ಕಚ್ಚಾಟ; ದಿಗ್ವಿಜಯ್ ಚಿಲ್ಲರೆ ನಾಯಕ, ಗಡ್ಕರಿ ಬಿಲಿಯಾಧಿಪತಿ
ನವದೆಹಲಿ, ಶನಿವಾರ, 22 ಜನವರಿ 2011( 11:01 IST )
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್‌ರನ್ನು 'ಚಿಲ್ಲರೆ ನಾಯಕ' ಎಂದು ಲೇವಡಿ ಮಾಡಿರುವುದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ. ಸದಾ ತನ್ನ ಉರಿ ನಾಲಗೆಗೇ ಖ್ಯಾತಿಯಾಗಿರುವ ದಿಗ್ವಿಜಯ್ ಕೂಡ ಸುಮ್ಮನೆ ಕುಳಿತಿಲ್ಲ. ಗಡ್ಕರಿ ಬಿಲಿಯಾಧಿಪತಿ ಎಂದು ಕುಟುಕಿದ್ದಾರೆ. ನಿಜಕ್ಕೂ ಯಾರು ಚಿಲ್ಲರೆ, ಯಾರು ನೋಟು?
ಕೆಲದಿನಗಳ ಹಿಂದಷ್ಟೇ ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದಿಗ್ವಿಜಯ್ ಸಿಂಗ್ ಅವರನ್ನು ಗಡ್ಕರಿ ಹೀಗಳೆದಿದ್ದರು. ಅವರೊಬ್ಬ ಕ್ಷುಲ್ಲಕ ರಾಜಕಾರಣಿ, ಚಿಲ್ಲರೆ ನಾಯಕ ಎಂದು ಜರೆದಿದ್ದರು.
ಇದರಿಂದ ತೀವ್ರ ಅಸಮಾಧಾನಗೊಂಡಿರುವ ದಿಗ್ವಿಜಯ್ ಕೂಡ ತಿರುಗೇಟು ನೀಡಿದ್ದಾರೆ. ತನ್ನ ಹಿಂದೂ ವಿರೋಧಿ ನಿಲುವಿನ ಬಗ್ಗೆಯೂ 'ಹಾಗಲ್ಲ' ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.
ನಾನು 10 ವರ್ಷಗಳ ಕಾಲ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದವ. ಆದರೆ ಗಡ್ಕರಿ ತನ್ನ ಜೀವನದಲ್ಲಿ ಎಂದೂ ಚುನಾವಣೆ ಗೆದ್ದವರಲ್ಲ. ಒಂದೇ ಒಂದು ಬಾರಿ ಮಹಾರಾಷ್ಟ್ರದ ಸಚಿವರಾದವರು. ತಾನು ಸುದೀರ್ಘಾವಧಿಯಲ್ಲಿ ರಾಜಕೀಯದಲ್ಲಿ ಇರುವ ಹೊರತಾಗಿಯೂ ಗಡ್ಕರಿ ಕಣ್ಣಲ್ಲಿ ಚಿಲ್ಲರೆ ನಾಯಕನಾಗಿ ಕಾಣುತ್ತಿದ್ದೇನೆ. ಆದರೆ ನನ್ನ ಕಣ್ಣಿಗೆ ಬಿಜೆಪಿ ಅಧ್ಯಕ್ಷ ಓರ್ವ ಬಿಲಿಯಾಧಿಪತಿಯಾಗಿ ಕಾಣುತ್ತಿದ್ದಾರೆ ಎಂದರು.
ಸಂಘ ಪರಿವಾರದ ಸದಸ್ಯರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಾನು ಏನು ಹೇಳಿದ್ದೇನೋ, ಅದು ನಿಜ ಮತ್ತು ರುಜುವಾತಾಗಲಿದೆ ಎಂಬುದನ್ನು ನನ್ನನ್ನು ಟೀಕಿಸುವವರು ಅರ್ಥ ಮಾಡಿಕೊಳ್ಳಬೇಕು ಎಂದು ಇತ್ತೀಚಿನ ದಿನಗಳಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಪಷ್ಟಪಡಿಸಿದರು.
ತಾನು ಹಿಂದೂ ವಿರೋಧಿ ಎಂಬ ರೀತಿಯಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ನಾನೊಬ್ಬ ಹಿಂದೂ. ನನ್ನ ಹೆಂಡತಿ ಮತ್ತು ಮಕ್ಕಳು ಕೂಡ ಹಿಂದೂಗಳು. ಹಾಗಾಗಿ ನಾನು ಹಿಂದೂಗಳ ವಿರೋಧಿ ಎಂದು ಹೇಳುವುದು ತಪ್ಪಾಗುತ್ತದೆ ಎಂದರು.
ಅಲ್ಲದೆ ತಾನು ಇದುವರೆಗೆ ಮಾತನಾಡಿರುವುದು, ಆರೆಸ್ಸೆಸ್ ಮತ್ತು ಭಯೋತ್ಪದನಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಹಿಂದೂಗಳ ಬಗ್ಗೆ ಮಾತ್ರ ಎಂದು ಹೇಳಿದರು.