ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ವಿಸ್ ಹಣ ತರೋದು ಸುಲಭವಲ್ಲ, ಹೆಸರು ಹೇಳಲ್ಲ: ಕೇಂದ್ರ (Black money | Pranab Mukherjee | India | Swiss Bank)
Bookmark and Share Feedback Print
 
ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಅಕ್ರಮವಾಗಿ ಶೇಖರಿಸಿ ಇಟ್ಟಿರುವ ಭಾರೀ ಪ್ರಮಾಣದ ಕಪ್ಪುಹಣವನ್ನು ವಾಪಸ್ ದೇಶಕ್ಕೆ ತರುವ ಬಗ್ಗೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಯಾವುದೇ ಗಂಭೀರ ಚಿಂತನೆ ನಡೆಸುತ್ತಿಲ್ಲ. ಇದು ಬಹಿರಂಗವಾಗಿರುವುದು ವಿತ್ತ ಸಚಿವ ಪ್ರಣಬ್ ಮುಖರ್ಜಿಯವರ ಮೂಲಕ.

ಇಂದು ರಾಷ್ಟ್ರ ರಾಜಧಾನಿಯಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಕಪ್ಪುಹಣವನ್ನು ವಾಪಸ್ ತರುವುದಕ್ಕಿಂತ ಹೆಚ್ಚು ಕಪ್ಪುಹಣವನ್ನು ತಡೆಯುವ ಕುರಿತೇ ಮಾತನಾಡಿದರು. ಅಲ್ಲದೆ, ಎಷ್ಟು ಪ್ರಮಾಣದ ಕಪ್ಪುಹಣವಿದೆ ಎನ್ನುವುದರ ಕುರಿತು ನಿಖರ ಮಾಹಿತಿಯಿಲ್ಲ ಎಂದರು.

ಅಮೆರಿಕಾ ಪ್ರಜೆಗಳು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದ ಕಪ್ಪುಹಣವನ್ನು ಅಮೆರಿಕಾ ವಾಪಸ್ ಪಡೆದುಕೊಂಡದ್ದು ಖಾಸಗಿ ಒಪ್ಪಂದದ ಮೂಲಕ. ನಾವು ಕೂಡ ಈ ಸಂಬಂಧ ಹಲವು ವಿದೇಶಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಭಾರತೀಯರು ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ, ತೆರಿಗೆ ತಪ್ಪಿಸಿ ಇಟ್ಟಿರುವ ಹಣವನ್ನು ವಾಪಸ್ ತರುವ ಬಗ್ಗೆ 65 ದೇಶಗಳ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದರು.

ಸ್ವಿಜರ್ಲೆಂಡ್ ಸರಕಾರವು ತನ್ನಲ್ಲಿ ಠೇವಣಿ ಇಟ್ಟಿರುವ ವಿದೇಶಿ ಪ್ರಜೆಗಳ ಕಪ್ಪುಹಣದ ಕುರಿತು ಇದುವರೆಗೆ ಯಾವುದೇ ಸರಕಾರದ ಜತೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಸ್ವಿಸ್ ಬ್ಯಾಂಕ್‌ನಿಂದ ಅಮೆರಿಕಾವು ಭಾರೀ ಕಪ್ಪುಹಣವನ್ನು ವಾಪಸ್ ಪಡೆದುಕೊಂಡಿತ್ತು. 'ಯುಬಿಎಸ್ ಬ್ಯಾಂಕ್'ನಲ್ಲಿ ಅಮೆರಿಕಾ ಪ್ರಜೆಗಳು ಇಟ್ಟಿದ್ದ ಕಪ್ಪುಹಣವನ್ನು ವಾಪಸ್ ಪಡೆಯಲಾಗಿತ್ತು. ಯಾರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ನ್ಯಾಯಾಲಯದಿಂದ ಹೊರಗಡೆ ಇತ್ಯರ್ಥಗೊಳಿಸುವ ಒಪ್ಪಂದದ ಅಡಿಯಲ್ಲಿ ಅಮೆರಿಕಾಕ್ಕೆ ಯುಬಿಎಸ್ ಬ್ಯಾಂಕ್ ಮಾಹಿತಿ ನೀಡಿತ್ತು ಎಂದು ವಿವರಣೆ ನೀಡಿದರು.

