ಆದರ್ಶ ನಿವೇಶನ ಹಗರಣಕ್ಕೆ ಸಂಬಂಧಿಸಿ ಕೆಲವು ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ಮಹಾರಾಷ್ಟ್ರ ಸರಕಾರದ ಕೆಲವು ಅಧಿಕಾರಿಗಳೊಂದಿಗೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಇಂದು ಕೇಸು ದಾಖಲಿಸಿದೆ.
ಮಾಜಿ ಮೇಜರ್ ಜನರಲ್ ಎಂ.ಎಂ. ವಾಂಚೂ ಸೇರಿದಂತೆ ಆರ್.ಸಿ.ಠಾಕೂರ್ ಮತ್ತು ಕನ್ಹೈಯಾ ಲಾಲ್ ಗಿಡ್‌ವಾನಿ ಅವರು ಹಗರಣದ ಪ್ರಮುಖ ಸೂತ್ರದಾರರು ಎಂದು ಹೆಸರಿಸಲಾಗಿದೆ.
ಕಾರ್ಗಿಲ್ ಯೋಧರ ವಿಧವೆಯರಿಗೆಂದು ಮೀಸಲಾಗಿದ್ದ ಆದರ್ಶ ಸೊಸೈಟಿಯ ನಿವೇಶನಗಳನ್ನು ಮುಖ್ಯಮಂತ್ರಿ ಮತ್ತು ಇತರ ಅಧಿಕಾರಿಗಳು ದಾಖಲೆಗಳನ್ನು ಫೋರ್ಜರಿ ಮಾಡಿ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮಗೆ ಬೇಕಾದವರಿಗೆ, ಆಪ್ತೇಷ್ಟರಿಗೆ ಕೊಡಿಸಿರುವುದು ಕಳೆದ ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳ ತೀವ್ರ ಒತ್ತಡದ ಬಳಿಕ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚವಾಣ್ ರಾಜೀನಾಮೆ ನೀಡಬೇಕಾಗಿಬಂದಿತ್ತು.
ಆದರ್ಶ ನಿವೇಶನ ಹಗರಣದ ತನಿಖೆ ಮಂದಗತಿಯಲ್ಲಿ ಸಾಗುತ್ತಿರುವ ಕುರಿತು ಬಾಂಬೆ ಹೈಕೋರ್ಟ್ ಕಳೆದ ವಾರ ಆಕ್ಷೇಪ ವ್ಯಕ್ತಪಡಿಸಿ, ಪ್ರಾಥಮಿಕ ತನಿಖೆ ಆರಂಭಿಸಿ ಎರಡು ತಿಂಗಳಾದರೂ ಇನ್ನೂ ಏಕೆ ಕೇಸು ದಾಖಲಿಸಿಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡ ನಂತರ ಸಿಬಿಐ ಕೇಸು ದಾಖಲಿಸಿದೆ. ಹಗರಣದ ತನಿಖೆ ಕಳೆದ ನವೆಂಬರ್‌ನಿಂದ ಪ್ರಾರಂಭವಾಗಿತ್ತು.
ಮಾಜಿ ಸೇನಾ ಮುಖ್ಯಸ್ಥರಾದ ಜನರಲ್ ದೀಪಕ್ ಕಪೂರ್, ಜನರಲ್ ಎನ್.ಸಿ.ವಿಜ್ ಮತ್ತು ನೌಕಾದಳದ ಮುಖ್ಯಸ್ಥರಾದ ಮಹದೇವೇಂದ್ರ ಸಿಂಗ್ ಅವರು ಈಗಾಗಲೇ ಹೊಂದಿದ್ದ ನಿವೇಶನವನ್ನು ಹಿಂತಿರುಗಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಮೂಲವಾಗಿ 6 ಮಹಡಿಗಳಿಗೆ ಅನುಮತಿ ನೀಡಲಾಗಿದ್ದು, ನಂತರ ಅದನ್ನು 31 ಮಹಡಿಗಳಲ್ಲಿ ಕಟ್ಟಲಾಗಿತ್ತು. ಪರಿಸರ ನಿಯಮಾವಳಿಯನ್ನೂ ಮೀರಿ, ಸೂಕ್ತ ಪರವಾನಗಿ ಇಲ್ಲದಿರುವ ಈ ಸಂಕೀರ್ಣ ಅಕ್ರಮವಾಗಿದ್ದು, ಇದನ್ನು ಮೂರು ತಿಂಗಳೊಳಗೆ ಧ್ವಂಸಗೊಳಿಸುವಂತೆ ಜನವರಿ 16 ರಂದು ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆ ಆದೇಶಿಸಿತ್ತು.