ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಾಲ್‌ಚೌಕ್‌ನಲ್ಲಿ ಬಿಜೆಪಿ ಧ್ವಜಾರೋಹಣ ಯತ್ನ; ಹಲವರ ಸೆರೆ (BJP | Lal Chowk | Jammu and Kashmir | UPA govt)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಜಮ್ಮು-ಕಾಶ್ಮೀರ ಸರಕಾರಗಳಿಗೆ ಸೆಡ್ಡು ಹೊಡೆದು, ಕೊನೆಯ ಕ್ಷಣದವರೆಗೂ ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದ ಬಿಜೆಪಿ ಕಾರ್ಯಕರ್ತರಿಗೆ ತೀವ್ರ ನಿರಾಸೆಯಾಗಿದೆ. ಕರ್ನಾಟಕದಿಂದ ಹೊರಟಿದ್ದ ಕಾರ್ಯಕರ್ತರು ಸೇರಿದಂತೆ ಹಲವರನ್ನು ಅಲ್ಲಿನ ಪೊಲೀಸರು ಬಂಧಿಸುವುದರೊಂದಿಗೆ ತಿರಂಗಾ ಯಾತ್ರೆ ಅಧಿಕೃತವಾಗಿ ಅಂತ್ಯಗೊಂಡಿದೆ.

ಕಳೆದ ವರ್ಷ ಸ್ಥಗಿತಗೊಂಡಿದ್ದ, 19 ವರ್ಷಗಳ ಕಾಲ ನಿರಂತರವಾಗಿ ನಡೆದಿದ್ದ ಲಾಲ್‌ಚೌಕ್ ಧ್ವಜಾರೋಹಣ ಈ ಬಾರಿ ನಡೆಯಬೇಕು ಎಂದು ಬಿಜೆಪಿ ಪಣ ತೊಟ್ಟಿತ್ತು. ಆದರೆ ಇದನ್ನು ಸರಕಾರಗಳು ವಿರೋಧಿಸಿದ್ದವು. ಅದೇ ನಿಟ್ಟಿನಲ್ಲಿ ಲಾಲ್‌ಚೌಕ್‌ನಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಈ ನಡುವೆಯೂ ಧ್ವಜಾರೋಹಣಕ್ಕೆ ಯತ್ನಿಸಿದಾಗ, ಕಾರ್ಯಕರ್ತರನ್ನು ಬಂಧಿಸಲಾಗಿದೆ.

ವರದಿಗಳ ಪ್ರಕಾರ ಲಾಲ್‌ಚೌಕ್‌ನ ಕ್ಲಾಕ್ ಟವರ್‌ನಿಂದ ಕಣ್ಣಳತೆ ದೂರದಲ್ಲಿನ ರೀಗಲ್ ಚೌಕ್‌ನಲ್ಲಿ ಬೆಳಿಗ್ಗೆ 8.30ರ ಹೊತ್ತಿಗೆ ರಾಷ್ಟ್ರಧ್ವಜ ಹಿಡಿದುಕೊಂಡಿದ್ದ ಹರ್ಯಾಣದ ಗುರ್ಗಾಂವ್ ನಿವಾಸಿಯಾಗಿರುವ ಶ್ರೀಕಾಂತ್ ಎಂಬ ಬಿಜೆಪಿಯ ಕಾರ್ಯಕರ್ತ ಕಾಣಿಸಿಕೊಂಡಿದ್ದ. ಈತನನ್ನು ತಕ್ಷಣವೇ ಪೊಲೀಸರು ಬಂಧಿಸಿ, ಧ್ವಜ ಹಾರಿಸದಂತೆ ತಡೆದರು.
PR

