ಮನಮೋಹನ್ ಸಿಂಗ್ ಓರ್ವ ದುರ್ಬಲ ಪ್ರಧಾನ ಮಂತ್ರಿ ಎಂದು ಬಣ್ಣಿಸಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ, ಶ್ರೀಲಂಕಾ ನೌಕಾಪಡೆಯಿಂದ ಅನ್ಯಾಯವಾಗಿ ಕೊಲ್ಲಲ್ಪಡುತ್ತಿರುವ ಭಾರತೀಯ ಮೀನುಗಾರರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಗುಟುರು ಹಾಕಿದ್ದಾರೆ.
ಏಷಿಯಾದಲ್ಲೇ ಅತಿದೊಡ್ಡ ಭೂಸೇನೆ, ವಾಯುಸೇನೆ ಮತ್ತು ಜಲಸೇನೆ ಹೊಂದಿದ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಹೇಳಲಾಗುತ್ತಿದೆ. ಆದರೆ, ಶ್ರೀಲಂಕಾದಂತಹ ಪುಟ್ಟ ರಾಷ್ಟ್ರವು ಭಾರತೀಯ ಮೀನುಗಾರರನ್ನು ಕೊಲ್ಲುವ ಧೈರ್ಯ ತೋರಿಸುತ್ತಿದೆ. ಕೇಂದ್ರ ಸರಕಾರ ದುರ್ಬಲವಾಗಿದೆ. ಪ್ರಧಾನ ಮಂತ್ರಿಯವರು ದುರ್ಬಲ ಎಂದು ಟೀಕಿಸಿದರು.
ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ವೇದಾರಣ್ಯಂ ಸಮೀಪದ ಪುಷ್ಪವನಂ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಭಾರತದ ಮೀನುಗಾರರನ್ನು ಹೇಗೆ ರಕ್ಷಿಸುವುದು ಎಂದು ತಿಳಿಯದೇ ಹೋದರೆ ಪ್ರಧಾನ ಮಂತ್ರಿ ರಾಜೀನಾಮೆ ಕೊಡಬೇಕು ಎಂದು ಬೇಡಿಕೆ ಮುಂದಿಟ್ಟರು.
ಇತ್ತೀಚೆಗಷ್ಟೇ ಶ್ರೀಲಂಕಾ ನೌಕಾಪಡೆಯಿಂದ ಹತನಾದ ಮೀನುಗಾರ ಎನ್. ಜಯಕುಮಾರ್ ಪತ್ನಿಯನ್ನು ಇಲ್ಲಿ ಭೇಟಿ ಮಾಡಿದ ಜಯಲಲಿತಾ, ಕುಟುಂಬಕ್ಕೆ ಸಮಾಧಾನ ಹೇಳಿದರು.
ತನ್ನ ಪುಟ್ಟ ಹೆಣ್ಣುಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಬಿಕ್ಕಿಬಿಕ್ಕಿ ಅಳುತ್ತಿದ್ದ ವಿಧವೆಯೆದುರು ಕುಬ್ಜರಾದ ಜಯಲಲಿತಾ, ಅವರ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಪಕ್ಷವು ನೋಡಿಕೊಳ್ಳಲಿದೆ ಎಂದು ಪ್ರಕಟಿಸಿದರು.
ನಿಮಗಾಗಿರುವ ನಷ್ಟವನ್ನು ಯಾರಿಂದಲೂ ತುಂಬಿಸಲಾಗದು ಎನ್ನುವುದು ನನಗೆ ಗೊತ್ತು. ಆದರೆ ಕೊಂಚ ನಿರಾಳತೆ ಒದಗಿಸುವುದು ಜವಾಬ್ದಾರಿಯುತ ಪಕ್ಷವಾಗಿ ನಮ್ಮ ಕರ್ತವ್ಯ ಎಂದ ಅವರು ಸ್ಥಳದಲ್ಲೇ ಒಂದು ಲಕ್ಷ ರೂಪಾಯಿಯನ್ನು ಜಯಕುಮಾರ್ ಪತ್ನಿಗೆ ಹಸ್ತಾಂತರಿಸಿದರು.
ಇತ್ತೀಚೆಗಷ್ಟೇ ಮೀನುಗಾರಿಕೆಗೆಂದು ತೆರಳಿದ್ದ ತಮಿಳುನಾಡಿನ ತಂಡವೊಂದನ್ನು ತಡೆದಿದ್ದ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ, ಮೀನುಗಾರಿಕಾ ದೋಣಿಯಲ್ಲಿದ್ದ ಎಲ್ಲರನ್ನೂ ನೀರಿಗೆ ಹಾರುವಂತೆ ಆದೇಶಿಸಿತ್ತು. ಆದರೆ, ಕೈ ಬೆರಳುಗಳಿಲ್ಲದ ಜಯಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದ್ದರು. ಬಳಿಕ ಅವರ ಕತ್ತಿಗೆ ಹಗ್ಗ ಹಾಕಿದ್ದ ಶ್ರೀಲಂಕಾ ಸೈನಿಕರು, ನೀರಿನಲ್ಲಿ ಬಹುದೂರ ಎಳೆದುಕೊಂಡು ಹೋಗಿದ್ದರು.
ನಂತರ ಅವರ ಶವವನ್ನು ಇತರ ಮೀನುಗಾರರಿಗೆ ನೀಡಿದ್ದ ಶ್ರೀಲಂಕಾ ನೌಕಾಪಡೆ ಅಲ್ಲಿಂದ ಕಾಲ್ಕಿತ್ತಿತ್ತು. ಇದಕ್ಕೆ ಕೆಲವೇ ದಿನಕ್ಕೆ ಮೊದಲು ಇನ್ನೊಬ್ಬ ಮೀನುಗಾರನನ್ನು ಇದೇ ರೀತಿ ಚಿತ್ರಹಿಂಸೆ ನೀಡಿ ಶ್ರೀಲಂಕಾ ಕೊಂದು ಹಾಕಿತ್ತು. ಆದರೆ ಇದ್ಯಾವ ಘಟನೆಯನ್ನೂ ಶ್ರೀಲಂಕಾ ಇದುವರೆಗೆ ಒಪ್ಪಿಕೊಂಡಿಲ್ಲ. ನಮ್ಮ ಸೇನೆ ಅಂತಹ ಕೃತ್ಯ ಎಸಗಿಲ್ಲ ಎಂದು ಹೇಳುತ್ತಿದೆ.