ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣಕ್ಕೆ ದಾವೂದ್ ಇಬ್ರಾಹಿಂ ಲಿಂಕ್; ಜಯಲಲಿತಾ (2G scam | Dawood Ibrahim | Jayalalithaa | A Raja)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ನಡೆದಿರುವ 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣ ಮತ್ತೊಂದು ಮಹತ್ವದ ತಿರುವು ಪಡೆದುಕೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಇದಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧವಿದೆ ಎಂದು ಎಐಎಡಿಎಂಕೆ ವರಿಷ್ಠೆ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆರೋಪಿಸಿರುವುದೇ ಹೊಸ ಬೆಳವಣಿಗೆ.

ಅವರ ಪ್ರಕಾರ ದಾವೂದ್ ಇಬ್ರಾಹಿಂ ಬೇರೊಬ್ಬರ ಮೂಲಕ 2ಜಿ ವ್ಯವಹಾರದಲ್ಲಿ ಪಾಲುದಾರನಾಗಿದ್ದಾನೆ. ದಾವೂದ್ ಇಬ್ರಾಹಿಂ ಆಪ್ತರಲ್ಲಿ ಒಬ್ಬ ಶೇರು ಹೊಂದಿರುವ ಕಂಪನಿಯೊಂದರ ಜತೆ 2ಜಿ ತರಂಗಾಂತರ ಪಡೆದುಕೊಂಡಿರುವ ಕಂಪನಿಗೆ ಸಂಬಂಧವಿದೆ.

ಜಯಲಲಿತಾ ಅವರ ಆರೋಪ ಆರಂಭವಾಗುವುದು ವಿವಾದಿತ 'ಸ್ವಾನ್ ಟೆಲಿಕಾಂ'ನಿಂದ. ಇದೇ ಕಂಪನಿಗೆ ಡಿಎಂಕೆಯ ಸಂಸದ, ಆಗಿನ ದೂರಸಂಪರ್ಕ ಸಚಿವ ಎ. ರಾಜಾ ತರಂಗಾಂತರಗಳನ್ನು ಹಂಚಿಕೆ ಮಾಡಿದ್ದರು. ಈ ಬಗ್ಗೆ ಜಯಲಲಿತಾ ಅವರು ಮಾಡಿರುವ ಆರೋಪವನ್ನು ನೋಡೋಣ.

ರಿಲಯೆನ್ಸ್ ಕಮ್ಯುನಿಕೇಷನ್ಸ್ ಮತ್ತು ನಿಗೂಢವಾಗಿದ್ದ ಕಂಪನಿ 'ಟೈಗರ್ ಟ್ರೇಡರ್ಸ್ ಪ್ರೈವೆಟ್ ಲಿಮಿಟೆಡ್' ಜತೆ ಸೇರಿ ಹುಟ್ಟು ಹಾಕಿದ್ದ ಸ್ವಾನ್ ಟೆಲಿಕಾಂ ಸಂಸ್ಥೆಯನ್ನು ನಂತರದ ದಿನಗಳಲ್ಲಿ ಕೈ ಬಿಡಲಾಗಿತ್ತು. ಇದಕ್ಕೆ ಕಾರಣ, ಸಿಡಿಎಂಎ ಮತ್ತು ಜಿಎಸ್ಎಂ ಸೇವೆಗಳನ್ನು ಒಂದೇ ಸಂಸ್ಥೆಯು ನಿರ್ವಹಿಸಲು ನೂತನ ದೂರಸಂಪರ್ಕ ನೀತಿಯು ಅನುಮತಿ ನೀಡದೇ ಇದ್ದುದು.

ಈ ಸಂದರ್ಭದಲ್ಲಿ ಮುಂದೆ ಬಂದ ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪನಿ 'ಡೈನಾಮಿಕ್ಸ್ ಬಾಲ್ವಾ ಇನ್‌ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್' ಮತ್ತು ಮಾರಿಷಸ್ ಮೂಲದ ಹೂಡಿಕೆದಾರ ಸಂಸ್ಥೆ 'ಡೆಲ್ಫಿ ಇನ್ವೆಸ್ಟ್‌ಮೆಂಟ್ಸ್ ಪ್ರೈವೆಟ್ ಲಿಮಿಟೆಡ್'ಗಳು ಸ್ವಾನ್ ಟೆಲಿಕಾಂಗೆ ಮರು ಜೀವ ನೀಡಿದವು.

ಬಳಿಕ ಆಗಿನ ಕೇಂದ್ರ ದೂರಸಂಪರ್ಕ ಸಚಿವ ಎ. ರಾಜಾ ಅವರು ಲಜ್ಜೆಗೆಟ್ಟವರಂತೆ ವರ್ತಿಸಿ 'ಸ್ವಾನ್ ಟೆಲಿಕಾಂ' ಸಂಸ್ಥೆಗೆ ಭಾರತದ 22 ದೂರವಾಣಿ ವಲಯಗಳಲ್ಲಿ 13ರಲ್ಲಿ ಮೊಬೈಲ್ ಸೇವೆಗಳನ್ನು ಒದಗಿಸಲು ಪರವಾನಗಿಗಳನ್ನು ನೀಡಿದರು. ಇದರ ಮೊತ್ತ 1,537 ಕೋಟಿ ರೂಪಾಯಿಗಳು.

