ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಷ್ಕರ್ ಸೆಕ್ರೆಟರಿ ತಾನು ಎಂದು ಹೇಳಿಕೊಳ್ಳುತ್ತಾ, ಹೆಸರಲ್ಲಿ ಹಣ ಸಂಗ್ರಹಿಸುತ್ತಾ ಜನರಿಗೆ ವಂಚಿಸುತ್ತಿರುವ ವ್ಯಕ್ತಿಯೊಬ್ಬನ ಬಗ್ಗೆ ಸ್ವತಃ ಲತಾ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸುನಿಲ್ ಚೌಹಾಣ್ ಹೆಸರಿನ ವ್ಯಕ್ತಿಯೊಬ್ಬ, ಲತಾ ಜೊತೆಗೆ ಕುಳಿತಿರುವಂತೆ ಇರುವ ನಕಲಿ ಭಾವಚಿತ್ರವೊಂದನ್ನು ಜನರಿಗೆ ತೋರಿಸಿ, ಲತಾ ಮಂಗೇಷ್ಕರ್ ಅವರ ಗಾಯನ ಕಾರ್ಯಕ್ರಮ ಮಾಡಿಸುತ್ತಿದ್ದೇನೆ ಎನ್ನುತ್ತಾ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ. ಈ ವಿಷಯವು ಲತಾ ಅವರ ಗಮನಕ್ಕೆ ಬಂದಿದ್ದು, ಟ್ವಿಟರ್‌ನಲ್ಲಿ ಈ ಕುರಿತು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸುಳ್ಳನ ಕೃತ್ಯದಿಂದ ತನಗೆ ನಿಜಕ್ಕೂ ಆಘಾತವಾಗಿದೆ. ತಾನು ಆತನಿಗಾಗಿ ಯಾವುದೇ ಸಂಗೀತ ಕಾರ್ಯಕ್ರಮ ನೀಡುತ್ತಿಲ್ಲ, ಅಥವಾ ಆತನೊಂದಿಗೆ ಯಾವುದೇ ರೀತಿಯ ಸಂಪರ್ಕವೂ ತನಗಿಲ್ಲ. ಈ ನಕಲಿ ಫೋಟೋ ತೋರಿಸುತ್ತಾ ಆತ ಜನರನ್ನು ಮರುಳು ಮಾಡುತ್ತಿದ್ದಾನೆ ಎಂದಿರುವ ಲತಾ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿಯೂ, ಈ ವಂಚಕನ ಬಲೆಗೆ ಯಾರೂ ಬೀಳದಂತೆಯೂ ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆತ ಜನರಿಗೆ ತೋರಿಸುತ್ತಿದ್ದ ಫೋಟೋವನ್ನು ಕೂಡ ಲತಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.