ವಕ್ಫ್ ಮಂಡಳಿಗಳಲ್ಲಿ ಯಾವುದೇ ರೀತಿಯ ಹಣವಿಲ್ಲ. ಮಸೀದಿಗಳಲ್ಲಿ ಮುಖ್ಯಸ್ಥರಾಗಿರುವ, ಧಾರ್ಮಿಕ ಚಟುವಟಿಕೆಗಳ ನೇತೃತ್ವ ವಹಿಸುವ ಇಮಾಮ್‌ಗಳಿಗೆ ವೇತನ ನೀಡುವ ಸಂಬಂಧ ಸರಕಾರ ಯೋಜನೆಯನ್ನು ರೂಪಿಸುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಹೇಳಿಕೊಂಡಿದ್ದಾರೆ.
ಸರಕಾರದಿಂದ ಅನುದಾನ ಪಡೆಯುತ್ತಿರುವ ಮಸೀದಿಗಳಲ್ಲಿನ ಇಮಾಮ್‌ಗಳಿಗೆ ವೇತನ ನೀಡಬೇಕು ಎಂದು 2010ರ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇಮಾಮ್‌ಗಳಿಗೆ ವೇತನ ನೀಡುವ ಸಂಬಂಧ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರುವಂತೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಅವರಿಗೆ ಸೂಚಿಸಲಾಗಿದೆ ಎಂದು ವಿತ್ತ ಸಚಿವರು ನನಗೆ ಮಾಹಿತಿ ನೀಡಿದ್ದಾರೆ ಎಂದು ಅವರನ್ನು ಭೇಟಿಯಾದ ನಂತರ ಸಿಪಿಐಎಂ ಪಾಲಿಟ್‌ಬ್ಯೂರೋ ಸದಸ್ಯೆ ಬೃಂದಾ ಕಾರಟ್ ತಿಳಿಸಿದರು.
'ವಕ್ಫ್ ಮಂಡಳಿಗಳು ಯಾವುದೇ ರೀತಿಯ ನಿಧಿ ಹೊಂದಿಲ್ಲ. ಸುಪ್ರೀಂ ಕೋರ್ಟ್ ಈ ಸಂಬಂಧ ನೀಡಿರುವ ಆದೇಶವನ್ನು ಜಾರಿಗೆ ತರಲು ನಾವು ಅಗತ್ಯವಿರುವ ಎಲ್ಲಾ ಕಾರ್ಯಗಳನ್ನು ಮಾಡಲಿದ್ದೇವೆ' ಎಂದು ನಾನು ಈ ವಿಚಾರವನ್ನು ಮುಖರ್ಜಿಯವರಲ್ಲಿ ಪ್ರಸ್ತಾಪಿಸಿರುವುದಕ್ಕೆ ಉತ್ತರಿಸಿದ್ದಾರೆ ಎಂದು ಕಾರಟ್ ಹೇಳಿದರು.
ವಕ್ಫ್ ಮಂಡಳಿಗಳು ನಮ್ಮನ್ನು ಶೋಷಿಸುತ್ತಿವೆ. ಹಾಗಾಗಿ ಸಂವಿಧಾನದ 32ನೇ ಅನುಚ್ಛೇದದ ಅಡಿಯಲ್ಲಿ ಮೂಲಭೂತ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಇಮಾಮ್‌ಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ರಾಜ್ಯ ವಕ್ಫ್ ಮಂಡಳಿಗಳು ತಮ್ಮನ್ನು ಮಂಡಳಿಯ ಸಿಬ್ಬಂದಿಗಳು ಎಂದು ಪರಿಗಣಿಸಬೇಕು ಮತ್ತು ತಾವು ಜೀವನ ನಡೆಸುವಂತಾಗಲು ಮೂಲ ವೇತನಗಳನ್ನು ನೀಡಬೇಕು ಎಂದು ಆದೇಶ ನೀಡುವಂತೆ ಇಮಾಮ್‌ಗಳು ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ವಕ್ಫ್ ಮಂಡಳಿ, ಇಮಾಮ್‌ಗಳು ನಮ್ಮ ನೌಕರರಲ್ಲ. ತಾವು ಸಂಪನ್ಮೂಲವನ್ನು ಹೊಂದಿರದೇ ಇರುವುದರಿಂದ ಅವರಿಗೆ ವೇತವನ್ನು ನೀಡಲಾಗದು ಎಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಇಮಾಮ್‌ಗಳಿಗೆ ವೇತನ ನೀಡುವ ಸಂಬಂಧ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಕೇಂದ್ರ ಸರಕಾರ ಮತ್ತು ಕೇಂದ್ರೀಯ ವಕ್ಫ್ ಮಂಡಳಿಗಳಿಗೆ ಸೂಚನೆ ನೀಡಿತ್ತು.
ಇಮಾಮ್‌ಗಳಿಗೆ ಸರಕಾರವು ವೇತನ ನೀಡುವುದಾದರೆ, ದೇಶದ ಎಂಟು ಲಕ್ಷ ದೇವಸ್ಥಾನಗಳಲ್ಲಿರುವ ಹಿಂದೂ ಅರ್ಚಕರಿಗೂ ಸಂಭಾವನೆ ನೀಡಬೇಕು ಎಂದು ಬಿಜೆಪಿ ಸದಸ್ಯರಾದ ಯೋಗಿ ಆದಿತ್ಯನಾಥ್ ಮತ್ತು ಬಿಜೋಯಾ ಚಕ್ರವರ್ತಿ ಮುಂತಾದವರು ಕಳೆದ ವರ್ಷ ಒತ್ತಾಯಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.