ಶ್ರೀನಗರಕ್ಕೆ ಹೊರಟಿದ್ದ ಬಿಜೆಪಿ ನಾಯಕರಿಗೆ ಜಮ್ಮು ವಿಮಾನ ನಿಲ್ದಾಣದಲ್ಲಿ ಹಲವಾರು ಗಂಟೆಗಳ ದಿಗ್ಬಂಧನ ವಿಧಿಸಿದ ನಂತರ ಬಂಧಿಸಿ ಪಂಜಾಬ್‌ನಲ್ಲಿ ಬಿಟ್ಟ ನಂತರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಮತ್ತು ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದ ಜಮ್ಮು-ಕಾಶ್ಮೀರ ಸರಕಾರಗಳು, ಯಾವುದೇ ಕಾರಣಕ್ಕೂ ಲಾಲ್‌ಚೌಕ್‌ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲು ಅವಕಾಶ ನೀಡುವುದಿಲ್ಲ ಎಂದಿವೆ.
ನಿನ್ನೆ (ಸೋಮವಾರ) ವಿಮಾನದ ಮೂಲಕ ಲಾಲ್‌ಚೌಕ್‌ಗೆ ಹೊರಟಿದ್ದ ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಅನಂತ್ ಕುಮಾರ್ ಅವರನ್ನು ಜಮ್ಮು ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ವಿಮಾನದ ಮೂಲಕ ದೆಹಲಿಗೆ ವಾಪಸ್ ಹೋಗುವಂತೆ ಒತ್ತಡ ಹೇರಲಾಗಿತ್ತು. ಇದಕ್ಕೆ ನಾಯಕರು ಬಗ್ಗದೇ ಇದ್ದಾಗ, ರಾತ್ರಿ ಹೊತ್ತು ಅವರನ್ನು ಬಂಧಿಸಲಾಯಿತು.
ಬಳಿಕ ಅವರನ್ನು ಜಮ್ಮು-ಕಾಶ್ಮೀರ ಗಡಿ ಭಾಗದಲ್ಲಿನ ಪಂಜಾಬ್‌ನಲ್ಲಿನ ಮಾಧೊಪುರ್ ಎಂಬಲ್ಲಿಗೆ ಪ್ರತ್ಯೇಕ ಕಾರುಗಳಲ್ಲಿ ತುರುಕಿ ಒಯ್ಯಲಾಗಿತ್ತು.
ಧ್ವಜಾರೋಹಣ ಮಾಡಿಯೇ ಸಿದ್ಧ... ಹೀಗೆಂದು ಹೇಳಿರುವುದು ಬಿಜೆಪಿ. ಸರಕಾರಗಳು ಎಷ್ಟೇ ಅಡ್ಡಿ ಮಾಡಿದರೂ, ನಾವು ಶ್ರೀನಗರದ ಲಾಲ್‌ಚೌಕ್‌ನಲ್ಲಿ ಜನವರಿ 26ರಂದು ಧ್ವಜಾರೋಹಣ ಮಾಡಿಯೇ ಸಿದ್ಧ. ಭಾರೀ ಸಂಖ್ಯೆಯಲ್ಲಿ ನಾವು ಜಮಾವಣೆಗೊಂಡು ರಾಷ್ಟ್ರ ಧ್ವಜವನ್ನು ಹಾರಿಸುತ್ತೇವೆ ಎಂದು ಸುಷ್ಮಾ ಸ್ವರಾಜ್ ಹೇಳಿಕೊಂಡಿದ್ದಾರೆ.
ನಾವಿಲ್ಲಿ ಬಂದಿರುವುದು ಸತ್ಯಾಗ್ರಹ ಮಾಡಲು ಅಲ್ಲ. ನಾವು ಬಂದಿರುವುದು ತಿರಂಗ ಯಾತ್ರೆಗಾಗಿ. ಏನೇ ಆಗಲಿ, ಅದನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ನಾವು ಮತ್ತೆ ಜಮ್ಮು-ಕಾಶ್ಮೀರಕ್ಕೆ ಹೋಗುತ್ತೇವೆ ಎಂದು ಟ್ವಿಟ್ಟರಿನಲ್ಲಿ ತಿಳಿಸಿದ್ದಾರೆ.
PR
ಮಾಧೊಪುರದಲ್ಲಿ ಮಂಗಳವಾರ 50,000ಕ್ಕೂ ಹೆಚ್ಚು ಬಿಜೆಪಿ ಮತ್ತು ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಸಭೆ ಸೇರಲಿದ್ದು, ಬಳಿಕ ಲಖಾಂಪುರ್ ಗಡಿ ಮೂಲಕ ಜಮ್ಮು-ಕಾಶ್ಮೀರ ಪ್ರವೇಶಿಸಲು ನಿರ್ಧರಿಸಲಾಗಿದೆ.
ತಿಕ್ಕಾಟ ಬಿಡಿ: ಚಿದಂಬರಂ ಜಮ್ಮು-ಕಾಶ್ಮೀರದ ಶಾಂತಿಯ ಮೇಲೆ ಪರಿಣಾಮ ಬೀರುವ ಯಾವುದೇ ರಾಜಕೀಯ ಅಜೆಂಡಾವನ್ನು ಪ್ರದರ್ಶಿಸಲು ಮುಂದಾಗಬೇಡಿ. ನಿಮ್ಮ ಸಂಘರ್ಷದ ಹಾದಿಯನ್ನು ಕೈ ಬಿಡಿ ಎಂದು ಬಿಜೆಪಿ ನಾಯಕರಿಗೆ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಕರೆ ನೀಡಿದ್ದಾರೆ.
