ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೇತಾಜಿಯಂತಹ ಕೆಚ್ಚೆದೆ ನಾಯಕ ಭಾರತಕ್ಕೆ ಬೇಕು: ಮೂರ್ತಿ (China | India | Netaji Subhas Chandra Bose | NR Narayana Murthy)
ರಾಷ್ಟ್ರ ನಿರ್ಮಾಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಕ್ರಿಯ ಪಾತ್ರವಹಿಸಲು ಸಾಧ್ಯವಾಗುತ್ತಿದ್ದರೆ ಇಂದು ಭಾರತವು ಚೀನಾವನ್ನು ಹಿಂದಿಕ್ಕುತ್ತಿತ್ತು ಮತ್ತು ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿತ್ತು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು.
ಕೈಗಾರಿಕೀಕರಣ ಕುರಿತ ಜವಾಹರಲಾಲ್ ನೆಹರೂ ಅವರ ಅತೀವ ಮಡಿವಂತಿಕೆಯನ್ನು ನೇತಾಜಿಯವರು ಹೋಗಲಾಡಿಸುತ್ತಿದ್ದರು. ಲೈಸೆನ್ಸ್ ರಾಜ್ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದರು ಮತ್ತು ದೇಶದ ವಿಭಜನೆಯನ್ನು ಕೂಡ ತಡೆಯುತ್ತಿದ್ದರು ಎಂದು ಭಾನುವಾರ ಕೊಲ್ಕತ್ತಾದಲ್ಲಿ ನಡೆದ ನೇತಾಜಿ ಜನ್ಮ ದಿನಾಚರಣೆ (23-01-1897) ಕಾರ್ಯಕ್ರಮದಲ್ಲಿ ಮೂರ್ತಿ ಅನಿಸಿಕೆ ವ್ಯಕ್ತಪಡಿಸಿದರು.
PTI
ನೇತಾಜಿಯವರಿಗೆ ಗೌರವ ಸಲ್ಲಿಸಿದ ಅವರು, ಶ್ರೇಷ್ಠ ನಾಯಕನಿಗೆ ಕೇಂದ್ರ ಸರಕಾರವು ಅರ್ಹ ಗೌರವವನ್ನು ನೀಡುತ್ತಿಲ್ಲ ಎಂದು ನೆನಪಿಸಿದರು.
ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ನೇತಾಜಿಯವರು ಇರುತ್ತಿದ್ದರೆ ಭಾರತದ ಕಥೆಯೇ ಬೇರೆಯಾಗುತ್ತಿತ್ತು. ನೆಹರೂ, ಶ್ಯಾಮ್‌ಪ್ರಸಾದ್ ಮುಖರ್ಜಿ ಮತ್ತು ಸಿ. ರಂಗಗೋಪಾಲಾಚಾರಿಯವರ ಜತೆ ಅವರು ಇರುತ್ತಿದ್ದರೆ ಭಾರತವು ಅದ್ಭುತವಾದುದನ್ನೇ ಸಾಧಿಸುತ್ತಿತ್ತು. ಆದರೆ ಇಂತಹ ನಾಯಕರಿಗೆ ಕೇಂದ್ರ ಸರಕಾರವು ಸೂಕ್ತ ಗೌರವವನ್ನು ನೀಡುತ್ತಿಲ್ಲ. ದೆಹಲಿಯಲ್ಲೇ ನೇತಾಜಿಯವರ ಸ್ಮಾರಕ ಇದ್ದಂತಿಲ್ಲ. ಇದನ್ನು ಪ್ರಧಾನಿಯವರು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಮೂರ್ತಿ ಹೇಳಿದರು.
ನೇತಾಜಿಯವರು ಇರುತ್ತಿದ್ದರೆ ಭಾರತದ ಭವಿಷ್ಯದಲ್ಲಿ ದೊಡ್ಡ ಬದವಾವಣೆ ಯಾವ ಕಾರಣಕ್ಕೆ ಆಗುತ್ತಿತ್ತು ಎಂಬುದನ್ನು ಕೂಡ ಸಾಫ್ಟ್‌ವೇರ್ ಕಂಪನಿಯ ನಿರ್ಮಾತೃ ವಿವರಿಸಿದರು.
