ಇಶ್ರತ್ ಜಹಾನ್ ಎನ್‌ಕೌಂಟರ್ ಕೇಸ್‌ನಲ್ಲಿ ನಾಟಕೀಯ ಬದಲಾವಣೆಯಾಗಿದ್ದು, ಎನ್‌ಕೌಂಟರ್ ಪೂರ್ವ ನಿಯೋಜಿತವಾಗಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಸಿಟ್) ಸದಸ್ಯ ಮತ್ತು ಅಹಮದಾಬಾದ್ ಜಂಟಿ ಆಯುಕ್ತ ಸತೀಶ್ ವರ್ಮಾ ಪ್ರತಿಪಾದಿಸಿದ್ದಾರೆ.
ಈ ಸಂಬಂಧ ಅವರು ಗುಜರಾತ್ ಹೈಕೋರ್ಟಿನಲ್ಲಿ 75 ಪುಟಗಳ ಅಫಿಡವಿತ್ ಸಲ್ಲಿಸಿದ್ದಾರೆ.
ಸಿಟ್ ಅಧ್ಯಕ್ಷ ಕರ್ನೈಲ್ ಸಿಂಗ್ ಮತ್ತು ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು ತನಿಖೆಯನ್ನು ತಿರುಚುತ್ತಿದ್ದಾರೆ. ಸಿಟ್ ತನಿಖಾ ತಂಡದ ಇತರ ಸದಸ್ಯರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸತೀಶ್ ವರ್ಮಾ ಸಲ್ಲಿಸಿರುವ ಅಫಿಡವಿತ್‌ನಲ್ಲಿ ಆರೋಪಿಸಿದ್ದಾರೆ.
ಸಾಕ್ಷಿಗಳ ಹೇಳಿಕೆಗಳು ಮತ್ತು ಎನ್‌ಕೌಂಟರ್ ನಕಲಿ ಎಂದಿರುವ ವರ್ಮಾ, ಇದುವರೆಗೂ ಸಾಕ್ಷಿದಾರರಿಗೆ ಯಾವುದೇ ರೀತಿಯ ಭದ್ರತೆಯನ್ನು ಒದಗಿಸಿಲ್ಲ. ಅದೇ ಕಾರಣದಿಂದ ಅವರು ಹೊರಗೆ ಬಂದು ಸತ್ಯ ಹೇಳಲು ಹೆದರುತ್ತಿದ್ದಾರೆ ಎಂದು ಶರ್ಮಾ ತಿಳಿಸಿದ್ದಾರೆ.
2005ರಲ್ಲಿ ನಡೆದ ಸೊಹ್ರಾಬುದ್ಧೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮತ್ತು ಪ್ರಸಕ್ತ ಅದೇ ಪ್ರಕರಣದಲ್ಲಿ ಜೈಲಿನಲ್ಲಿರುವ ಡಿಐಜಿ ಡಿ.ಜಿ. ವಂಜಾರಾ, ಇಶ್ರತ್ ಎನ್‌ಕೌಂಟರಿನಲ್ಲಿ ನಂಟು ಹೊಂದಿದ್ದಾರೆ ಎಂದೂ ಶರ್ಮಾ ತನ್ನ ಅಫಿಡವಿತ್‌ನಲ್ಲಿ ನಮೂದಿಸಿದ್ದಾರೆ.
ಸೊಹ್ರಾಬುದ್ದೀನ್ ಮತ್ತು ಆತನ ಪತ್ನಿ ಕೌಸರ್ ಬಿ ಅವರನ್ನು ಇಡಲಾಗಿದ್ದ ಗೆಸ್ಟ್‌ಹೌಸ್‌ನಲ್ಲೇ ಇಶ್ರತ್ ಮತ್ತಿತರನ್ನು ನಾಲ್ಕು ದಿನಗಳ ಕಾಲ ಬಂದಿಸಿಟ್ಟಿದ್ದು, ನಂತರ ಕಣ್ಣಿಗೆ ಬಟ್ಟೆಕಟ್ಟಿ ನೀಲಿ ಬಣ್ಣದ ಇಂಡಿಕಾ ಕಾರಿನಲ್ಲಿ ಸಾಗಿಸಿ ಗುಂಡು ಹೊಡೆದು ಸಾಯಿಸಲಾಗಿದೆ ಎಂದು ವರ್ಮಾ ತನ್ನ ಆರೋಪದಲ್ಲಿ ಉಲ್ಲೇಖಿಸಿದ್ದಾರೆ.
ಮುಂಬಯಿ ಮೂಲದ ಇಶ್ರತ್ ಸೇರಿದಂತೆ ಜಾವೇದ್ ಗುಲಾಂ ಶೇಖ್ ಅಲಿಯಾಸ್ ಪ್ರಾಣೇಶ್ ಕುಮಾರ್ ಪಿಳ್ಳೈ, ಅಮ್ಜದ್ ಅಲಿ ಅಲಿಯಾಸ್ ರಾಜ್‌ಕುಮಾರ್, ಅಕ್ಬರ್ ಅಲಿ ರಾಣಾ ಮತ್ತು ಜಿಸನ್ ಜೋಹಾರ್ ಅಬ್ದುಲ್ ಘನಿ ಇವರುಗಳು 2004ರ ಜೂನ್ 15ರಂದು ಗುಜರಾತ್ ಪೊಲೀಸರ ಗುಂಡಿಗೆ ಬಲಿಯಾಗಿದ್ದರು.
ಬಲಿಯಾದ ಐದು ಮಂದಿ ಕುಖ್ಯಾತ ಭಯೋತ್ಪಾದನಾ ಸಂಘಟನೆ ಲಷ್ಕರ್ ಇ ತೊಯ್ಬಾಕ್ಕೆ ಸೇರಿದವರಾಗಿದ್ದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕೊಲ್ಲುವ ಉದ್ದೇಶದಿಂದ ಬಂದಿದ್ದಾರೆ ಎಂದು ಆರೋಪಿಸಿ ಈ ಇಶ್ರತ್ ಎನ್‌ಕೌಂಟರ್ ನಡೆದಿತ್ತು.