ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 62ನೇ ಗಣರಾಜ್ಯೋತ್ಸವದಲ್ಲಿ ಸೇನೆಯ ವಿರಾಟ್ ದರ್ಶನ (62nd Republic Day | R-Day parade | Pratibha Patil | Manmohan Singh)
Bookmark and Share Feedback Print
 
ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವಾದ ಇಂದು ದೇಶಕ್ಕೆ ದೇಶವೇ 62ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧ್ವಜಾರೋಹಣದ ನಂತರ ರಾಷ್ಟ್ರ ಮುಖಂಡರು, ವಿದೇಶಿ ಅತಿಥಿಗಳು ಮತ್ತು ನಾಗರಿಕರ ಸಮ್ಮುಖದಲ್ಲಿ ಭಾರತದ ಮಿಲಿಟರಿ ಶಕ್ತಿ ಹಾಗೂ ಕಲೆ-ಸಂಸ್ಕೃತಿಗಳ ಪ್ರದರ್ಶನ ಮಾಡಲಾಯಿತು.

ಬೆಳಿಗ್ಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಇಂಡಿಯಾ ಗೇಟ್‌ನಲ್ಲಿನ ಅಮರ್ ಜವಾನ್ ಜ್ಯೋತಿ ಸೈನಿಕರ ಸ್ಮಾರಕ ಸ್ಥಳಕ್ಕೆ ತೆರಳಿ ಗೌರವ ಅರ್ಪಿಸಿದರು. ಬಳಿಕ ಧ್ವಜಾರೋಹಣ ಮಾಡಲಾಯಿತು.

ಗೌರವ ವಂದನೆ ಸ್ವೀಕರಿಸಿದ ನಂತರ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರು, ಕಾಬೂಲ್ ರಾಯಭಾರ ಕಚೇರಿಯ ದಾಳಿಯಲ್ಲಿ ವೀರಮರಣವನ್ನಪ್ಪಿದ ಮೇಜರ್ ಲೈಶ್ರಾಮ್ ಜ್ಯೋತಿನ್ ಸಿಂಗ್ ಅವರಿಗೆ ಅಶೋಕ ಚಕ್ರವನ್ನು ಮರಣೋತ್ತರವಾಗಿ ಪ್ರದಾನ ಮಾಡಿದರು.

ಮೂವರು ಪರಮವೀರ ಚಕ್ರ ಪುರಸ್ಕೃತರ ಪೆರೇಡ್‌ನೊಂದಿಗೆ ರಾಜಪಥದಲ್ಲಿ ಪಥಸಂಚಲನ ಆರಂಭವಾಯಿತು. ಈ ಸಂದರ್ಭದಲ್ಲಿ ಮಿಲಿಟರಿಯು ಟಿ-90 ಯುದ್ಧ ಟ್ಯಾಂಕ್, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಮತ್ತು ಧ್ರುವ್ ಹೆಲಿಕಾಪ್ಟರ್‌ಗಳನ್ನು ಪ್ರದರ್ಶಿಸಿತು.

ನೌಕಾಪಡೆಯು ಐಎನ್ಎಸ್ ವಿರಾಟ್ ಹಾಗೂ ವಾಯುಸೇನೆಯು ಎಡಬ್ಲ್ಯೂಎಸಿಎಸ್ ಮತ್ತು ಏರೋಸ್ಟಾಟ್ ರಾಡಾರ್ ಪ್ರದರ್ಶಿಸಿತು. ಇತರ ರಕ್ಷಣಾ ವಿಭಾಗಗಳು ಕೂಡ ತಮ್ಮ ಸಾಧನೆಗಳನ್ನು ಸ್ತಬ್ಧಚಿತ್ರಗಳ ಮೂಲಕ ತೋರಿಸಿದವು.

