ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಮಕ್ಕಳಿಗೆ ಜಮೀನು ಹಂಚಿದ್ದು ತಪ್ಪು: ಯಡಿಯೂರಪ್ಪ (Land allotment | Karnataka | BS Yeddyurappa | HR Bhardwaj)
NRB
ನನ್ನ ಗಂಡು ಮಕ್ಕಳಿಗೆ ಭೂಮಿ ಹಂಚಿಕೆ ಮಾಡಿರುವುದು ತಪ್ಪು ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊತ್ತ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಆದರೆ ಇದು ಅನೈತಿಕ ಅಥವಾ ಕಾನೂನು ಬಾಹಿರವಾದದ್ದು ಎಂಬುದನ್ನು ನಿರಾಕರಿಸಿದ್ದಾರೆ.

'ಭೂಮಿ ಲಭ್ಯವಿದ್ದರೆ, ಅದನ್ನು ಮುಖ್ಯಮಂತ್ರಿಯಾದವನು (ಮುಖ್ಯಮಂತ್ರಿ ವಿವೇಚನಾ ಕೋಟಾದ ಅಡಿಯಲ್ಲಿ) ಯಾರಿಗೆ ಬೇಕಾದರೂ ನೀಡಬಹುದು. ಆದರೆ ನಾನು ಮಾಡಿದ ತಪ್ಪೆಂದರೆ ನನ್ನ ಮಗನಿಗೆ ಭೂ ಹಂಚಿಕೆ ಮಾಡಿದ್ದು. ಈ ಕುರಿತು ನ್ಯಾಯಾಲಯ ತೀರ್ಮಾನ (ಸರಿ ಎಂದು) ಕೈಗೊಂಡರೆ, ಭೂಮಿಯನ್ನು ಅವರು (ಯಡಿಯೂರಪ್ಪನವರ ಮಕ್ಕಳು) ಮರಳಿ ಪಡೆಯಲಿ' ಎಂದರು.

ಇಷ್ಟಾದಾರೂ, 'ಯಡಿಯೂರಪ್ಪನವರದ್ದು ಅನೈತಿಕ, ಆದರೆ ಕಾನೂನು ಬಾಹಿರವಲ್ಲ' ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಹೇಳಿದ್ದನ್ನು ಒಪ್ಪಿಕೊಳ್ಳಲು ಮುಖ್ಯಮಂತ್ರಿ ನಿರಾಕರಿಸಿದರು.

'ನಾನು ಈ ಬಗ್ಗೆ ಗಡ್ಕರಿಯವರಲ್ಲಿ ಮಾತನಾಡುತ್ತೇನೆ. ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರಿಗೆ ಯಾರೋ ತಪ್ಪಾಗಿ ಮಾಹಿತಿ ನೀಡಿದ್ದಾರೆ' ಎಂದು ಈ ಹಿಂದೆ ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡನ್ನೇ ಒತ್ತೆಯಾಗಿಟ್ಟುಕೊಂಡಂತಹ ಪರಿಸ್ಥಿತಿ ಸೃಷ್ಟಿಸಿದ್ದ ನಾಯಕ ತಿಳಿಸಿದರು.

ಅದೇ ಹೊತ್ತಿಗೆ ತನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರುದ್ಧ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದರು.

ಅವರು ರಾಜಭವನವನ್ನು ರಾಜಕೀಯ ಪಕ್ಷದ ಕಚೇರಿಯನ್ನಾಗಿ ಬದಲಾಯಿಸಿದ್ದಾರೆ. ನಿಮ್ಮ ಉದ್ದೇಶ ಏನು ಎಂದು ನಾನು ಗವರ್ನರ್ ಸಾಹೇಬರಲ್ಲಿ ಪ್ರಶ್ನಿಸಲು ಬಯಸುತ್ತಿದ್ದೇನೆ. ಅವರು ನಿರ್ದಿಷ್ಟ ಉದ್ದೇಶವೊಂದನ್ನು ಇಟ್ಟುಕೊಂಡು ಕರ್ನಾಟಕಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತನ್ನ ಕಾರ್ಯ ಸಾಧನೆಗಾಗಿ ಅವರನ್ನು ರಾಜ್ಯಕ್ಕೆ ಕಳುಹಿಸಿದೆ ಎಂದು ಆರೋಪಿಸಿದರು.

ಅವರನ್ನು ಗುರಿಯೊಂದನ್ನು ಮುಟ್ಟುವ ಸಲುವಾಗಿ ಕಳುಹಿಸಲಾಗಿರುವುದು ಸ್ಪಷ್ಟ. ಪ್ರತಿದಿನದ ಬೆಳವಣಿಗೆಗಳನ್ನು ಗಮನಿಸಿದಾಗ, ರಾಜ್ಯಪಾಲರು ಕರ್ನಾಟಕದ ಪ್ರತಿಪಕ್ಷದ ನಾಯಕನಂತೆ ಕಂಡು ಬರುತ್ತಿದ್ದಾರೆ. ಅವರು ಭೂ ವಿವಾದಗಳ ಗೊಂದಲಗಳ ನಿವಾರಣೆಯ ಚರ್ಚೆಗೆ ಯಾವತ್ತೂ ನನ್ನನ್ನು ಕರೆಸಿಕೊಂಡವರಲ್ಲ ಅಥವಾ ನೋಟೀಸ್ ಕಳುಹಿಸಿದವರಲ್ಲ ಎಂದರು.
ಸಂಬಂಧಿತ ಲೇಖನಗಳು