ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಇದು ರಾಜಕೀಯ ಪ್ರೇರಿತವಾದುದು ಮತ್ತು ಕಾಂಗ್ರೆಸ್ ಪ್ರಾಯೋಜಿತ ಎಂದು ಆರೋಪಿಸಿದ್ದಾರೆ.
ಚೀನಾ ಪ್ರವಾಸದಲ್ಲಿರುವ ಗಡ್ಕರಿಯವರು ಬೀಜಿಂಗ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಕ್ರಮಕ್ಕೆ ಮುಂದಾಗುವ ಮೂಲಕ ರಾಜ್ಯಪಾಲ ಭಾರದ್ವಾಜ್ ಅವರು ಕಾಂಗ್ರೆಸ್ ಪಕ್ಷದ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಡಿನೋಟಿಫಿಕೇಶನ್ ಮಾಡಿರುವುದು ಮತ್ತು ಕುಟುಂಬದ ಸದಸ್ಯರಿಗೆ ಜಮೀನು ಮಂಜೂರು ಮಾಡಿರುವುದು ಅನೈತಿಕ ಮತ್ತು ಸಮರ್ಥನೀಯವಲ್ಲ ಎಂದು ಗಡ್ಕರಿ ತನ್ನ ಹಿಂದಿನ ಹೇಳಿಕೆಯನ್ನು ಇದೇ ಸಂದರ್ಭದಲ್ಲಿ ಪುನರುಚ್ಛರಿಸಿದರು.
'ಯಡಿಯೂರಪ್ಪ ಅವರು ತನ್ನ ಮಗನಿಗೆ ಜಮೀನು ಡಿನೋಟಿಫೈ ಮಾಡಿದ್ದು ಕಾನೂನಾತ್ಮಕ ನಿರ್ಧಾರವಾಗಿದ್ದರೂ, ನೈತಿಕ ನೆಲೆಯಲ್ಲಿ ಇದು ಉತ್ತಮ ಬೆಳವಣಿಗೆಯಲ್ಲ ಎನ್ನುವುದು ಬಿಜೆಪಿ ಮತ್ತು ವೈಯಕ್ತಿಕವಾಗಿ ನನ್ನ ಅಭಿಪ್ರಾಯ. ಖಂಡಿತಾ ಡಿನೋಟಿಫೈ ಮಾಡಿರುವ ನಿರ್ಧಾರ ಅನೈತಿಕವಾದುದು. ಆದರೆ ಇದು ಯಡಿಯೂರಪ್ಪನವರು ಆರಂಭಿಸಿರುವ ಸಂಪ್ರದಾಯವಲ್ಲ ಎನ್ನುವುದನ್ನು ಯಾರು ಕೂಡ ಮರೆಯಬಾರದು' ಎಂದರು.
'ಯಡಿಯೂರಪ್ಪನವರು ನೈತಿಕವಾಗಿ ಹೆಜ್ಜೆ ತಪ್ಪಿರಬಹುದು, ಆದರೆ ಕಾನೂನಿನ ರೀತಿಯಲ್ಲಿ ಅವರು ಯಾವುದೇ ತಪ್ಪು ಮಾಡಿಲ್ಲ. ಜಮೀನು ಡಿನೋಟಿಫಿಕೇಶನ್ ಮಾಡುವುದು ಮುಖ್ಯಮಂತ್ರಿಯವರಿಗೆ ಕಾನೂನು ನೀಡಿರುವ ವಿಶೇಷ ಹಕ್ಕು. ಇದರಲ್ಲಿ ಯಾವುದೇ ತಪ್ಪಿಲ್ಲ. ಇಲ್ಲಿ ರಾಜ್ಯಪಾಲರು ಕ್ರಮಕ್ಕೆ ಮುಂದಾಗಿದ್ದರೆ, ಅದು ರಾಜಕೀಯ ಪ್ರೇರಿತವೇ ಹೊರತು ಇನ್ನೇನಲ್ಲ'
'ಯಡಿಯೂರಪ್ಪ ಅವರಿಗಿಂತಲೂ ಮೊದಲು ಕುಮಾರಸ್ವಾಮಿ, ಧರಂ ಸಿಂಗ್ ಮತ್ತು ಎಸ್.ಎಂ. ಕೃಷ್ಣ ಅವರು ಎರಡು-ಮೂರು-ನಾಲ್ಕು ಬಾರಿ ಇದೇ ರೀತಿ ತಮ್ಮ ಅಧಿಕಾರವನ್ನು ಬಳಸಿಕೊಂಡಿದ್ದಾರೆ. ಆದರೆ, ಈ ಮೂವರು ಮಂತ್ರಿಗಳ ವಿರುದ್ಧ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕಿರುವ ಕಾರಣ ಅವರು ಬಿಜೆಪಿಯವರು ಅಲ್ಲ ಎನ್ನುವುದು'
'ಇದುವರೆಗೆ ಕಾಂಗ್ರೆಸ್‌ನ ಅತಿ ನಂಬಿಗಸ್ತ ಪಾಲುದಾರನಾಗಿ ಇದದ್ದು ಸಿಬಿಐ. ಆದರೆ ಈಗ ರಾಜ್ಯಪಾಲರು ನಂಬಿಕೆಯ ಪಾಲುದಾರನಾಗಿದ್ದಾರೆ. ಅವರು (ಸಿಬಿಐ ಮತ್ತು ರಾಜ್ಯಪಾಲರು) ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ದೇಶದಲ್ಲಿ ಪ್ರಜಾತಾಂತ್ರಿಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ' ಎಂದು ಆರೋಪಿಸಿದರು.