ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಕರಜ್ಯೋತಿಯೆಂದರೆ ನಕ್ಷತ್ರ | ತನಿಖೆ ಮಾಡಲ್ಲ: ಕೇರಳ (Kerala | Sabarimala | Makara Jyothi | Makara Vilakku)
Bookmark and Share Feedback Print
 
ಮಕರಜ್ಯೋತಿ ಎಂದರೆ ನಕ್ಷತ್ರ. ಅದು ಮಾನವ ಸೃಷ್ಟಿ ಅಲ್ಲ. ಮಕರ ವಿಳಕ್ಕು ಎಂದರೆ ಪೂನಾಂಬಲಮೇಡು ಗಿರಿಯಲ್ಲಿ ನಡೆಯುವ ಸಾಂಕೇತಿಕ ದೀಪಾರಾಧನೆ ಎಂದು ತಂತ್ರಿಯೊಬ್ಬರು ಹೇಳಿರುವ ಬೆನ್ನಿಗೆ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಕೇರಳ ಸರಕಾರ, ಶಬರಿಮಲೆಯ 'ಮಕರಜ್ಯೋತಿ' ಸತ್ಯಾಸತ್ಯತೆಯ ಕುರಿತು ತನಿಖೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಶಬರಿಮಲೆ ಮಕರಜ್ಯೋತಿ ನಿಜಕ್ಕೂ ದೇವರ ಮಹಿಮೆಯಲ್ಲ?

PTI
102 ಅಯ್ಯಪ್ಪ ಭಕ್ತರ ಸಾವಿಗೆ ಕಾರಣವಾದ ಜನವರಿ 14ರ ಶಬರಿಮಲೆ ಕಾಲ್ತುಳಿತ ಘಟನೆಯ ನಂತರ ಎದ್ದಿರುವ ಮಕರಜ್ಯೋತಿ ಮತ್ತು ಮಕರ ವಿಳಕ್ಕು ವಿವಾದದ ಕುರಿತು ಹೈಕೋರ್ಟ್‌ಗೆ ಸರಕಾರವು ಮೇಲಿನಂತೆ ಉತ್ತರಿಸಿದೆ.

ನ್ಯಾಯಮೂರ್ತಿ ತೋಟತ್ತಿಲ್ ಬಿ. ರಾಧಾಕೃಷ್ಣನ್ ಮತ್ತು ಪಿ.ಎಸ್. ಗೋಪಿನಾಥ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಎದುರು ಗುರುವಾರ ಹಾಜರಾದ ಸರಕಾರಿ ವಕೀಲರು, ಕೇರಳದ ನಿಲುವನ್ನು ನ್ಯಾಯಾಲಯಕ್ಕೆ ನಿವೇದಿಸಿದರು. ಮಕರಜ್ಯೋತಿ ಕುರಿತು ಯಾವುದೇ ತನಿಖೆ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ವಿ.ಎಸ್. ಅಚ್ಯುತ್ತಾನಂದನ್ ಈಗಾಗಲೇ ಹೇಳಿರುವುದನ್ನು ಕೂಡ ಅವರು ಉಲ್ಲೇಖಿಸಿದರು.

ಶಬರಿಮಲೆ ಮಕರಜ್ಯೋತಿಯು ಲಕ್ಷಾಂತರ ಭಕ್ತರ ನಂಬಿಕೆಯ ಪ್ರಶ್ನೆಯಾಗಿರುವುದರಿಂದ, ಅದು ಮಾನವ ನಿರ್ಮಿತವೇ ಅಥವಾ ದೇವರ ಮಹಿಮೆಯೇ ಎಂಬುದರ ಕುರಿತು ಸರಕಾರವು ಯಾವುದೇ ರೀತಿಯ ತನಿಖೆ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರು.

ಮಕರಜ್ಯೋತಿ ಕೃತಕವೇ ಹಾಗೂ ಮಕರಜ್ಯೋತಿ ಮತ್ತು ಮಕರ ವಿಳಕ್ಕು ನಡುವಿನ ವ್ಯತ್ಯಾಸವೇನು ಎಂದು ಈ ಹಿಂದೆ ಹೈಕೋರ್ಟಿನ ದೇವಸ್ವಂ ವಿಭಾಗೀಯ ನ್ಯಾಯಪೀಠವು ತಿಳಿದುಕೊಳ್ಳಲು ಬಯಸಿತ್ತು.

ಸರಕಾರದ ಉತ್ತರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ವಿಭಾಗೀಯ ಪೀಠವು, ಇದು ಸಾರ್ವಜನಿಕ ಹಿತಾಸಕ್ತಿಯ ವಿಚಾರವಾಗಿರುವುದರಿಂದ ಮುಂದಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ. ಚೆಲಾಮೇಶ್ವರ್ ಅವರ ಸುಪರ್ದಿಗೆ ಒಪ್ಪಿಸಿದೆ.

