ಸರ್ವೋಚ್ಚ ನ್ಯಾಯಾಲಯಕ್ಕೆ ಸುಳ್ಳು ಹೇಳಿದ ಆರೋಪ ಎದುರಿಸುತ್ತಿರುವ ಕೇಂದ್ರ ಸರಕಾರಕ್ಕೆ ಕೇಂದ್ರ ಜಾಗೃತ ಆಯುಕ್ತ ಪಿ.ಜೆ. ಥಾಮಸ್ ಈಗ ನುಂಗಲಾರದ ತುತ್ತು. ಹಲವಾರು ಬಾರಿ ಇಂತಹ ಪರಿಸ್ಥಿತಿಯನ್ನೆದುರಿಸಿದರೂ, ಈ ಬಾರಿ ಪ್ರತಿಪಕ್ಷ ಬಿಜೆಪಿಯ ಹಿಡಿತ ಕೊಂಚ ಬಿಗಿಯಾಗುತ್ತಿರುವಂತೆ ಕಂಡು ಬರುತ್ತಿರುವುದರಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೈಗೊಳ್ಳುವ ನಿರ್ಧಾರ ಅಂತಿಮವೆನಿಸಲಿದೆ.
ಕಳಂಕಿತ ವ್ಯಕ್ತಿಯೊಬ್ಬನನ್ನು ಕೇಂದ್ರದ ಉನ್ನತ ತನಿಖಾ ಸಂಸ್ಥೆಗೆ, ಅದರಲ್ಲೂ ಸಿಬಿಐ ಉಸ್ತುವಾರಿ ನೋಡಿಕೊಳ್ಳುವ ಸಂಸ್ಥೆಗೆ (ಸಿವಿಸಿ-ಕೇಂದ್ರ ಜಾಗೃತ ಆಯೋಗ) ನೇಮಕ ಮಾಡಿರುವ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿರುವುದರಿಂದ ಥಾಮಸ್ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ವರದಿಗಳು ಹೇಳಿವೆ.
ಹಗರಣವೊಂದರ ಸಂಬಂಧ ಥಾಮಸ್ ವಿರುದ್ಧ ಆರೋಪಪಟ್ಟಿ ದಾಖಲಾಗಿರುವ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇರಳ ಸರಕಾರವು ಅನುಮತಿ ನೀಡಿರುವ ವಿಚಾರ, ಸಿವಿಸಿ ನೇಮಕ ಸಂಬಂಧ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಗೆ (ಪ್ರಧಾನಿ ಮನಮೋಹನ್ ಸಿಂಗ್, ಗೃಹಸಚಿವ ಪಿ. ಚಿದಂಬರಂ ಮತ್ತು ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್) ತಿಳಿದಿರಲಿಲ್ಲ ಎಂದು ನಿನ್ನೆಯಷ್ಟೇ ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರವು ತಿಳಿಸಿತ್ತು.
ಇದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ಸುಪ್ರೀಂ ಕೋರ್ಟಿಗೆ ಹೋಗುವ ಬೆದರಿಕೆ ಹಾಕಿದೆ. ಥಾಮಸ್ ಕಳಂಕಿತ ಎನ್ನುವುದು ಕೇಂದ್ರ ಸರಕಾರಕ್ಕೆ ಗೊತ್ತಿತ್ತು. ಸಮಿತಿಯಲ್ಲಿದ್ದ ನಾನು ಆಯ್ಕೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ದಾಖಲಿಸಿದ್ದರೂ, ಅದನ್ನು ಮತ್ತು ಅವರ ಮೇಲಿರುವ ಆರೋಪವನ್ನು ಸರಕಾರ ನಿರ್ಲಕ್ಷಿಸಿತ್ತು. ಸರಕಾರವು ಈಗ ನ್ಯಾಯಾಲಯಕ್ಕೆ ಸುಳ್ಳು ಹೇಳುತ್ತಿದೆ ಎಂದು ಸುಷ್ಮಾ ಸ್ವರಾಜ್ ಚಾಟಿ ಬೀಸಿದ್ದಾರೆ.
ಥಾಮಸ್ ನೇಮಕದಿಂದ ಹಿಡಿದು ಇಲ್ಲಿಯವರೆಗೂ ಅವರನ್ನು ಸಮರ್ಥಿಸುತ್ತಾ ಬಂದಿರುವ ಕಾಂಗ್ರೆಸ್ ಮತ್ತು ಕೇಂದ್ರ ಸರಕಾರ ಈಗ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಇದೇ ಸಂಬಂಧ ಕಾಂಗ್ರೆಸ್ ಉನ್ನತ ಸಮಿತಿಯ ಸಭೆಯೂ ನಡೆಯಲಿದೆ. ಈಗಾಗಲೇ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಮತ್ತು ಗೃಹಸಚಿವ ಪಿ. ಚಿದಂಬರಂ ಪರಸ್ಪರ ಮಾತುಕತೆ ನಡೆಸಿದ್ದಾರೆ. ಥಾಮಸ್ ಅಂತಿಮ ನಿರ್ಧಾರ ಸೋನಿಯಾ ಗಾಂಧಿ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಕೆಲವು ವರದಿಗಳ ಪ್ರಕಾರ ಥಾಮಸ್ ನೇರವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿ, ತನ್ನ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರಿಗೆ ನೀಡಲಿದ್ದಾರೆ.