ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋದ್ರಾ ಹತ್ಯಾಕಾಂಡ; ಕರಸೇವಕರಿಗೆ ಸಿಗುವುದೇ ನ್ಯಾಯ? (Godhra judgement | Gujarat | Narendra Modi | Hindu kar sevaks)
Bookmark and Share Feedback Print
 
ಗುಜರಾತ್ ಕೋಮುಗಲಭೆಗೆ ಮೂಲ ಕಾರಣವಾದ ಗೋದ್ರಾ ಹಿಂದೂಗಳ ಹತ್ಯಾಕಾಂಡದ ತೀರ್ಪು ಕೊನೆಗೂ ಪ್ರಕಟವಾಗಲಿದೆ. ಫೆಬ್ರವರಿ 19ರ ಶನಿವಾರದಂದು ಗುಜರಾತ್ ನ್ಯಾಯಾಲಯವೊಂದು 58 ಹಿಂದೂ ಕರಸೇವಕರ ಹತ್ಯೆಗೆ ಸಂಬಂಧಪಟ್ಟ ತೀರ್ಪನ್ನು ನೀಡಲಿದೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲೇ ಪ್ರಾಸಿಕ್ಯೂಷನ್ ಮತ್ತು ಡಿಫೆನ್ಸ್ ವಾದಗಳನ್ನು ಆಲಿಸಿ ಮುಗಿಸಿದ್ದ ನ್ಯಾಯಮೂರ್ತಿ ಪಿ.ಆರ್. ಪಟೇಲ್, ಭಾರೀ ಸೂಕ್ಷ್ಮ ಪ್ರಕರಣವೆಂದು ಹೇಳಲಾಗಿರುವ ಒಂಬತ್ತು ವರ್ಷಗಳ ಹಿಂದಿನ ದುರ್ಘಟನೆಯ ಕುರಿತ ತೀರ್ಪನ್ನು ಪ್ರಕಟಿಸಲಿದ್ದಾರೆ ಎಂದು ಈ ಪ್ರಕರಣದ ವಿಶೇಷ ಸರಕಾರಿ ವಕೀಲ ಜೆ.ಎಂ. ಪಂಚಾಲ್ ತಿಳಿಸಿದ್ದಾರೆ.

ಸೆಪ್ಟೆಂಬರ್ ವಿಚಾರಣೆ ಮುಗಿಸಿದ್ದ ನ್ಯಾಯಾಲಯವು ತೀರ್ಪನ್ನು ಇನ್ನೇನು ನೀಡಬೇಕು ಎಂದುಕೊಂಡಿದ್ದಾಗ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ತಡೆ 2010ರ ಅಕ್ಟೋಬರ್ 26ರಂದು ತೆರವುಗೊಂಡಿತ್ತು.

ಈ ಪ್ರಕರಣದ ವಿಚಾರಣೆ ಆರಂಭವಾದದ್ದು 2009ರ ಜೂನ್ ತಿಂಗಳಲ್ಲಿ. ಘಟನೆ ನಡೆದ 2002ರಿಂದ ಜೈಲಿನಲ್ಲಿರುವ 94 ಆರೋಪಿಗಳ ವಿರುದ್ಧದ ವಿಚಾರಣೆ ಸಾಬರಮತಿ ಜೈಲಿನ ಒಳಗಡೆಯೇ ನಡೆದಿತ್ತು. ಎಲ್ಲಾ ಆರೋಪಿಗಳ ಮೇಲೂ ಕ್ರಿಮಿನಲ್ ಪಿತೂರಿ, ಹತ್ಯೆ ಮತ್ತು ರೈಲು ಬೋಗಿಗೆ ಬೆಂಕಿ ಹಚ್ಚಿದ ಆರೋಪಗಳನ್ನು ಹೊರಿಸಲಾಗಿತ್ತು.

