ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತ್ರಿವರ್ಣ ಧ್ವಜ ಹಾರಿಸಲು ಹೋದ ಬಿಜೆಪಿ ಮುಖಂಡರ ಸೆರೆ (BJP | Ekta Yatra | Sushma Swaraj | Ananth Kumar)
Bookmark and Share Feedback Print
 
'ಏಕತಾ ಯಾತ್ರೆ'ಗಾಗಿ ಜಮ್ಮು-ಕಾಶ್ಮೀರಕ್ಕೆ ತೆರಳಿರುವ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಅನಂತ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಜಮ್ಮು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನು ಸ್ವತಃ ಲೋಕಸಭೆಯ ಪ್ರತಿಪಕ್ಷ ನಾಯಕಿ, ಬಿಜೆಪಿಯ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಸಂದೇಶದ ಮೂಲಕ ಕ್ಷಣ ಕ್ಷಣದ ಮಾಹಿತಿ ತಿಳಿಸುತ್ತಿದ್ದಾರೆ.

ಬಿಜೆಪಿ ನಾಯಕರಿಗೆ ಪ್ರತಿರೋಧ ಒಡ್ಡುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನಿರ್ದೇಶಿತ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ನಮ್ಮ ದೇಶದ ಧ್ವಜವನ್ನು ಹಾರಿಸಲು ಹೊರಟವರನ್ನು ತಡೆಯಲು ಕೇಂದ್ರ ಪಿತೂರಿ ನಡೆಸಿದೆ ಎಂದು ಆರೋಪಿಸಿದೆ.

ಜಮ್ಮು ವಿಮಾನ ನಿಲ್ದಾಣದ ಮೂಲಕ ಶ್ರೀನಗರಕ್ಕೆ ಹೋಗಬೇಕಿದ್ದ ಬಿಜೆಪಿ ನಾಯಕರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗದಂತೆ ದಿಗ್ಬಂಧನ ಹಾಕಲಾಗಿತ್ತು. ಇಡೀ ವಿಮಾನ ನಿಲ್ದಾಣವನ್ನೇ ಬೀಗ ಹಾಕಿ ಮುಚ್ಚಲಾಗಿದೆ. ಅವರನ್ನು ವಾಪಸ್ ಹೋಗುವಂತೆ ಬಲವಂತ ಮಾಡಲಾಗುತ್ತಿತ್ತು. ಇತ್ತೀಚಿನ ಮಾಹಿತಿಯ ಪ್ರಕಾರ, ಕೊನೆಗೂ ಅವರನ್ನು ಬಂಧಿಸಲಾಗಿದ್ದು, ಅವರ ಲಗೇಜುಗಳನ್ನು ಬೇರೆ ಕಾರುಗಳಲ್ಲಿ ಸಾಗಿಸಲಾಗಿದೆ.

ಇದನ್ನು ಪ್ರತಿಭಟಿಸಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಪ್ರಧಾನಿ ಜೊತೆ ಮಾತುಕತೆ ನಡೆಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ದೇಶಾದ್ಯಂತ ಪ್ರತಿಭಟನೆ
ಇನ್ನೊಂದೆಡೆ, ಬಿಜೆಪಿ ನಾಯಕರಿಗೆ ತಡೆಯೊಡ್ಡಿರುವುದನ್ನು ವಿರೋಧಿಸಿ ಮಂಗಳವಾರ ದೇಶಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಈಗಾಗಲೇ ಹಿರಿಯ ಮುಖಂಡ ರಾಜನಾಥ್ ಸಿಂಗ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಸುಷ್ಮಾ ಅವರು ಟ್ವೀಟ್ ಮಾಡಿದ ಕೆಲವು ವಾಕ್ಯಗಳು ಇಂತಿವೆ:
'ನಾವೀಗ ಜಮ್ಮು ವಿಮಾನ ನಿಲ್ದಾಣದಲ್ಲಿದ್ದೇವೆ. ನಮ್ಮನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡುತ್ತಿಲ್ಲ. ಟರ್ಮಿನಲ್ ಗೇಟುಗಳಿಗೆ ಬೀಗ ಜಡಿಯಲಾಗಿದೆ. ನಮ್ಮನ್ನು ಸೆಕ್ಷನ್ 144 ಅಡಿಯಲ್ಲಿ ತಡೆಯುತ್ತಿದ್ದಾರೆ. ನಾವು ವಾಪಸ್ ಹೋಗಬೇಕೆಂದು ಒತ್ತಾಯಿಸುತ್ತಿದ್ದಾರೆ'

