ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿವಿಸಿ ಕಳಂಕಿತರೆಂದು ಪ್ರಧಾನಿಗೆ ಗೊತ್ತಿತ್ತು; ಸುಪ್ರೀಂಗೆ ಸುಷ್ಮಾ (CVC | Supreme Court | PJ Thomas | Sushma Swaraj)
Bookmark and Share Feedback Print
 
ಕೇಂದ್ರ ಜಾಗೃತ ಆಯುಕ್ತರನ್ನಾಗಿ ನೇಮಕ ಮಾಡುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಉನ್ನತ ಮಟ್ಟದ ಸಮಿತಿಗೆ ಪಿ.ಜೆ. ಥಾಮಸ್ ಕಳಂಕಿತರು ಎನ್ನುವುದು ತಿಳಿದಿರಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರಕಾರ ಹೇಳಿರುವುದನ್ನು ತೀವ್ರವಾಗಿ ಪ್ರತಿಭಟಿಸಿರುವ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಸರಕಾರವು ಸುಳ್ಳು ಹೇಳುತ್ತಿದೆ. ನಾನು ಈ ಸಂಬಂಧ ಸುಪ್ರೀಂ ಕೋರ್ಟಿಗೆ ಹೋಗುತ್ತೇನೆ ಎಂದು ಪ್ರಕಟಿಸಿದ್ದಾರೆ.

ಇದರೊಂದಿಗೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಮತ್ತೊಮ್ಮೆ ಮುಜುಗರಕ್ಕೆ ಸಿಲುಕಿದೆ.

ಕೇಂದ್ರ ಜಾಗೃತ ಆಯುಕ್ತ ಸ್ಥಾನಕ್ಕೆ ಪಿ.ಜೆ. ಥಾಮಸ್ ಅವರನ್ನು ನೇಮಕಗೊಳಿಸಲು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಗೆ, ಆ ಸಂದರ್ಭದಲ್ಲಿ ಅವರ ಮೇಲೆ ಭ್ರಷ್ಟಾಚಾರ ಪ್ರಕರಣವೊಂದರ ಸಂಬಂಧ ಆರೋಪಪಟ್ಟಿ ದಾಖಲಾಗಿತ್ತು ಮತ್ತು ಕೇರಳ ಸರಕಾರವು ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿತ್ತು ಎಂಬ ವಿಚಾರ ತಿಳಿದಿರಲಿಲ್ಲ ಎಂದು ಇಂದು (ಗುರುವಾರ) ಕೇಂದ್ರವು ಸುಪ್ರೀಂ ಕೋರ್ಟಿಗೆ ತಿಳಿಸಿತ್ತು.

ಕೇಂದ್ರ ಸರಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಅಟಾರ್ನಿ ಜನರಲ್ ಗೂಲಂ ಇ ವಹನ್ವತಿ ಅವರು ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಅವರ ನೇತೃತ್ವದ ಪೀಠಕ್ಕೆ ಮೇಲಿನಂತೆ ಹೇಳಿದ್ದರು.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಉನ್ನತ ಮಟ್ಟದ ಮೂವರು ಸದಸ್ಯರ ಸಮಿತಿಯಲ್ಲಿ ಗೃಹಸಚಿವ ಪಿ. ಚಿದಂಬರಂ ಮತ್ತು ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೂಡ ಸದಸ್ಯರಾಗಿದ್ದರು.

ಸುಷ್ಮಾ ಸುಪ್ರೀಂಗೆ...
ಸರಕಾರದ ಹೇಳಿಕೆಯಿಂದ ತೀವ್ರ ಅಸಮಾಧಾನಗೊಂಡಿರುವ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಥಾಮಸ್ ಕಳಂಕಿತರು ಎಂದು ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಸಮಿತಿಗೆ ತಿಳಿದಿತ್ತು. ಆದರೆ ಈಗ ಸರಕಾರವು ಸುಪ್ರೀಂ ಕೋರ್ಟಿಗೆ ಸುಳ್ಳು ಹೇಳುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಸರಕಾರ ಹೇಳುತ್ತಿರುವುದು ಸುಳ್ಳು. ಸಿವಿಸಿ ಮೇಲೆ ಆರೋಪಪಟ್ಟಿ ಸಲ್ಲಿಕೆಯಾಗಿದ್ದುದು ಸರಕಾರಕ್ಕೆ ಗೊತ್ತಿತ್ತು. ಥಾಮಸ್ ಅವರನ್ನು ಸಿವಿಸಿಯಂತಹ ತನಿಖಾ ಸಂಸ್ಥೆಗೆ ನೇಮಕ ಮಾಡುವುದು ಬೇಡ ಎಂದು ನಾನು ನನ್ನ ಅಸಮಾಧಾನವನ್ನು ದಾಖಲು ಮಾಡಿದ್ದೆ. ಆದರೆ ಸಮಿತಿಯು ನನ್ನ ಅಸಮ್ಮತಿ ಮತ್ತು ಥಾಮಸ್ ಮೇಲಿನ ಪ್ರಕರಣಗಳನ್ನು ನಿರ್ಲಕ್ಷಿಸಿತ್ತು ಎಂದು ಸುಷ್ಮಾ ಆಪಾದಿಸಿದ್ದಾರೆ.

ಅಲ್ಲದೆ ಈ ಕುರಿತು ನಾನು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಲಿದ್ದೇನೆ. ಅಟಾರ್ನಿ ಜನರಲ್ ಅವರ ಮೂಲಕ ಸರಕಾರವು ನ್ಯಾಯಪೀಠಕ್ಕೆ ಸುಳ್ಳು ಹೇಳುತ್ತಿದೆ ಎನ್ನುವುದನ್ನು ಅಫಿಡವಿತ್ ಮೂಲಕ ತಿಳಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