ಇಂಡೋನೇಷಿಯಾ ಅಧ್ಯಕ್ಷ ಯುಧೊಯುನೋ ಮತ್ತು ಅವರ ಪತ್ನಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಪ್ರಮುಖ ಅತಿಥಿಗಳು. ಉಳಿದಂತೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ರಕ್ಷಣಾ ಸಚಿವ ಎ.ಕೆ. ಆಂಟನಿ, ಗೃಹಸಚಿವ ಪಿ. ಚಿದಂಬರಂ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸಚಿವ ಸಂಪುಟದ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ರಾಜಪಥದಲ್ಲಿ ನಡೆದ ಆಕರ್ಷಕ ಪಥಸಂಚಲನವನ್ನು ಕಣ್ಣುಗಳಲ್ಲಿ ತುಂಬಿಕೊಂಡರು.
PR

ಮನಸೂರೆಗೊಂಡ ಸ್ತಬ್ಧ ಚಿತ್ರಗಳು...
ಕರ್ನಾಟಕ ಸೇರಿದಂತೆ 13 ರಾಜ್ಯಗಳು, 10 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಸೇರಿದಂತೆ ಒಟ್ಟು 23 ಸ್ತಬ್ಧ ಚಿತ್ರಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ನೆರೆದಿದ್ದ ಗಣ್ಯರು, ವಿದೇಶೀಯರು ಹಾಗೂ ಜನತೆಯ ಮನಸೂರೆಗೊಂಡವು.

ಕರ್ನಾಟಕವು ಈ ಬಾರಿ ಬಿದರಿ ಕಲೆಯ ಸ್ತಬ್ಧಚಿತ್ರವನ್ನು (ಚಿತ್ರದಲ್ಲಿ ಗಮನಿಸಿ) ಪ್ರದರ್ಶಿಸಿ ಗಮನ ಸೆಳೆಯಿತು. ರಾಷ್ಟ್ರಪ್ರಶಸ್ತಿ ವಿಜೇತ ಬಿದರಿ ಕಲಾವಿದ ರಶೀದ್ ಅಹ್ಮದ್ ಖಾದ್ರಿ ಮತ್ತು ಇತರ ಕಲಾವಿದರು ಬಿದರಿ ಕಲಾಕೃತಿ ನಿರ್ಮಾಣದಲ್ಲಿ ತೊಡಗಿರುವಂತೆ ಬಿಂಬಿತಗೊಂಡಿರುವ ಕಲಾಕೃತಿಯಿದು.

ಬಹಮನಿ ಸುಲ್ತಾನ ಕಾಲದಲ್ಲಿ ಜನಪ್ರಿಯವಾಗಿದ್ದ ಬಿದರಿ ಕಲೆಗೆ ಬೀದರ್ ಹೆಸರುವಾಸಿ. ಕಪ್ಪು ಕ್ಯಾನ್ವಾಸಿನಲ್ಲಿ ಬೆಳ್ಳಿಗೆರೆಗಳ ಮೂಲಕ ಮಿಂಚುವ ಕಲೆಯಾಗಿರುವ ಬಿದರಿ ನಿರ್ಮಾಣದಲ್ಲಿ ಕಲಾವಿದನದ್ದು ಭಾರೀ ಶ್ರಮವಹಿಸಬೇಕಾದ ಪಾತ್ರ.

ಉಳಿದಂತೆ ಕೇರವು ಕಥಕ್ಕಳಿ-ಮೋಹಿನಿಯಾಟ್ಟಂ, ಗುಜರಾತ್ ಬುದ್ಧ-ಅಶೋಕನ ಪ್ರತಿಕೃತಿಗಳನ್ನು ಪ್ರದರ್ಶಿಸಿದವು. ಅಸ್ಸಾಂ, ಬಿಹಾರ, ದೆಹಲಿ, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಪಂಜಾಬ್, ಸಿಕ್ಕಿಂ ಮತ್ತು ತ್ರಿಪುರಾಗಳ ಸುಂದರ ಸ್ತಬ್ಧಚಿತ್ರಗಳು ಪೆರೇಡ್‌ನಲ್ಲಿ ಭಾಗವಹಿಸಿದ್ದವು.

ಕೇಂದ್ರ ಸಂಸ್ಕೃತಿ, ಗೃಹ, ಪರಿಸರ ಮತ್ತು ಅರಣ್ಯ, ಲೋಕೋಪಯೋಗಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ಮತ್ತು ಸಹಕಾರ, ಮಾನವ ಸಂಪನ್ಮೂಲಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರೈಲ್ವೆ ಮತ್ತು ಪಂಚಾಯತ್ ರಾಜ್ ಸಚಿವಾಲಯಗಳು, ರಕ್ಷಣಾ ವಿಭಾಗಗಳು ವಿಶಿಷ್ಟವಾದ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಿದವು.
ಸಂಬಂಧಿತ ಮಾಹಿತಿ ಹುಡುಕಿ