ಅಲ್ಲದೆ, ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಹಣದ ನಿಖರ ಅಂದಾಜು ನಮ್ಮಲ್ಲಿಲ್ಲ. ಅದು ಸುಮಾರು 400 ಬಿಲಿಯನ್ ಡಾಲರುಗಳಿಂದ 1,400 ಬಿಲಿಯನ್ ಡಾಲರುಗಳು ಆಗಿರಬಹುದು ಎಂದ ವಿತ್ತ ಸಚಿವರು, ಇದ್ಯಾವುದೂ ನಂಬಲರ್ಹ ಅಂದಾಜು ಅಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಪ್ಪುಹಣದ ಕುರಿತ ಕೇಂದ್ರ ಸರಕಾರದ ನಿಲುವನ್ನು ಸಚಿವರು ಸ್ಪಷ್ಟಪಡಿಸಿದರು.

ಕಪ್ಪುಹಣ ನಿಯಂತ್ರಣಕ್ಕೆ ಕೇಂದ್ರ ಸರಕಾರವು ಬದ್ಧವಾಗಿದೆ. ಈ ಕುರಿತು ಹೊಸ ಕಾನೂನನ್ನು ಅಸ್ತಿತ್ವಕ್ಕೆ ತರಲಾಗುತ್ತದೆ. ಕಪ್ಪುಹಣದ ನಿಯಂತ್ರಣಕ್ಕೆ ಪಂಚಸೂತ್ರಗಳನ್ನು ಸಿದ್ಧಪಡಿಸಲಾಗುತ್ತದೆ. ಎಂಟು ಆದಾಯ ತೆರಿಗೆ ನಿಗಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದರು.

ತೆರಿಗೆ ವಂಚಿಸುತ್ತಿರುವ ಭಾರತೀಯರ ಬಗ್ಗೆ ಮಾಹಿತಿಯನ್ನು ನಾವು ಕಲೆ ಹಾಕುತ್ತಿದ್ದೇವೆ. ಈ ಸಂಬಂಧ 23 ದೇಶಗಳ ಜತೆ ನಾವು ದ್ವಿ-ತೆರಿಗೆ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ನಮ್ಮ ಪ್ರಮುಖ ಗಮನವಿರುವುದು ಕಪ್ಪುಹಣ ಸಾಗಣೆ ತಡೆಯುವುದು. ಇದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖರ್ಜಿ ತಿಳಿಸಿದರು.

ಕಪ್ಪುಹಣ ಕುರಿತ ಮಾಹಿತಿ ವಿನಿಮಯಕ್ಕೆ ನಾವು ಹಲವು ದೇಶಗಳ ಜತೆ ಒಪ್ಪಂದ ಮಾಡಿಕೊಂಡಿರುವುದು ಹೌದು. ಆದರೆ ಕಪ್ಪುಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಭಾರತೀಯರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಯಾರಿಂದಲೂ ಏನನ್ನೂ ಮುಚ್ಚಿಡುವ ಯತ್ನವಿಲ್ಲ. ಆದರೆ ಒಪ್ಪಂದಗಳನ್ನು ಉಲ್ಲಂಘಿಸುವುದು ಸಾಧ್ಯವಿಲ್ಲ ಎಂದರು.

ಭಾರತದಲ್ಲಿ ತೆರಿಗೆ ವಂಚಿಸಿ, ಅಡ್ಡದಾರಿಯ ಮೂಲಕ ವಿದೇಶಗಳಿಗೆ ಹಣ ಸಾಗಿಸಿದ ವಂಚಕರ ವಿರುದ್ಧ ಆದಾಯ ತೆರಿಗೆ ಇಲಾಖೆಯು ಪ್ರಕರಣ ದಾಖಲಿಸಿದರೆ ಮಾತ್ರ ಕೇಂದ್ರ ಸರಕಾರಕ್ಕೆ ಅಂತವರ ಹೆಸರುಗಳನ್ನು ಬಹಿರಂಗಪಡಿಸಬಹುದು. ಯಾವುದೇ ಕಾನೂನು ಚೌಕಟ್ಟಿಲ್ಲದೆ ಆರೋಪಿಗಳ ಮಾಹಿತಿ ಬಹಿರಂಗ ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಕೇಂದ್ರದ ನಿಲುವನ್ನು ಸಚಿವರು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