ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಡಿಯೂರಪ್ಪ ರಾಜೀನಾಮೆ ನೀಡಲ್ಲ: ಬಿಜೆಪಿ ಹೈಕಮಾಂಡ್ (Rajiv Pratap Rudy | BJP | BS Yeddyurappa | HR Bharadwaj)
Bookmark and Share Feedback Print
 
ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರದ್ದು ಹದ್ದು ಮೀರಿದ ವರ್ತನೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವರಿಷ್ಠರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ, ರಾಜ್ಯಪಾಲರು ಲಕ್ಷ್ಮಣ ರೇಖೆ ಉಲ್ಲಂಘಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನೇಮಕಗೊಳಿಸಿರುವ ರಾಜ್ಯಪಾಲರು ಹಲವು ರಾಜ್ಯಗಳಲ್ಲಿ ಈ ಹಿಂದೆ ಸಂವಿಧಾನವನ್ನು ಉಲ್ಲಂಘಿಸಿ ಕ್ರಮಕ್ಕೆ ಮುಂದಾಗಿರುವ ಉದಾಹರಣೆಗಳಿವೆ. ಬಿಹಾರದಲ್ಲಿ ಬೂಟಾ ಸಿಂಗ್, ಜಾರ್ಖಂಡ್‌ನಲ್ಲಿ ಸಯ್ಯದ್ ಸಿಬ್ತೆ ರಜಿ, ಗೋವಾದಲ್ಲಿ ಎಸ್.ಸಿ. ಜಮೀರ್, ಉತ್ತರ ಪ್ರದೇಶದಲ್ಲಿ ರೊಮೇಶ್ ಭಂಡಾರಿ ಮುಂತಾದವರು ಸಂವಿಧಾನಾತ್ಮಕವಲ್ಲದ ಕ್ರಮ ಕೈಗೊಂಡವರು ಎಂದು ರೂಡಿಯವರು ಉದಾಹರಿಸಿದರು.

ಅಲ್ಲದೆ, ಹಂಸರಾಜ್ ಭಾರದ್ವಾಜ್ ಅವರು ಬೊಫೋರ್ಸ್ ಹಗರಣದಲ್ಲಿ ಒಟ್ಟಾವಿಯೋ ಕ್ವಟ್ರೋಚಿ ಮತ್ತು ಕಾಂಗ್ರೆಸ್ ನಾಯಕರನ್ನು ರಕ್ಷಿಸಲು ಯಾವ್ಯಾವ ಕಸರತ್ತುಗಳನ್ನು ಮಾಡಿದ್ದಾರೆಂದು ಜಗತ್ತಿಗೆ ಗೊತ್ತಿದೆ. ಇಂತಹ ವ್ಯಕ್ತಿಯೊಬ್ಬನನ್ನು ಕರ್ನಾಟಕ ರಾಜ್ಯಪಾಲ ಹುದ್ದೆಗೆ ನೇಮಕ ಮಾಡಿದ್ದೇ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಎಂದು ಬಿಜೆಪಿ ನಾಯಕ ಆರೋಪಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರು ಅನುಮತಿ ನೀಡಿರುವುದು ಸ್ಪಷ್ಟವಾಗಿ ರಾಜಕೀಯ ಸಂಚು. ತನಿಖೆ ನಡೆಯುವ ಮುನ್ನವೇ ರಾಜ್ಯಪಾಲರು ತೀರ್ಪು ನೀಡಿದ್ದಾರೆ. ಇಂತಹ ಅಸಂವಿಧಾನಿಕ ಕ್ರಮ ಕೈಗೊಂಡಿರುವ ರಾಜ್ಯಪಾಲರನ್ನು ತಕ್ಷಣವೇ ಕೇಂದ್ರ ವಾಪಸ್ ಕರೆಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