ಶ್ರೀನಗರದ ಲಾಲ್‌ಚೌಕ್‌ನಲ್ಲಿ ಜಮ್ಮು-ಕಾಶ್ಮೀರ ಮತ್ತು ಕೇಂದ್ರ ಸರಕಾರಗಳು ಬಿಜೆಪಿಯ ರಾಷ್ಟ್ರ ಧ್ವಜಾರೋಹಣವನ್ನು ತಡೆದಿರುವುದು ಕ್ರಿಮಿನಲ್ ಕೃತ್ಯ ಎಂದು ಬಣ್ಣಿಸಿರುವ ಕೇಸರಿ ವರಿಷ್ಠ ಎಲ್.ಕೆ. ಅಡ್ವಾಣಿ, ಈ ಅಸಾಂವಿಧಾನಿಕ ಮತ್ತು ಕಾನೂನು ಬಾಹಿರ ಕ್ರಮಕ್ಕೆ ಮುಂದಾಗಿರುವ ಆಡಳಿತದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ನಡೆಸಿರುವುದಾಗಿ ಹೇಳಿದರು.
ಬಿಜೆಪಿಯು ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋಗಿ ಏನಾಗಿದೆಯೋ, ಅದು ಯಾವ ನಿಟ್ಟಿನಿಂದಲೂ ಸಮರ್ಥನೀಯವಲ್ಲ. ಅದು ಕಾನೂನು ಬಾಹಿರವಾದದ್ದು ಮತ್ತು ಕ್ರಿಮಿನಲ್ ಕೃತ್ಯ. ಇಂತಹ ಕೆಲವು ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುವ ನಿಟ್ಟಿನಲ್ಲಿ ನಾವು ನ್ಯಾಯಾಲಯಕ್ಕೆ ಹೋಗಬೇಕು ಎಂದೆನಿಸುತ್ತದೆ ಎಂದು ರಾಷ್ಟ್ರ ರಾಜಧಾನಿಯಲ್ಲಿ ತಿಳಿಸಿದರು.
ಕರ್ನಾಟಕದಿಂದ ಜಮ್ಮು-ಕಾಶ್ಮೀರಕ್ಕೆ ಹೊರಟಿದ್ದ ಬಿಜೆಪಿ ಕಾರ್ಯಕರ್ತರ ವಿಶೇಷ ರೈಲನ್ನು ದಿಕ್ಕು ತಪ್ಪಿಸಿದ ಘಟನೆಯನ್ನು ಕೂಡ ಅಡ್ವಾಣಿ ಖಂಡಿಸಿದ್ದು, ಇಂತಹ ಘಟನೆಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ನಡೆದಿಲ್ಲ ಎಂದರು.
ಬಿಜೆಪಿಯ ಯುವ ಮೋರ್ಚಾ ಹಮ್ಮಿಕೊಂಡಿದ್ದ ಏಕತಾ ಯಾತ್ರೆಯಲ್ಲಿ ಪಾಲ್ಗೊಂಡ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯ ವಿಪಕ್ಷದ ನಾಯಕ ಅರುಣ್ ಜೇಟ್ಲಿ ಮತ್ತು ಅನಂತ್ ಕುಮಾರ್ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದ ಅಡ್ವಾಣಿ ಮಾತನಾಡುತ್ತಿದ್ದರು.
ಅಲ್ಲದೆ ಜಮ್ಮುವಿನಿಂದ ನಿಮ್ಮನ್ನು ಹೊರಗೆ ಹಾಕಲಾಗಿದೆ ಎಂದು ಆದೇಶ ನೀಡಿ, ಬಿಜೆಪಿ ನಾಯಕರನ್ನು ಬಲವಂತವಾಗಿ ಹೊರ ದಬ್ಬಿದ ಕ್ರಮವನ್ನು ಕೂಡ ಬಿಜೆಪಿ ನಾಯಕ ಪ್ರಶ್ನಿಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವ ಹೊತ್ತಿನಲ್ಲಿ ಯಾವುದೇ ವ್ಯಕ್ತಿಗಳನ್ನು ಸ್ಥಳದಿಂದ ಹೊರ ದಬ್ಬಬೇಕು ಎಂಬ ಕಾನೂನು ಇಲ್ಲ ಎಂದರು.
ಪ್ರತ್ಯೇಕತಾವಾದಿಗಳಿಗೆ ಬೆಂಬಲ... ಬಿಜೆಪಿಯ ಏಕತಾ ಯಾತ್ರೆಯನ್ನು ತಡೆದಿರುವ ಜಮ್ಮು-ಕಾಶ್ಮೀರ ಮತ್ತು ಕೇಂದ್ರ ಸರಕಾರಗಳು ಪ್ರತ್ಯೇಕವಾದಿಗಳನ್ನು ಓಲೈಕೆ ಮಾಡಲು ಹೊರಟಿವೆ ಎಂದು ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
ಸೈದ್ಧಾಂತಿಕ ಮತ್ತು ಮಾನಸಿಕ ಎರಡೂ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತ್ಯೇಕತಾವಾದಿಗಳಿಗೆ ಶರಣಾಗಿವೆ. ಯಾತ್ರೆಯನ್ನು ತಡೆಯಲು ಸರಕಾರಗಳು ಕೈಗೊಂಡಿರುವುದು ಕಾನೂನು ಬಾಹಿರ ಕ್ರಮಗಳನ್ನು ಎಂದು ಜಮ್ಮುವಿನಲ್ಲಿ ಕಿಡಿ ಕಾರಿದರು.
ಭಾರತೀಯ ವಾಯುಸೇನೆಯ ನಾಲ್ವರು ಅಧಿಕಾರಿಗಳನ್ನು ಕೊಂದಿರುವ ಆರೋಪ ಹೊತ್ತಿರುವ ಜಮ್ಮು-ಕಾಶ್ಮೀರ ವಿಮೋಚನಾ ರಂಗದ ಅಧ್ಯಕ್ಷ ಯಾಸಿನ್ ಮಲಿಕ್, ಲಾಲ್‌ಚೌಕ್‌ನಲ್ಲಿ ಬಿಜೆಪಿ ರಾಷ್ಟ್ರ ಧ್ವಜಾರೋಹಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ್ದನ್ನು ಕೂಡ ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕ ನೆನಪಿಸಿದರು.