ್ತು.
ಮರುದಿನ ಬೆಳಿಗ್ಗೆ ಶಾಲೆಗೆ ತೆರಳಿದ ಬಾಲಕಿಯ ಹೆತ್ತವರು ಮತ್ತು ಸಾರ್ವಜನಿಕರು, ಶಿಕ್ಷಕ ಅಂತೋಣಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿದ್ದಾರೆ.
ಈ ಶಾಲೆಯನ್ನು ಬಂದ್ ಮಾಡಬೇಕು ಮತ್ತು ಪ್ರಾಂಶುಪಾಲರನ್ನು ಬಂಧಿಸಬೇಕು ಎಂದು ಸ್ಥಳೀಯರು ಮತ್ತು ಬಾಲಕಿಯ ಹೆತ್ತವರು ಶಾಲೆಯ ಆವರಣದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.