ಶಬರಿಮಲೆ ಸಂಬಂಧ ಈಗ ಇತರೆ ಮೂರು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ಮೊದಲನೆಯದ್ದು ಶಬರಿಮಲೆಯ ಮಾಜಿ ಅರ್ಚಕ ಶ್ರೀಕುಮಾರ್ ಅವರದ್ದು. ಕಾಲ್ತುಳಿತ ದುರಂತದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಬಯಸುತ್ತಿದ್ದಾರೆ. ಎರಡನೆಯದ್ದು, ಯಾವುದೇ ತನಿಖೆ ನಡೆಸಬಾರದು ಎನ್ನುವುದು.

ಮೂರನೇ ಕೇಸು ವಿಚಾರವಾದಿಗಳ ಸಂಘಟನೆಯದ್ದು. 'ಮಕರ ವಿಲಕ್ಕು' ದೀಪಾರಾಧನೆಯಲ್ಲಿ ಸರಕಾರಿ ನೌಕರರು ಪಾಲ್ಗೊಳ್ಳಬಾರದು ಎನ್ನುವುದು ಇವರ ಆಗ್ರಹ. ಈ ಎಲ್ಲಾ ಪ್ರಕರಣಗಳು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠದಲ್ಲಿ ಮುಂದುವರಿಯಲಿವೆ.

ಮಾಧ್ಯಮ ಮತ್ತು ನಾಸ್ತಿಕರ ಲಾಬಿ...
ಶಬರಿಮಲೆ ಅಯ್ಯಪ್ಪ ಭಕ್ತರ ಮತ್ತು ಹಿಂದೂಗಳ ನಂಬಿಕೆಗೆ ಹಾನಿಯನ್ನುಂಟು ಮಾಡಲು ಕೆಲವು ನಿರ್ದಿಷ್ಟ ಮಾಧ್ಯಮ ವ್ಯಕ್ತಿಗಳು ಮತ್ತು ನಾಸ್ತಿಕರು ಯತ್ನಿಸುತ್ತಿದ್ದಾರೆ ಎಂದು ಶಬರಿಮಲೆ ಮುಖ್ಯ ಅರ್ಚಕ ಕಂದರಾರು ಮಹೇಶ್ವರಾರು ತಂತ್ರಿ ಆರೋಪಿಸಿದ್ದಾರೆ.

ಮಕರಜ್ಯೋತಿ ಎಂದರೆ ಮಕರ ಸಂಕ್ರಾಂತಿಯಂದು ಮುಸ್ಸಂಜೆ ಹೊತ್ತಿನಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳುವ ಮಿನುಗುವ ನಕ್ಷತ್ರ. ಮಕರ ವಿಲಕ್ಕು ಎಂದರೆ ಪೊನ್ನಾಂಬಲಮೇಡು ಗಿರಿಯಲ್ಲಿ ನಡೆಯುವ ಸಾಂಪ್ರದಾಯಿಕವಾದ ಸಾಂಕೇತಿಕ ದೀಪಾರಾಧನೆ. ನಾನು ಇದನ್ನೇ ಹೇಳಿದ್ದೆ. ಆದರೆ ಕೆಲವು ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿ ವರದಿ ಮಾಡಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಕರಜ್ಯೋತಿ ದೇವರ ಮಹಿಮೆ. ಮಕರ ವಿಲಕ್ಕು ಭಕ್ತರಿಂದ ನಡೆಯುವ ದೀಪಾರಾಧನೆ. ಹಿಂದೆ ಪೊನ್ನಾಂಬಲಮೇಡುವಿನ ಬುಡಕಟ್ಟು ಕುಟುಂಬಗಳು ದೀಪ ಹಚ್ಚುತ್ತಿದ್ದರು. ಈಗ ಇದನ್ನು ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ನನ್ನಲ್ಲಿಲ್ಲ ಎಂದು ತಂತ್ರಿ ತಿಳಿಸಿದರು.

ಶಬರಿಮಲೆ ದೇಗುಲದ ಘನತೆ ಮತ್ತು ಯಾತ್ರೆಯ ಪ್ರಾಮುಖ್ಯತೆಯನ್ನು ಕುಗ್ಗಿಸುವ ಯತ್ನಗಳು ನಡೆಯುತ್ತಿವೆ. ಕೆಲವು ನಿರ್ದಿಷ್ಟ ಮಾಧ್ಯಮಗಳು ಈ ಕುರಿತು ಇನ್ನಿಲ್ಲದ ಯತ್ನಗಳನ್ನು ನಡೆಸುತ್ತಿವೆ. ಇದಕ್ಕೆ ವಿಚಾರವಾದಿಗಳು ಕೂಡ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದ ಅವರು, ಮಕರ ವಿಲಕ್ಕುವನ್ನು ಶಬರಿಮಲೆ ದೇಗುಲದ ವ್ಯವಹಾರಗಳನ್ನು ನೋಡಿಕೊಳ್ಳುವ ತ್ರಿವಾಂಕೂರ್ ದೇವಸ್ವಂ ಮಂಡಳಿಯೇ ನಡೆಸಿದರೆ ತಪ್ಪೇನು ಎಂದು ಮರು ಪ್ರಶ್ನೆ ಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