ಕರಸೇವಕರ ಸಜೀವ ದಹನ...
ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸಮೀಪ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಬರುತ್ತಿದ್ದ 58 ಹಿಂದೂ ಕರಸೇವಕರು ಸಜೀವ ದಹನಗೊಂಡ ದಿನ 27-02-2002. ಅಂದು ಮುಂಜಾನೆ ಸರಿಯಾಗಿ 7.43ಕ್ಕೆ ನಡೆದ ಘಟನೆಯಿದು.

ಅದು ಸಾಬರಮತಿ ಎಕ್ಸ್‌ಪ್ರೆಸ್ ರೈಲು. ಬಿಹಾರದ ದರ್ಭಾಂಗಾದಿಂದ ಗುಜರಾತಿನ ಅಹಮದಾಬಾದ್‌ಗೆ ರೈಲು ಬರುತ್ತಿತ್ತು. ದುರಂತ ನಡೆದದ್ದು ಪಂಚಮಹಲ್ ಜಿಲ್ಲೆಯ ಗೋದ್ರಾ ಎಂಬ ನಗರದಲ್ಲಿ. ಅದೇ ಕಾರಣದಿಂದ ಗೋದ್ರಾ ಹತ್ಯಾಕಾಂಡ ಎಂಬ ಹೆಸರು ಬಂದಿತ್ತು.

ರೈಲಿನಲ್ಲಿದ್ದ ಕರಸೇವಕರು ಮತ್ತು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿದ್ದ ಮುಸ್ಲಿಂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಕ್ಕೆ ಕಾರಣ ಇಲ್ಲಸಲ್ಲದ ಗಾಳಿ ಸುದ್ದಿ. ಮುಸ್ಲಿಂ ಹುಡುಗಿಯೊಬ್ಬಳನ್ನು ಅಪಹರಿಸಲಾಗಿದೆ ಎಂದು ಯಾರೋ ಸುದ್ದಿ ಮಾಡಿದ್ದರು.

ಕೊಂಚ ಹೊತ್ತಿನ ನಂತರ ಎಲ್ಲವೂ ತಹಬದಿಗೆ ಬಂದು ರೈಲು ಹೊರಟಿತ್ತು. ಆದರೆ ಅಷ್ಟು ಹೊತ್ತಿಗೆ ರೈಲಿಗೆ ಕಲ್ಲು ತೂರಲು ಆರಂಭಿಸಲಾಗಿತ್ತು. ಕೆಲವರು ಚೈನ್ ಎಳೆದಿದ್ದರು. ಹೀಗೆ ಮಾಡಿದ್ದು ಮುಸ್ಲಿಮರ ಗುಂಪು. ಸುಮಾರು 500ರಷ್ಟಿದ್ದ ಮುಸ್ಲಿಮರ ಗುಂಪು ಗೋದ್ರಾ ಸಮೀಪದ 'ಸಿಗ್ನಲ್ ಫಾಡಿಯಾ' ಎಂಬಲ್ಲಿ ರೈಲಿಗೆ ದಾಳಿ ಮಾಡಿ, ಮಹಿಳೆಯ ಎಸ್6 ಕೋಚ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಯೇ ಬಿಟ್ಟಿತು.

ಸುಮಾರು 140 ಲೀಟರ್ ಪೆಟ್ರೋಲ್ ಸುರಿಯಲಾಗಿತ್ತು. ಘಟನೆಯಲ್ಲಿ 23 ಪುರುಷರು, 15 ಮಹಿಳೆಯರು ಹಾಗೂ 20 ಮಕ್ಕಳು ಸಜೀವ ದಹನಗೊಂಡರೆ, 250ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾದರು.

