ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿರುವ ವಿಚಾರದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಇರುವುದು ಸ್ಪಷ್ಟವಾಗಿದೆ. ಭೂ ಹಗರಣ ಆರೋಪ ಹೊತ್ತಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುವ ಪಟ್ಟಿಯಲ್ಲಿ ಎಡಪಕ್ಷಗಳೂ ಈಗ ಸೇರಿಕೊಂಡಿವೆ.
ಮುಖ್ಯಮಂತ್ರಿ ವಿರುದ್ಧ ಕ್ರಮಕ್ಕೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಸಿಪಿಐ ಸಂಪೂರ್ಣವಾಗಿ ಬೆಂಬಲಿಸಿದೆ. ಆದರೆ ಸಿಪಿಐಎಂ (ಮಾರ್ಕಿಸ್ಟ್) ಯಾವುದೇ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ.
ಪ್ರಸಕ್ತ ಸನ್ನಿವೇಶಗಳ ಅಡಿಯಲ್ಲಿ ಮುಖ್ಯಮಂತ್ರಿಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರು ಅನುಮತಿ ನೀಡಿರುವುದು ಸರಿಯಾಗಿಯೇ ಇದೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಸುಧಾಕರ ರೆಡ್ಡಿ ಹೇಳಿದ್ದಾರೆ.
ರಾಜ್ಯಪಾಲರ ಕ್ರಮದ ಹಿಂದೆ ರಾಜಕೀಯ ವಾಸನೆ ಬಡಿಯುತ್ತಿರುವ ಹೊರತಾಗಿಯೂ, ಬಿಜೆಪಿಯು ಸಾಗುತ್ತಿರುವ ಹಾದಿ ಸರಿಯಾಗಿಲ್ಲ. ಕ್ರಮವನ್ನು ವಿರೋಧಿಸುವ ಯಾವುದೇ ಅರ್ಹತೆಯನ್ನು ಬಿಜೆಪಿ ಹೊಂದಿಲ್ಲ ಎಂದಿರುವ ರೆಡ್ಡಿ, ಮುಖ್ಯಮಂತ್ರಿ ತಪ್ಪೆಸಗಿದ್ದಾರೆ ಎನ್ನುವುದಕ್ಕೆ ಸಂಶಯಕ್ಕಿಂತ ಹೆಚ್ಚಾಗಿ ಸಾಬೀತಾಗಿದೆ. ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ನಡೆದಿರುವುದನ್ನು ಇದು ಸೂಚಿಸುತ್ತದೆ ಎಂದರು.
ಅತ್ತ ಸಿಪಿಐಎಂ ಪಾಲಿಟ್‌ಬ್ಯೂರೋ ಸದಸ್ಯ ಸೀತಾರಾಮ್ ಯೆಚೂರಿ, ಸ್ವಜನಪಕ್ಷಪಾತ ಮತ್ತು ಸಾರ್ವಜನಿಕ ಸಂಪನ್ಮೂಲವನ್ನು ಲೂಟಿ ಮಾಡುವುದರಲ್ಲಿ ಕರ್ನಾಟಕದ ಬಿಜೆಪಿ ಸರಕಾರವು ಹೊಸ ದಾಖಲೆಯನ್ನೇ ನಿರ್ಮಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಗಣಿಗಾರಿಕೆ ಮಾಫಿಯಾದ ಭಾಗವಾಗಿರುವ ಈ ಸರಕಾರವು ಎಲ್ಲಾ ರೀತಿಯ ಭ್ರಷ್ಟಾಚಾರಗಳಲ್ಲಿ ತೊಡಗಿಸಿಕೊಂಡಿದೆ. ಸ್ವತಃ ಮುಖ್ಯಮಂತ್ರಿಯೇ ತನ್ನ ಮಕ್ಕಳು ಮತ್ತು ಸಂಬಂಧಿಕರ ಪರವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳಲ್ಲಿ ತೊಡಗಿಕೊಳ್ಳುವ ವಿಚಾರ ಬಂದಾಗ ಬಿಜೆಪಿಯು ಯಾವುದೇ ನಿಟ್ಟಿನಲ್ಲೂ ಕಾಂಗ್ರೆಸ್‌ಗಿಂತ ಭಿನ್ನವಲ್ಲ ಎಂದಿರುವ ಯೆಚೂರಿ, ರಾಜ್ಯಪಾಲರ ಕ್ರಮದ ಕುರಿತು ಯಾವುದೇ ನೇರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.