ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಾನ್ ಕಳ್ಳನ ಜತೆ ಸಂಬಂಧ; ಕಾಂಗ್ರೆಸ್ಸಿಗರ ಬಣ್ಣ ಬಯಲು (RR Patil | Hasan Ali | Vilasrao Deshmukh | Ahmed Patel)
Bookmark and Share Feedback Print
 
ಭಾರತದಲ್ಲೀಗ ಹಗರಣಗಳು, ಕಪ್ಪುಹಣಗಳದ್ದೇ ಸುದ್ದಿ. ಸಾವಿರಾರು ಕೋಟಿ ರೂಪಾಯಿಗಳ ಕಾಮನ್‌ವೆಲ್ತ್ ಗೇಮ್ಸ್ ಹಗರಣ, 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ಹಗರಣಗಳು ನಡೆದರೂ, ತಾವು 24 ಕ್ಯಾರೆಟ್ ಚಿನ್ನ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿರುವ ಹೊತ್ತಿನಲ್ಲಿ 2.74 ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಹೊಂದಿದ್ದ ಪಕ್ಕಾ ಕ್ರಿಮಿನಲ್ ಜತೆಗಿನ ಸಂಬಂಧ ಚರ್ಚೆಗೆ ಕಾರಣವಾಗಿದೆ.

ಸ್ವಿಸ್ ಬ್ಯಾಂಕಿನಲ್ಲಿ 2.74 ಲಕ್ಷ ಕೋಟಿ ರೂಪಾಯಿಗಳನ್ನು ಇಟ್ಟಿದ್ದ ಹಸನ್ ಆಲಿ ಎಂಬ ಕುಖ್ಯಾತ ಉದ್ಯಮಿಯ ಜತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್, ಗೃಹಸಚಿವ ಆರ್.ಆರ್. ಪಾಟೀಲ್, ಅಹ್ಮದ್ ಪಟೇಲ್ ಹೊಂದಿರುವ ಸಂಬಂಧದ ಕುರಿತಾದ ವಿವರಣೆಗಳುಳ್ಳ ವೀಡಿಯೋ ಒಂದು ಬಹಿರಂಗವಾಗಿದೆ.

ಇದನ್ನು ಬಹಿರಂಗಪಡಿಸಿರುವುದು ಬಿಜೆಪಿ ಹಿರಿಯ ಶಾಸಕ ದೇವೇಂದ್ರ ಫದ್ನಾವಿಸ್. ಇದೇ ಮಂಗಳವಾರ ಸಿಡಿಯನ್ನು ಮಹಾರಾಷ್ಟ್ರ ವಿಧಾನಸಭೆಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರು ಆಲಿ ಜತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಹಸನ್ ಆಲಿ ಯಾರು?
ಈ ಸಕಲಗುಣ ಸಂಪನ್ನ ಹಸನ್ ಆಲಿ ಖಾನ್ ಆಲಿಯಾಸ್ ಸಯ್ಯದ್ ಮೊಹಮ್ಮದ್ ಹಸನ್ ಆಲಿ ಖಾನ್ 4.11 ಲಕ್ಷ ಕೋಟಿ ರೂಪಾಯಿ (411000,00,00,000 ರೂಪಾಯಿ!), ಅಥವಾ ಅದಕ್ಕಿಂತ ಹೆಚ್ಚು ತೂಗುವ ಅಸಾಮಿ. ಮೂಲಗಳ ಪ್ರಕಾರ ಅಜೀಮ್ ಪ್ರೇಮ್‌ಜೀ ಅಥವಾ ಮುಖೇಶ್ ಅಂಬಾನಿಗಿಂತಲೂ ಹೆಚ್ಚು ಆಸ್ತಿ ಹೊಂದಿರುವ ಭಾರತದ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿ.

ಭೂಗತ ದೊರೆ ದಾವೂದ್ ಇಬ್ರಾಹಿಂ ಆಪ್ತನಾಗಿರುವ ಈ ಹಸನ್ ಆಲಿ ಹೀಗೆ ಹಣ ಸಂಪಾದಿಸಿದ್ದು ಕುಖ್ಯಾತರಿಗೆ ಸಾಲ ಕೊಡುವ ಮೂಲಕ. ಭಯೋತ್ಪಾದಕ ಸಂಘಟನೆಗಳಿಗೆ ಸಾಲ ನೀಡುವುದು, ಹವಾಲಾ ಸೇರಿದಂತೆ ಅಡ್ಡದಾರಿಗಳನ್ನೆಲ್ಲ ಹೊಕ್ಕು ಸಲೀಸಾಗಿ ಹೊರ ಬಂದಿರುವ ಚಾಣಾಕ್ಷನೀತ. ಇಷ್ಟಾದರೂ, ಈತನಲ್ಲಿ ತೋರಿಕೆಗೆ ಕಾಣುತ್ತಿರುವ ಉದ್ಯಮವೆಂದರೆ ಕುದುರೆ ಲಾಯ!

ಬ್ಯಾಂಕುಗಳಿಗೆ ಮೋಸ ಮಾಡುವುದು, ಉದ್ಯಮಿಗಳಿಗೆ ಮೋಸ ಮಾಡುವುದೆಲ್ಲ ಆಲಿಗೆ ತುಂಬಾ ಸುಲಭ. ಹಲವರ ಕೊಲೆ ಆಪಾದನೆಗಳೂ ಈತನ ಮೇಲಿದ್ದವು. ಏನೇ ಕಳ್ಳ ವ್ಯವಹಾರ ಮಾಡಿದರೂ, ಜೈಲಿಗೆ ಹೋದರೂ, ಈಗ ಮಾತ್ರ ಆರಾಮವಾಗಿ ಭಾರತದಲ್ಲೇ ಓಡಾಡಿಕೊಂಡಿದ್ದಾನೆ.

ಸಿಡಿಯಲ್ಲಿ ಏನಿದೆ?
ಬಿಜೆಪಿ ಶಾಸಕ ದೇವೇಂದ್ರ ಅವರು ಮಹಾರಾಷ್ಟ್ರ ವಿಧಾನಸಭೆಗೆ ನೀಡಿರುವ ಸಿಡಿಯಲ್ಲಿರುವುದು, ಹಸನ್ ಆಲಿಯನ್ನು ಡಿಸಿಪಿ ಅಶೋಕ್ ದೇಶ್‌ಭ್ರಾತರ್ ಅವರು ವಿಚಾರಣೆ ನಡೆಸುತ್ತಿರುವ ವೀಡಿಯೋ ಚಿತ್ರೀಕರಣ.

ಮುಂಬೈ ಪೊಲೀಸ್ ಮುಖ್ಯಸ್ಥರ ಹುದ್ದೆಗೆ ಹಸನ್ ಗಫೂರ್ ಅವರನ್ನು ನೇಮಕಗೊಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ (ವಿಚಾರಣೆ ಸಂದರ್ಭದಲ್ಲಿ) ವಿಲಾಸ್‌ರಾವ್ ದೇಶ್‌ಮುಖ್, ಗೃಹಸಚಿವ ಆರ್.ಆರ್. ಪಾಟೀಲ್, ಹಿರಿಯ ಕಾಂಗ್ರೆಸ್ ನಾಯಕ (ಸೋನಿಯಾ ಗಾಂಧಿ ಆಪ್ತ) ಅಹ್ಮದ್ ಪಟೇಲ್ ಮುಂತಾದ ರಾಜಕಾರಣಿಗಳು ನಡೆಸಿದ ಸಭೆಯಲ್ಲಿ ನಾನು ಭಾಗವಹಿಸಿದ್ದೆ ಎಂದು ಹಸನ್ ಆಲಿ ಡಿಸಿಪಿ ಅಶೋಕ್ ಅವರಿಗೆ ಹೇಳುತ್ತಿರುವುದು ಚಿತ್ರೀಕರಣದಲ್ಲಿದೆ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ.

ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಅವರು ನನ್ನ ಗೆಳೆಯನ ಮಾಧ್ ದ್ವೀಪದಲ್ಲಿನ ನಿವಾಸಕ್ಕೆ ಆಗಾಗ ಭೇಟಿ ನೀಡುತ್ತಿದ್ದರು ಎಂದೂ ವಿಚಾರಣೆ ಸಂದರ್ಭದಲ್ಲಿ ಬಹಿರಂಗವಾಗಿತ್ತು ಎಂದೂ ಶಾಸಕ ದೇವೇಂದ್ರ ತನ್ನ ಆಪಾದನೆಯಲ್ಲಿ ತಿಳಿಸಿದ್ದಾರೆ.

ಇಲ್ಲ, ಅದು ನಾವಲ್ಲ: ಕಾಂಗ್ರೆಸ್ ನಾಯಕರು
ಬಿಜೆಪಿ ಶಾಸಕ ಸಾಕ್ಷಿ ಸಮೇತ ಮಾಡಿರುವ ಆರೋಪವನ್ನು ಕಾಂಗ್ರೆಸ್ ನಾಯಕರು ತಳ್ಳಿ ಹಾಕಿದ್ದಾರೆ. ಸಿಡಿ ನಿಜವಾದುದಲ್ಲ. ಅದು ತಿರುಚಲ್ಪಟ್ಟಿರುವುದಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಆಲಿ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತದೆ. ನಮ್ಮ ಗೌರವಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವ ಈ ಪಿತೂರಿ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ಗೊತ್ತಾಗಬೇಕು ಎಂದಿರುವ ಆರ್.ಆರ್. ಪಾಟೀಲ್, ಪೊಲೀಸ್ ಅಧಿಕಾರಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ತೆರಿಗೆ ವಂಚನೆ ಪ್ರಕರಣದಲ್ಲಿ ಶಂಕಿತನೆಂದು ಬಂಧಿಸಲ್ಪಟ್ಟ ವ್ಯಕ್ತಿಯ (ಹಸನ್ ಆಲಿ) ಜತೆ ಇಂತಹ ಅಸಂಬದ್ಧ ಪ್ರಶ್ನೆಗಳನ್ನು ಪೊಲೀಸ್ ಅಧಿಕಾರಿಯೊಬ್ಬರು (ಡಿಸಿಪಿ ಅಶೋಕ್) ಯಾಕಾದರೂ ಕೇಳುತ್ತಾರೆ ಎನ್ನುವುದು ನನಗೆ ಅಚ್ಚರಿ ಹುಟ್ಟಿಸಿದೆ' ಎಂದು ಅಸಮಾಧಾನ ತೋಡಿಕೊಂಡರು.

'ಆ ಪೊಲೀಸ್ ಅಧಿಕಾರಿ ಅಶೋಕ್, ಯಾವತ್ತೂ ತನಗೆ ಆಯಕಟ್ಟಿನ ಹುದ್ದೆ ಬೇಕೆಂದು ಬೇಡಿಕೆ ಇಡುತ್ತಾ ಬಂದವರು. ಆದರೆ ಅವರು ಉನ್ನತ ಪೊಲೀಸ್ ಹುದ್ದೆಗೆ ಅರ್ಹರಲ್ಲ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ನಾನು ಯಾವತ್ತೂ ಅದಕ್ಕೆ ಸೊಪ್ಪು ಹಾಕಿದವನಲ್ಲ' ಎಂದಿರುವ ಪಾಟೀಲ್, ಮುಂಬೈ ಪೊಲೀಸ್ ಮುಖ್ಯಸ್ಥರ ಹುದ್ದೆಗೆ ಗಫೂರ್ ಅವರನ್ನು ಆರಿಸಿದ್ದು ಹಿರಿತನ ಮತ್ತು ಮೆರಿಟ್ ಆಧಾರದ ಮೇಲೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

2.74 ಲಕ್ಷ ಕೋಟಿ ನಾಪತ್ತೆಯಾಗಿದೆ...
ಹಸನ್ ಆಲಿ ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದ 2.74 ಲಕ್ಷ ಕೋಟಿ ರೂಪಾಯಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಈ ಕುರಿತು ಕೇಂದ್ರ ಸರಕಾರವು ಸೂಕ್ತ ತನಿಖೆ ನಡೆಸುತ್ತಿದೆ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಸ್ವಿಸ್ ಬ್ಯಾಂಕಿನಲ್ಲಿ ಹಸನ್ ಆಲಿ ಮೂರು ಖಾತೆಗಳನ್ನು ಹೊಂದಿದ್ದ. ಅದರಲ್ಲಿ ಸರಿಸುಮಾರು 6 ಬಿಲಿಯನ್ ಡಾಲರ್ ಹಣವನ್ನು ಠೇವಣಿ ಇಟ್ಟಿದ್ದ. ಇದು ತನಿಖಾ ಸಂಸ್ಥೆಗಳ ಗಮನಕ್ಕೆ ಬಂದ ಮರುದಿನವೇ ಮೂರೂ ಖಾತೆಗಳು ಬರಿದಾಗಿವೆ. ಈ ಕುರಿತು ತನಿಖೆ ನಡೆಯುತ್ತಿದೆ. ಆದರೆ ಮಹತ್ವದ ಮುನ್ನಡೆ ಪಡೆದಿಲ್ಲ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