ಇತರೆ ಆರು ಮಂದಿ ಬಿಜೆಪಿ ಕಾರ್ಯಕರ್ತರನ್ನು ಇಲ್ಲೇ ಸಮೀಪದ ಹೊಟೇಲಿನಿಂದ ಬಂಧಿಸಲಾಗಿದೆ. ನಿಷೇದಾಜ್ಞೆ ಉಲ್ಲಂಘಿಸಿದ್ದ ಇವರನ್ನು ಬೆಳಿಗ್ಗೆ 11 ಗಂಟೆ ಹೊತ್ತಿಗೆ ಸೆರೆ ಹಿಡಿಯಲಾಗಿದೆ. ಇವರೆಲ್ಲರೂ ರಾಜ್ಯದಿಂದ ಹೊರಗಿನವರು ಮತ್ತು ತಮ್ಮ ಗುರುತು ಮರೆಮಾಚಲು ಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಐದು ಮಂದಿ ಸೆರೆ...
ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದು ಕರ್ನಾಟಕದಿಂದ ಮೂರು ತಂಡಗಳಲ್ಲಿ ಹೊರಟಿದ್ದವರಲ್ಲಿ ಒಟ್ಟು ಐದು ಕಾರ್ಯಕರ್ತರು ಈಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಕಾರ್ಯದರ್ಶಿ ಬೆಂಗಳೂರಿನ ಮೋಹನ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಸೇರಿದಂತೆ ಐವರು ಬಿಜೆಪಿ ಕಾರ್ಯಕರ್ತರು ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣ ಮಾಡಲು ಯತ್ನಿಸಿದಾಗ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಇವರ ಮೇಲೆ ಜಮ್ಮು-ಕಾಶ್ಮೀರ ಪೊಲೀಸರು ಹಲ್ಲೆ ಕೂಡ ನಡೆಸಿದ್ದಾರೆ. ಏಕತಾ ಯಾತ್ರೆಯನ್ನು ನಿನ್ನೆ ಪೊಲೀಸರು ತಡೆದಿದ್ದ ಹೊರತಾಗಿಯೂ, ಇವರು ಲಾಲ್‌ಚೌಕ್ ಸಮೀಪಕ್ಕೆ ಹೋಗಿದ್ದರು.

ಬಿಜೆಪಿ ನಾಯಕರ ಬಿಡುಗಡೆ...
ನಿನ್ನೆಯಷ್ಟೇ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಅನಂತ್ ಕುಮಾರ್ ಸೇರಿದಂತೆ ಹಲವು ನಾಯಕರು ಮತ್ತು ನೂರಾರು ಕಾರ್ಯಕರ್ತರನ್ನು ಇಂದು ಬಿಡುಗಡೆ ಮಾಡಲಾಗಿದೆ.

ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಏಕತಾ ಯಾತ್ರೆ ಮಾಡಿದ್ದ ಇವರನ್ನು ನಿನ್ನೆ ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದರು. ನಾಯಕರ ಜತೆ ಸುಮಾರು 500 ಕಾರ್ಯಕರ್ತರನ್ನು ಕೂಡ ಜೈಲಿಗಟ್ಟಲಾಗಿತ್ತು.

ಈ ನಡುವೆ, ಶ್ರೀನಗರ ಮತ್ತು ಜಮ್ಮುವಿನಲ್ಲಿ ನಡೆಯುವ ಸರಕಾರಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೀಡಿದ್ದ ಆಹ್ವಾನವನ್ನು ಬಿಜೆಪಿ ನಾಯಕರು ತಿರಸ್ಕರಿಸಿದ್ದರು.

ಚಿತ್ರ: 1992ರಲ್ಲಿ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಸಂದರ್ಭ. ಇಲ್ಲಿ ಮುರಳಿ ಮನೋಹರ ಜೋಶಿ ಮತ್ತು ನರೇಂದ್ರ ಮೋದಿಯವರನ್ನು ಕಾಣಬಹುದು. ಇದರ ನಂತರ ಸತತ 19 ವರ್ಷಗಳ ಕಾಲ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿತ್ತು. ಇದು ಸ್ಥಗಿತಗೊಂಡದ್ದು 2010ರಲ್ಲಿ. ಈ ವರ್ಷವೂ ಧ್ವಜಾರೋಹಣ ಮಾಡಲು ಸರಕಾರಗಳು ಬಿಟ್ಟಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