ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೈಲ ಮಾಫಿಯಾಕ್ಕೆ ಅಧಿಕಾರಿ ಬಲಿ; ಕೊನೆಗೂ ಎಚ್ಚೆತ್ತ ಸರಕಾರ (Malegaon | Yeshwant Sonawane | diesel mafia | Maharashtra)
Bookmark and Share Feedback Print
 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಮಾಣಿಕನಾಗಿದ್ದ ಅಧಿಕಾರಿಯೊಬ್ಬ ದುರುಳರಿಗೆ ಬಲಿಯಾಗಿರುವ ದುರ್ಘಟನೆ ಮಹಾರಾಷ್ಟ್ರದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳು ಸರಕಾರದ ಮೇಲೆ ಮುಗಿ ಬಿದ್ದಿದ್ದರೆ, ಸರಕಾರ ತೈಲ ಕಲಬೆರಕೆ ಅಡ್ಡೆಗಳಿಗೆ ದಾಳಿ ಮಾಡುತ್ತಿದೆ. ಅತ್ತ 80,000ಕ್ಕೂ ಹೆಚ್ಚು ಸರಕಾರಿ ಅಧಿಕಾರಿಗಳು ಮುಷ್ಕರಕ್ಕೆ ಕುಳಿತಿದ್ದಾರೆ.

ಇದನ್ನೂ ಓದಿ: ಹೆಚ್ಚುವರಿ ಡಿಸಿಯನ್ನು ಸುಟ್ಟು ಹಾಕಿದ ತೈಲ ಮಾಫಿಯಾ

ಮಾಲೆಗಾಂವ್ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಯಶವಂತ್ ಸೋನಾವಾನೆಯವರು ನಾಸಿಕ್ ಜಿಲ್ಲೆಯ ಮನ್ಮಾದ್ ಎಂಬಲ್ಲಿನ ಪನೇವಾಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಲಬೆರಕೆ ತಾಣಗಳಿಗೆ ದಾಳಿ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ತೈಲ ಮಾಫಿಯಾ, ಸ್ಥಳದಲ್ಲೇ ಅಧಿಕಾರಿಯನ್ನು ಜೀವಂತವಾಗಿ ಸುಟ್ಟು ಹಾಕಿತ್ತು.

ಗೆಜೆಟೆಡ್ ಅಧಿಕಾರಿಗಳಿಂದ ಮುಷ್ಕರ...
ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಾನೆಯವರನ್ನು ತೈಲ ಮಾಫಿಯಾ ಆಹುತಿ ತೆಗೆದುಕೊಂಡಿರುವ ಘಟನೆಯನ್ನು ಖಂಡಿಸಿ ಮಹಾರಾಷ್ಟ್ರದ 80,000ಕ್ಕೂ ಹೆಚ್ಚು ಗೆಜೆಟೆಡ್ ಅಧಿಕಾರಿಗಳು ಕೆಲಸ ಕಾರ್ಯಗಳನ್ನು ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದಾರೆ.
PR

ನಾವು ಈ ಪ್ರತಿಭಟನೆಯನ್ನು ಮುಷ್ಕರ ಎಂದು ಪ್ರಕಟಿಸಿಲ್ಲ. ಆದರೆ ಸರಕಾರಿ ಉದ್ಯೋಗಿಗಳ ತೀವ್ರ ಭೀತಿಗೆ ಕಾರಣವಾಗಿರುವ ಈ ಕೃತ್ಯದ ವಿರುದ್ಧ ಪ್ರತಿಭಟನೆ ಮಾಡಲು ನಾವು ಕೆಲಸಕ್ಕೆ ಹಾಜರಾಗಿಲ್ಲ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಅಧಿಕಾರಿಯ ಹತ್ಯೆ ಖಂಡಿಸಿರುವ ಶಿವಸೇನೆ, ನಾಸಿಕ್ ಜಿಲ್ಲೆಯ ಮನ್ಮಾದ್ ನಗರ ಬಂದ್‌ಗೆ ಕರೆ ನೀಡಿದೆ.

ತೈಲ ಮಾಫಿಯಾ ಮೇಲೆ ಸರಕಾರ ದಾಳಿ..
ಅಧಿಕಾರಿ ಹತ್ಯೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರಕಾರವು ತೈಲ ಮಾಫಿಯಾದ ವಿರುದ್ಧ ಸಮರ ಸಾರಿದೆ. ಇಂದು 200ಕ್ಕೂ ಹೆಚ್ಚು ತೈಲ-ಹಾಲು ಕಲಬೆರಕೆ ಮತ್ತು ಮರಳು ಮಾಫಿಯಾ ಅಡ್ಡೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ.