'ನೇತಾಜಿ ಪ್ರಾಮಾಣಿಕರಾಗಿದ್ದರು, ಕೆಚ್ಚೆದೆಯುಳ್ಳವರಾಗಿದ್ದರು ಮತ್ತು ಯಾರ ಎದುರು ನಿಂತು ಬೇಕಾದರೂ ಮಾತನಾಡುವ ಛಾತಿ ಹೊಂದಿದವರಾಗಿದ್ದರು. ಅವರು ಮಹಾತ್ಮಾ ಗಾಂಧಿಯನ್ನು ಕೂಡ ಪ್ರಶ್ನಿಸುವ, ಡೊಮಿನಿಯನ್ ಸ್ಟೇಟಸ್ ಕುರಿತು ಗಾಂಧಿ ವಾದವನ್ನು ಒಪ್ಪಿಕೊಳ್ಳದ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸುವ ವ್ಯಕ್ತಿತ್ವ ಹೊಂದಿದ್ದರು. ದೇಶದ ಪ್ರಗತಿಯಲ್ಲಿ ಜನಸಂಖ್ಯಾ ನಿಯಂತ್ರಣ, ಕೈಗಾರಿಕೆಗಳು, ಕೃಷಿ ಮತ್ತು ಆರೋಗ್ಯ ಪ್ರಮುಖ ವಿಚಾರಗಳು ಎನ್ನುವುದು ನೇತಾಜಿಯವರಿಗೆ ಗೊತ್ತಿದ್ದವು ಮತ್ತು ಅದನ್ನು ಅವರು ವ್ಯಕ್ತಪಡಿಸಿದ್ದರು. ಅವರ ನಿಲುವುಗಳು ಆಧುನಿಕ ಮತ್ತು ಕಾರ್ಯರೂಪಕ್ಕೆ ತರುವಂತದ್ದಾಗಿದ್ದವು. ನನ್ನ ಪ್ರಕಾರ, ಸರಕಾರದ ಮುಂದಿನ ಸೀಟಿನಲ್ಲಿ ಅವರು ಇದ್ದಿದ್ದರೆ ಭಾರತವು ಚೀನಾವನ್ನು ಹಿಂದಿಕ್ಕುತ್ತಿತ್ತು' ಎಂದರು.
ಭಾರತದ ಬಗ್ಗೆ ಬರುತ್ತಿರುವ ಹೊಗಳಿಕೆ, ಮೆಚ್ಚುಗೆಗಳ ಜತೆಗೆ ಇರುವ ವಾಸ್ತವತೆಯ ಪರಿಚಯವನ್ನು ಕೂಡ ಮೂರ್ತಿ ತನ್ನ ಮಾತಿನಲ್ಲಿ ಹೊರಗೆಡವಿದರು. ನಮ್ಮ ದೇಶಕ್ಕೆ ನೇತಾಜಿಯವರಂತಹ ಸಮರ್ಥ ನಾಯಕರ ಅಗತ್ಯ ಯಾವ ಕಾರಣಕ್ಕೆ ಇದೆ ಎಂಬುದನ್ನು ಪ್ರತಿಪಾದಿಸಿದರು.
'ಜಗತ್ತಿನಲ್ಲೇ ಭಾರತದ ಆರ್ಥಿಕ ಪ್ರಗತಿ ದರ ಎರಡನೇ ಅತಿ ಹೆಚ್ಚಿನದ್ದಾಗಿದೆ. ನಮ್ಮ ಶೇರು ಮಾರುಕಟ್ಟೆಗಳು ಮತ್ತು ಕೈಗಾರಿಕೆಗಳು ಭಾರೀ ಮುನ್ನಡೆ ಸಾಧಿಸುತ್ತಿವೆ. ಜಪಾನ್‌ನಲ್ಲಿ ಇರುವುದಕ್ಕಿಂತ ಹೆಚ್ಚಿನ ಬಿಲಿಯಾಧಿಪತಿಗಳನ್ನು ನಾವು ಹೊಂದಿದ್ದೇವೆ. ನಮ್ಮ ಕ್ರಿಕೆಟ್ ಆಟಗಾರರು ವಿಶ್ವದಲ್ಲೇ ದೊಡ್ಡ ಸ್ಟಾರ್‌ಗಳಾಗಿದ್ದಾರೆ. ಆದರೆ ಇಷ್ಟಕ್ಕೆ ನಮ್ಮ ಕಥೆ ಮುಗಿಯುವುದಿಲ್ಲ. ವಿಶ್ವದ 160 ರಾಷ್ಟ್ರಗಳ ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ 119ನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ 40 ಕೋಟಿ ಅನಕ್ಷರಸ್ಥರಿದ್ದಾರೆ. 75 ಕೋಟಿ ಮಂದಿಗೆ ಸೂಕ್ತ ನೈರ್ಮಲ್ಯತೆಯಿಂದ ವಂಚಿತರಾಗುತ್ತಿದ್ದಾರೆ. 2.5 ಕೋಟಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಶೇ.64ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನಮಗೆ ನೇತಾಜಿಯವರಂತಹ ಕೆಚ್ಚೆದೆಯ ನಾಯಕ ಬೇಕು. ಇವೆಲ್ಲದರ ಕುರಿತು ಅಂದೇ ತಿಳಿದುಕೊಂಡಿದ್ದ ನೇತಾಜಿಯವರು ಪರಿಹಾರದ ರೂಪುರೇಷೆಗಳನ್ನು ಹೊಂದಿದ್ದರು' ಎಂದು ತಿಳಿಸಿದರು.