ಶ್ರೀನಗರಕ್ಕೆ ಯಾವುದೇ ಯಾತ್ರೆಯನ್ನು ಪ್ರವೇಶಿಸಲು ಅವಕಾಶ ಅಥವಾ ಯಾವುದೇ ಸಮಾವೇಶಕ್ಕೆ ಲಾಲ್‌ಚೌಕ್‌ನಲ್ಲಿ ಅವಕಾಶ ನೀಡುವುದಿಲ್ಲ ಎಂದು ಜಮ್ಮು-ಕಾಶ್ಮೀರ ಸರಕಾರವು (ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಸರಕಾರ) ಈಗಾಗಲೇ ಸ್ಪಷ್ಟಪಡಿಸಿದೆ ಎಂದೂ ಗೃಹಸಚಿವ ಚಿದಂಬರಂ ಇದೇ ಸಂದರ್ಭದಲ್ಲಿ ಪುನರುಚ್ಛರಿಸಿದ್ದಾರೆ.
ರಾಜ್ಯ ಸರಕಾರವು ಹೊರಡಿಸಿರುವ ಆದೇಶವನ್ನು ಬಿಜೆಪಿ ನಾಯಕರು ಗೌರವಿಸಬೇಕು. ರಾಜ್ಯ ಸರಕಾರವು ಹೊರಡಿಸಿರುವ ನಿರ್ಬಂಧ ಆಜ್ಞೆಯನ್ನು ಬಿಜೆಪಿ ನಾಯಕರು ಉಲ್ಲಂಘಿಸಲು ಯತ್ನಿಸಿದರೆ, ಅದು ದುರದೃಷ್ಟಕರ ಮತ್ತು ಶಾಂತಿ ಭಂಗಕ್ಕಾಗಿ ಉದ್ದೇಶಪೂರ್ವಕ ಯತ್ನ ಎಂದೆನಿಸಿಕೊಳ್ಳಲಿದೆ. ಜಮ್ಮು-ಕಾಶ್ಮೀರದ ಶಾಂತಿಗೆ ಭಂಗ ತರುವ ಯಾವುದೇ ರಾಜಕೀಯ ಅಜೆಂಡಾವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಯತ್ನ ವಿಫಲಕ್ಕೆ ವೇದಿಕೆ ಸಜ್ಜು... ಬಿಜೆಪಿ ನಾಯಕರನ್ನು ಜಮ್ಮು-ಕಾಶ್ಮೀರದಿಂದ ಬಂಧಿಸಿ, ಪಂಜಾಬ್‌ಗೆ ಕೊಂಡೊಯ್ದು ಬಿಟ್ಟರೂ, ಮತ್ತೆ ಜಮ್ಮು ಪ್ರವೇಶಿಸಿರುವುದಾಗಿ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮತ್ತು ಜಮ್ಮು ಸರಕಾರಗಳು, ಬಿಜೆಪಿಯ ಯಾತ್ರೆ ವಿಫಲಗೊಳಿಸಲು ವೇದಿಕೆ ಸಜ್ಜುಗೊಳಿಸಿವೆ.
ಅದರ ಮೊದಲನೆ ಹೆಜ್ಜೆಯೇ, ಪಂಜಾಬ್-ಜಮ್ಮು ಗಡಿಯನ್ನು ಬಂದ್ ಮಾಡುವುದು. ಗಣರಾಜ್ಯೋತ್ಸವದ ದಿನ ಶ್ರೀನಗರ ತಲುಪಲು ಪಂಜಾಬ್ ಮೂಲಕ ಜಮ್ಮು ಪ್ರವೇಶಿಸಲಿರುವ ಬಿಜೆಪಿಗೆ, ಗಡಿಯನ್ನು ಮುಚ್ಚಿದರೆ ಯಾವುದೇ ದಾರಿ ಇರುವುದಿಲ್ಲ. ಹಾಗಾಗಿ ಧ್ವಜಾರೋಹಣ ಕಾರ್ಯಕ್ರಮ ವಿಫಲವಾಗಲಿದೆ.
ಪಂಜಾಬ್-ಜಮ್ಮು ಗಡಿ ಭಾಗದಲ್ಲಿನ ಲಖಾಂಪುರ್‌ನಲ್ಲಿ ಈಗಾಗಲೇ ಸೆಕ್ಷನ್ 144 ಹೇರಲಾಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಕೂಡ ಮುಚ್ಚಲಾಗಿದೆ. ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವುದು, ಸದ್ದಡಗಿಸುವ ಕಾರ್ಯಗಳೂ ನಡೆಯುತ್ತಿವೆ.
ಚಿತ್ರ: 1992ರಲ್ಲಿ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಸಂದರ್ಭ. ಇಲ್ಲಿ ಮುರಳಿ ಮನೋಹರ ಜೋಶಿ ಮತ್ತು ನರೇಂದ್ರ ಮೋದಿಯವರನ್ನು ಕಾಣಬಹುದು. ಇದರ ನಂತರ ಸತತ 19 ವರ್ಷಗಳ ಕಾಲ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿತ್ತು. ಇದು ಸ್ಥಗಿತಗೊಂಡದ್ದು 2010ರಲ್ಲಿ. ಈ ವರ್ಷವೂ ಧ್ವಜಾರೋಹಣ ಮಾಡಲು ಬಿಡುವುದಿಲ್ಲ ಎಂದು ಸರಕಾರಗಳು ಘೋಷಿಸಿವೆ.