ತಾನು ಗಾಂಧಿ ಕುಟುಂಬಕ್ಕೆ ಸೇರಿದ ಕಾರಣದಿಂದ ರಾಜಕಾರಣದಲ್ಲಿದ್ದೇನೆ ಎಂಬುದನ್ನು ಮತ್ತೊಮ್ಮೆ ಒಪ್ಪಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಪಕ್ಷದಲ್ಲಿನ ಕುಟುಂಬ ರಾಜಕಾರಣ ಪ್ರಭಾವವನ್ನು ಕಿತ್ತೊಗೆಯಬೇಕಾದ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.
ಕುಟುಂಬ ರಾಜಕೀಯವನ್ನು ನಾವು ಬದಲಾವಣೆ ಮಾಡಬೇಕಾದ ಅಗತ್ಯವಿದೆ. ಅದೇ ಕಾರಣದಿಂದ ಸಾಂಸ್ಥಿಕ ಚುನಾವಣೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ವಂಶ ರಾಜಕಾರಣ ಇರುವುದಿಲ್ಲ ಎಂದರು.
ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯಲ್ಲಿನ 700ರಷ್ಟು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುತ್ತಿದ್ದ ಕಾಂಗ್ರೆಸ್‌ನ ಯುವ ನಾಯಕ, 'ನಾನು ಗಾಂಧಿ ಕುಟುಂಬದವನಾಗಿರುವ ಕಾರಣದಿಂದಲೇ ರಾಜಕೀಯದಲ್ಲಿ ಇದ್ದೇನೆ' ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡರು.
ಬೀಡ್ ಜಿಲ್ಲೆಯ ಎನ್ಎಸ್‌ಯುಐ ಚುನಾವಣೆಗಳಲ್ಲಿ ವಿದ್ಯಾರ್ಥಿಗಳಲ್ಲದವರ ಹೆಸರುಗಳನ್ನು ಸೇರಿಸಲಾಗಿದೆ ಮತ್ತು ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದನ್ನು ತಾನು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ತಿಳಿದುಕೊಂಡಿದ್ದೇನೆ ಎಂದು ವಿದ್ಯಾರ್ಥಿಯೊಬ್ಬ ರಾಹುಲ್ ಅವರಿಗೆ ಇದೇ ಸಂದರ್ಭದಲ್ಲಿ ದೂರು ನೀಡಿದ.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ. ಈ ಸಂಬಂಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾನ್, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ ರಾವ್ ಠಾಕ್ರೆ, ಯುವ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಸತಾವ್ ಹಾಜರಿದ್ದರು.
ಭಾರತದಲ್ಲಿ ಕುಟುಂಬ ರಾಜಕಾರಣ ಅಗತ್ಯ ಮತ್ತು ಮಹತ್ವದ್ದಾಗಿದೆ ಎಂದು ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಹೇಳಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.