'ನಾವು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲೇಬೇಕೆಂದು ಹಠ ಹಿಡಿದು ಕುಳಿತಿದ್ದೇವೆ. ಆದರೆ ನಾವಿಲ್ಲದೆ ಅವರು ವಿಮಾನವನ್ನು ಹೋಗಲು ಬಿಡುತ್ತಿಲ್ಲ. ಅವರಿಗೆ ನಮ್ಮನ್ನು ಬಂಧಿಸುವ ಅಧಿಕಾರವಿದೆ. ಆದರೆ ನಮ್ಮನ್ನು ಇಲ್ಲಿಂದ ವಾಪಸ್ ಕಳುಹಿಸಲು ಸಾಧ್ಯವಿಲ್ಲ'

'ನಾವೇನು ತಪ್ಪು ಮಾಡಿದ್ದೇವೆ? ನಾವು ಹೊರಟಿರುವುದು ನಮ್ಮ ರಾಷ್ಟ್ರಧ್ವಜವನ್ನು ಹಾರಿಸಲು. ಇದಕ್ಕೆ ಯಾಕೆ ಅಡ್ಡಿಪಡಿಸಲಾಗುತ್ತಿದೆ' ಎಂದು ಸುಷ್ಮಾ ಟ್ವಿಟ್ಟರಿನಲ್ಲಿ ಸಂದೇಶ ರವಾನಿಸಿದ್ದಾರೆ.

ಈ ಸಂಬಂಧ ಜಮ್ಮು-ಕಾಶ್ಮೀರ ಮತ್ತು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿರುವ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ಯಾತ್ರೆ ನಿಲ್ಲಿಸಲು ಪಿತೂರಿ ಮಾಡಲಾಗಿದೆ. ಆ ಮೂಲಕ ಪ್ರತ್ಯೇಕತಾವಾದಿಗಳಿಗೆ ನೇರ ಬೆಂಬಲ ನೀಡಲಾಗುತ್ತಿದೆ ಎಂದರು.

ಬಿಜೆಪಿ ನಾಯಕರನ್ನು ಜಮ್ಮು ವಿಮಾನ ನಿಲ್ದಾಣದಲ್ಲಿ ತಡೆದಿರುವುದು ಖಂಡನೀಯ. ಅವರು ಹೊರಟಿದ್ದು ರಾಷ್ಟ್ರ ಧ್ವಜಾರೋಹಣಕ್ಕೆ. ಅವರನ್ನು ತಡೆಯುವ ಮೂಲಕ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಲಾಲ್‌ಚೌಕ್‌ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಬೇಕೆಂದು ಬಿಜೆಪಿ 'ಏಕತಾ ಯಾತ್ರೆ'ಗೆ ಕೆಲ ದಿನಗಳ ಹಿಂದೆ ಚಾಲನೆ ನೀಡಿತ್ತು. ಈ ಯಾತ್ರೆಯು ಜನವರಿ 26ರಂದು ಲಾಲ್‌ಚೌಕ್‌ಗೆ ತಲುಪಲಿದೆ. ಅದಕ್ಕಾಗಿ ನಾಯಕರು ಒಂದುಗೂಡುತ್ತಿರುವುದನ್ನು ಕೇಂದ್ರ ಮತ್ತು ಜಮ್ಮು ಸರಕಾರಗಳು ತಡೆಯುತ್ತಿವೆ ಎಂದು ಆರೋಪಿಸಲಾಗುತ್ತಿದೆ.

ಸತತ 19 ವರ್ಷಗಳ ಕಾಲ ಲಾಲ್‌ಚೌಕ್‌ನಲ್ಲಿ ಭಾರತದ ಧ್ವಜ ಹಾರಿತ್ತು. ಆದರೆ ಇದನ್ನು 2010ರಲ್ಲಿ ಕೇಂದ್ರ ಸರಕಾರವು ಸ್ಥಗಿತಗೊಳಿಸಿತ್ತು. ಧ್ವಜಾರೋಹಣ ಮಾಡುವುದರಿಂದ ಶಾಂತಿ ಕದಡುತ್ತದೆ ಎಂಬ ಕಾರಣವನ್ನು ನೀಡಿತ್ತು. ಈ ವರ್ಷವೂ ಗಣ ರಾಜ್ಯೋತ್ಸವದಂದು ಧ್ವಜಾರೋಹಣ ಮಾಡದೇ ಇರಲು ಸರಕಾರಗಳು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಇದನ್ನು ಪ್ರತಿಭಟಿಸಿ ಬಿಜೆಪಿ ಧ್ವಜ ಹಾರಿಸಲು ಹೊರಟಿದೆ.
ಸಂಬಂಧಿತ ಮಾಹಿತಿ ಹುಡುಕಿ