ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಖ್ಯಮಂತ್ರಿ ಭ್ರಷ್ಟ, ಭಾರದ್ವಾಜ್ ಮಾಡಿದ್ದು ಸರಿ: ಮೊಯ್ಲಿ
(Veerappa Moily | Karnataka | HR Bharadwaj | BS Yeddyurappa)
ಮುಖ್ಯಮಂತ್ರಿ ಭ್ರಷ್ಟ, ಭಾರದ್ವಾಜ್ ಮಾಡಿದ್ದು ಸರಿ: ಮೊಯ್ಲಿ
ಮುಂಬೈ, ಶನಿವಾರ, 22 ಜನವರಿ 2011( 16:55 IST )
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದ್ದು ಸರಿ ಎಂದು ಸಮರ್ಥಿಸಿಕೊಂಡಿರುವ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ, ಅವರಿಗೆ ಬೇರೆ ದಾರಿಯೇ ಇರಲಿಲ್ಲ ಎಂದರು.
ಕಾನೂನಿನಿಂದ ಯಾರೊಬ್ಬರೂ ತಪ್ಪಿಸಿಕೊಳ್ಳುವಂತಿಲ್ಲ. ಇಲ್ಲಿ ಸಚಿವರಾಗಲಿ, ಮುಖ್ಯಮಂತ್ರಿಯಾಗಲಿ, ಯಾರಿಗೂ ವಿನಾಯಿತಿಯಿಲ್ಲ. ಭ್ರಷ್ಟಾಚಾರದ ಪ್ರಶ್ನೆ ಬಂದಾಗ ಕ್ರಮಕ್ಕೆ ಅನುಮತಿ ನೀಡುವುದನ್ನು ಬಿಟ್ಟರೆ ರಾಜ್ಯಪಾಲರಿಗೆ ಬೇರೆ ಅವಕಾಶಗಳಿರಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ದಾಖಲೆಗಳೇ ಇವೆ. ಇದೇ ಕಾರಣದಿಂದ ಈ ಹಿಂದೆ ಒಂದು ಬಾರಿ ಬಿಜೆಪಿ ಹೈಕಮಾಂಡ್ ಕೂಡ ಅವರನ್ನು ಕೆಳಗಿಳಿಯುವಂತೆ ಸೂಚಿಸಿತ್ತು. ಈ ನೆಲದ ಕಾನೂನನ್ನು ಉಲ್ಲಂಘಿಸಿರುವ ಯಡಿಯೂರಪ್ಪ, ಅದನ್ನು ಎಗ್ಗಿಲ್ಲದೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮೊಯ್ಲಿ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವುದರ ವಿರುದ್ಧ ಅವರು ನ್ಯಾಯಾಂಗದಲ್ಲಿ ಪ್ರಶ್ನಿಸಬಹುದಾಗಿದೆ. ಅಷ್ಟಕ್ಕೂ ಮುಖ್ಯಮಂತ್ರಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ವಿಚಾರದಲ್ಲಿ ಇದೇ ಮೊದಲ ಬಾರಿ ಸುದ್ದಿಯಾಗುತ್ತಿರುವುದು ಅಲ್ಲ. ಬಿಜೆಪಿಯು ಭ್ರಷ್ಟಾಚಾರ ಮತ್ತು ಒಬ್ಬ ಭ್ರಷ್ಟ ವ್ಯಕ್ತಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಮೂಲಕ ಬಿಜೆಪಿ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದೆ. ಇಲ್ಲಿ ಪ್ರಕರಣವನ್ನು ನಿರ್ಧರಿಸುವುದು ರಾಜ್ಯಪಾಲರಲ್ಲ. ಅದು ನ್ಯಾಯಾಂಗದ ಕೆಲಸ. ರಾಜ್ಯಪಾಲರಿಗೆ ಇರುವ ಅಧಿಕಾರವೆಂದರೆ ಕ್ರಮ ಕೈಗೊಳ್ಳಲು ಅನುಮತಿ ನೀಡುವುದು ಮಾತ್ರ ಎಂದು ಭಾರದ್ವಾಜ್ ಅವರನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ, ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬುದನ್ನು ತಳ್ಳಿ ಹಾಕಿದರು.
2ಜಿ ತರಂಗಾಂತರ ಹಂಚಿಕೆ ಹಗರಣದ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೊಯ್ಲಿ, ನಮ್ಮ ಸರಕಾರವು ಹಗರಣ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗುವ ಮೊದಲೇ ಸಿಬಿಐ ಆಧೀನ ತನಿಖೆ ನಡೆಸಲು ಆದೇಶ ನೀಡಿತ್ತು. ಈಗ ನಾವು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಲು ಇಚ್ಛಿಸುವುದಿಲ್ಲ. ಆದರೆ ಕರ್ನಾಟಕದಲ್ಲಿ ಇದೇ ರೀತಿಯ ಪಾರದರ್ಶಕತೆಯನ್ನು ಕಾಣಲು ಸಾಧ್ಯವಿಲ್ಲ ಎಂದು ಕುಟುಕಿದರು.