ಈ ರೀತಿಯಾಗಿ ಪರವಾನಗಿಗಳನ್ನು ಪಡೆದ ತಿಂಗಳೊಳಗೆ, ದೂರವಾಣಿ ಸೇವೆಗಳನ್ನು ನೀಡುವ ಸಂಬಂಧ ಯಾವುದೇ ಕ್ರಮಗಳಿಗೆ ಮುಂದಾಗುವುದಕ್ಕಿಂತಲೂ ಮೊದಲು, 'ಸ್ವಾನ್ ಟೆಲಿಕಾಂ' ಕಂಪನಿಯ ಶೇ.45.37ರಷ್ಟು ಪಾಲನ್ನು ಯುಎಇ ಮೂಲದ ದೂರವಾಣಿ ಸಂಸ್ಥೆ 'ಎಟಿಸಲಾಟ್' ಕಂಪನಿಗೆ 4,500 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿತ್ತು.

ಅಲ್ಲದೆ, ಕಂಪನಿಗೆ 'ಎಟಿಸಲಾಟ್ ಡಿಬಿ' (DB - ಡೈನಾಮಿಕ್ಸ್ ಬಾಲ್ವಾ) ಎಂದು ಮರು ನಾಮಕರಣಗೊಳಿಸಿತು. ಇದರ ಬಳಿಕ ಶೇ.16ರ ಶೇರುಗಳನ್ನು ಚೀನಾದ ದೂರವಾಣಿ ಸಂಸ್ಥೆ 'ಹುವೈ ಟೆಕ್ನಾಲಜೀಸ್'ಗೆ ಮಾರಲಾಯಿತು. ನಂತರ ಹೆಚ್ಚುವರಿಯಾಗಿ, ಚೀನಾ ಮೂಲದ ಲೆಟರ್-ಪ್ಯಾಡ್ ಕಂಪನಿ 'ಜೆನೆಕ್ಸ್ ಎಕ್ಸಿಮ್ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್'ಗೆ ಶೇ.5.27ರಷ್ಟು ಶೇರುಗಳನ್ನು (380 ಕೋಟಿ ರೂ. ಮೌಲ್ಯದ್ದು) ಹಸ್ತಾಂತರಿಸಲಾಯಿತು.

ಮುಂಬೈ ಸರಣಿ ಸ್ಫೋಟ ಸೇರಿದಂತೆ ಹಲವಾರು ಕ್ರಿಮಿನಲ್-ಭಯೋತ್ಪಾದನಾ ಕೃತ್ಯಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ, ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿನ ಅಗ್ರ, ಒಸಮಾ ಬಿನ್ ಲಾಡೆನ್ ನಂತರ ವಿಶ್ವಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ. ಈತನ ಬಂಟ, ಮುಂಬೈ ರಿಯಲ್ ಎಸ್ಟೇಟ್‌ನಲ್ಲಿ ದೊಡ್ಡ ಹೆಸರಾಗಿರುವ ಶಾಹಿದ್ ಬಾಲ್ವಾ ಎಂಬಾತ 'ಎಟಿಸಲಾಟ್ ಡಿಬಿ'ಯಲ್ಲಿ ಭಾಗಶಃ ಶೇರುಗಳನ್ನು ಹೊಂದಿದ್ದಾನೆ.

ಇದು ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ಬಂದ ನಂತರ, ಸ್ವಾನ್ ಟೆಲಿಕಾಂ ಸಂಸ್ಥೆಯ ಭಾರತದ ಪ್ರಮುಖ ಪ್ರವರ್ತಕ ಯಾವುದೇ ಕಾರಣಕ್ಕೂ 'ಎಟಿಸಲಾಟ್ ಡಿಬಿ' ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕನಾಗಿರಬಾರದು ಎಂದು ನಿಬಂಧನೆ ಹಾಕಿತು. ಗೃಹ ಸಚಿವಾಲಯದ ಮೂಲಗಳ ಪ್ರಕಾರ, 'ಡೈನಾಮಿಕ್ಸ್ ಬಾಲ್ವಾ ಗ್ರೂಪ್' ಕಂಪನಿಯ ನಿರ್ದೇಶಕರಲ್ಲಿ ಒಬ್ಬ, ದಾವೂದ್ ಇಬ್ರಾಹಿಂ ಕಂಪನಿಯಲ್ಲೂ ನಿರ್ದೇಶಕನಾಗಿದ್ದಾನೆ.

ಅಚ್ಚರಿಯೆಂದರೆ, ಈ ಹಿಂದೆ ದಾವೂದ್ ಇಬ್ರಾಹಿಂ ಮತ್ತು ಆತನ ಸಂಬಂಧಿಕರ ಪರವಾಗಿ ಹಲವಾರು ಪ್ರಕರಣಗಳಲ್ಲಿ ವಕೀಲರಾಗಿ ಪ್ರತಿನಿಧಿಸಿದ್ದ ಈಗಿನ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರ ನೇಮಕವೇ ಹಲವಾರು ಸಂಶಯಗಳಿಗೆ ಎಡೆ ಮಾಡಿ ಕೊಡುತ್ತಿವೆ.

ಹೀಗೆ, ಜಯಲಲಿತಾ ಅವರ ಆರೋಪ ಪಾಕಿಸ್ತಾನ ಮತ್ತು ದುಬೈಗಳ ನಡುವೆಯೂ ಸಾಗುತ್ತದೆ. ಕಂಪನಿಗಳ ಚಲನವಲನ ಮತ್ತು ಗೃಹ ಸಚಿವಾಲಯವೇ ನೀಡಿರುವ ಮಾಹಿತಿಗಳನ್ನು ಆಧರಿಸಿ ಜಯಲಲಿತಾ ಆರೋಪಗಳನ್ನು ಮಾಡಿರುವುದರಿಂದ ಮಹತ್ವದ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