ಹೌದೆಂದಿತ್ತು ಸಿಟ್...
ಪ್ರಕರಣ ಸಂಬಂಧ ದಾಖಲಾಗಿದ್ದ ಮೊತ್ತ ಮೊದಲ ಪೊಲೀಸ್ ಎಫ್ಐಆರ್, ಇದು ಯಾವುದೇ ಗುಂಪಿನ ಪೂರ್ವನಿಯೋಜಿತ ಕೃತ್ಯವಲ್ಲ ಎಂದು ಹೇಳಿತ್ತು. ಆದರೆ ಇದನ್ನು ನಿರಾಕರಿಸಿದ್ದ ವಿಶೇಷ ತನಿಖಾ ದಳ (ಸಿಟ್), ಮುಸ್ಲಿಮರ ಗುಂಪೊಂದು ಪೂರ್ವನಿಯೋಜಿತವಾಗಿ ರೈಲಿನ ಬೋಗಿಗೆ ಬೆಂಕಿ ಹಚ್ಚಿತ್ತು ಎಂದು ಹೇಳಿತ್ತು.

ಕರಸೇವಕರ ಹತ್ಯಾಕಾಂಡ ನಡೆಯುವ ಮುನ್ನಾ ದಿನವೇ 140 ಲೀಟರುಗಳಷ್ಟು ಪೆಟ್ರೋಲನ್ನು ಶೇಖರಿಸಿಡಲಾಗಿತ್ತು ಎಂದು ಸಿಟ್ ಘಂಟಾಘೋಷವಾಗಿ ಸಾರಿತ್ತು.

ಆದರೆ ಇದನ್ನು ನಿರಾಕರಿಸಿದ್ದು ರೈಲ್ವೆ ಸಚಿವಾಲಯವು ರಚನೆ ಮಾಡಿದ್ದ ಆಯೋಗ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡದ್ದು ಬಹುತೇಕ ಒಂದು ಆಕಸ್ಮಿಕ ಘಟನೆ ಎಂದು ಅದು (ನ್ಯಾಯಮೂರ್ತಿ ಯು.ಸಿ. ಬ್ಯಾನರ್ಜಿ ಆಯೋಗ) 2005ರಲ್ಲಿ ಹೇಳಿತ್ತು. ಆದರೆ ಈ ತನಿಖಾ ಆಯೋಗದ ರಚನೆಯೇ ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿತು.

ಪೋಟಾ ಕಾಯ್ದೆಯಡಿ ನಡೆದ ನ್ಯಾಯಾಂಗ ತನಿಖೆ ಬೇರೆಯದೇ ವರದಿ ನೀಡಿತು. ರೈಲಿಗೆ ಬೆಂಕಿ ಹಚ್ಚಿದ್ದು ಮುಸ್ಲಿಮರ ಗುಂಪು ಹೌದು. ಆದರೆ ಇದು ಪೂರ್ವ ನಿಯೋಜಿತ ಕೃತ್ಯವಲ್ಲ. ಸ್ವಯಂ ಪ್ರಚೋದನೆಗೊಂಡು ನಡೆಸಲಾದ ಕೃತ್ಯ ಇರಬಹುದು ಎಂದು ಅಭಿಪ್ರಾಯಪಟ್ಟಿತು.

ಆದರೆ, ಗುಜರಾತ್ ಸರಕಾರ ರಚಿಸಿದ್ದ ಆಯೋಗವೊಂದು (ನಾನಾವತಿ ಆಯೋಗ) ಸಿಟ್ ವರದಿಯನ್ನೇ 2008ರಲ್ಲಿ ಎತ್ತಿ ಹಿಡಿಯಿತು. ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ್ದು ಒಂದು ಪೂರ್ವ ನಿಯೋಜಿತ ಪಿತೂರಿ ಎಂದು ಆಯೋಗವು ಒಪ್ಪಿಕೊಂಡಿತು.

ಅತ್ತ ಗುಜರಾತ್ ಹೈಕೋರ್ಟ್ 2009ರ ಫೆಬ್ರವರಿಯಲ್ಲಿ ಪೋಟಾ ಸಮಿತಿಯ ವರದಿ ಸರಿ ಇದೆ ಎಂದಿತು. ಗೋದ್ರಾ ರೈಲು ಘಟನೆ ಹಿಂದೆ ಪಿತೂರಿ ಇದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿತು.
ಸಂಬಂಧಿತ ಮಾಹಿತಿ ಹುಡುಕಿ