ಪೊಲೀಸ್ ಭದ್ರತೆಯೊಂದಿಗೆ ವಿವಿಧ ಇಲಾಖೆಗಳು ಈ ದಾಳಿ ನಡೆಸಿವೆ. ರಾಜ್ಯದಾದ್ಯಂತದ ಡೀಸೆಲ್, ಪೆಟ್ರೋಲ್, ಅಡುಗೆ ಎಣ್ಣೆ, ಮರಳು ಮಾಫಿಯಾಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರದಿಗಳ ಪ್ರಕಾರ 250ಕ್ಕೂ ಹೆಚ್ಚು ದುಷ್ಕರ್ಮಿಗಳನ್ನು ವಿವಿಧ ಕಲಬೆರಕೆ ಆರೋಪಗಳ ಮೇಲೆ ಬಂಧಿಸಲಾಗಿದೆ. ಥಾಣೆ, ನಾಸಿಕ್, ನಾಗ್ಪುರ, ಔರಂಗಾಬಾದ್ ಮತ್ತು ಇತರ ನಗರಗಳಲ್ಲಿ ದಾಳಿ ನಡೆಸಲಾಗಿದೆ.

ಸೋನೆವಾನೆಗೆ ಬೆಂಕಿ ಹಚ್ಚುವುದನ್ನು ನೋಡಿದ್ದೆ...
ನನ್ನ ಹಿರಿಯ ಅಧಿಕಾರಿ ಸೋನೆವಾನೆಯವರಿಗೆ ಬೆಂಕಿ ಹಚ್ಚುವುದನ್ನು ನಾನು ಕಣ್ಣಾರೆ ಕಂಡೆ. ಅವರನ್ನು ರಕ್ಷಿಸಲು ಯತ್ನಿಸಿದೆ. ಆದರೆ ಅವರನ್ನು ಕೊಂದವರು ಯಾರು ಎಂಬುದನ್ನು ಗುರುತಿಸುವುದು ಕಷ್ಟ -- ಹೀಗೆಂದು ಹೇಳಿರುವುದು ಯಶವಂತ್ ಸೋನೆವಾನೆಯವರ ಚಾಲಕ ಕೈಲಾಸ್ ಗಾವ್ಲಿ. ಹೆಚ್ಚುವರಿ ಜಿಲ್ಲಾಧಿಕಾರಿ ಜೀವಂತವಾಗಿ ದಹಿಸುತ್ತಿದ್ದ ಸಂದರ್ಭದಲ್ಲಿ ಈ ಚಾಲಕ ಜತೆಗಿದ್ದ.

ಆಯಿಲ್ ಟ್ಯಾಂಕರಿನಿಂದ ಸೀಮೆಎಣ್ಣೆ ಕಳ್ಳತನ ಮಾಡುವುದನ್ನು ಸೋನೆವಾನೆಯವರು ತನ್ನ ಮೊಬೈಲ್ ಫೋನಿನಿಂದ ಚಿತ್ರೀಕರಿಸುತ್ತಿದ್ದರು. ಅದೇ ಕಾರಣದಿಂದ ಅವರನ್ನು ಕೊಂದು ಹಾಕಲಾಯಿತು ಎಂಬ ಪೊಲೀಸರ ಹೇಳಿಕೆಯನ್ನು ಕೂಡ ಗಾವ್ಲಿ ಸಮರ್ಥಿಸಿಕೊಂಡಿದ್ದಾನೆ.

'ಕೆಲವು ಮಂದಿ ಟ್ಯಾಂಕರಿನಿಂದ ಸೀಮೆಎಣ್ಣೆ ತೆಗೆದು ಅದನ್ನು ಮಿಶ್ರಣ ಮಾಡುತ್ತಿರುವುದನ್ನು ನಾವು ನೋಡಿದ್ದೆವು. ಅಲ್ಲಿ ಇತರ ಡ್ರಮ್ಮುಗಳು ಕೂಡ ಇದ್ದುವು. ಇದನ್ನು ನೋಡಿದ ನಮ್ಮ ಬಾಸ್, ತಕ್ಷಣವೇ ಅವರ ಮೊಬೈಲಿನಿಂದ ಚಿತ್ರೀಕರಿಸಲು ಆರಂಭಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಅಲ್ಲಿನ ಟೀ ಸ್ಟಾಲ್‌ನವರು ಕೆಲವರನ್ನು ಕರೆದರು. ಬಳಿಕ ಒಂದಷ್ಟು ಮಂದಿ ಬೈಕುಗಳಲ್ಲಿ ಬಂದರು. ಆಗ ನಾನು ಜತೆಗೇ ಇದ್ದೆ. ಬಂದವರೇ, ನಮ್ಮ ಬಾಸ್ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು'

'ಈ ಸಂದರ್ಭದಲ್ಲಿ ನಾನು ಅಧಿಕಾರಿಯನ್ನು ರಕ್ಷಿಸಲು ಯತ್ನಿಸಿದೆ. ಅದು ವಿಫಲವಾದಾಗ ಪೊಲೀಸರಿಗೆ ಫೋನ್ ಮಾಡಲು ಸ್ಥಳದಿಂದ ದೂರ ಹೋದೆ. ಹಾಗಾಗಿ ಬೆಂಕಿ ಹಚ್ಚಿದವರು ಯಾರು ಎಂಬುದು ನನಗೆ ಸ್ಪಷ್ಟವಾಗಿ ನೆನಪಿಲ್ಲ. ಅವರ ಮುಖವನ್ನು ನಾನು ಗಮನಿಸಿಲ್ಲ' ಎಂದು ಗಾವ್ಲಿ ವಿವರಣೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