ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ವಿಸ್ ಹಣ ಬಹಿರಂಗಪಡಿಸಲು ಏನು ಅಡ್ಡಿ?: ಸೋನಿಯಾಗೆ ಗಡ್ಕರಿ (Gadkari | Sonia Gandhi | black money | Swiss bank)
PTI
ಸ್ವಿಸ್ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಕಪ್ಪು ಹಣ ಇಟ್ಟಿರುವ ಭಾರತೀಯರ ಹೆಸರು ಬಹಿರಂಗಪಡಿಸುವುದಕ್ಕೆ ಕೇಂದ್ರ ಸರಕಾರವನ್ನು ತಡೆದ ಶಕ್ತಿ ಯಾವುದು ಎಂಬುದರ ಕುರಿತು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮುಖ್ಯಸ್ಥೆ ಸೋನಿಯಾ ಗಾಂಧಿ ವಿವರಣೆ ನೀಡಬೇಕೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಒತ್ತಾಯಿಸಿದ್ದಾರೆ.

ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ತಮಿಳುನಾಡಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ 40 ದಿನಗಳ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ಸ್ವಿಸ್ ಬ್ಯಾಂಕ್‌ನ ಖಾತೆಗಳಲ್ಲಿ ಕಪ್ಪುಹಣ ಇಟ್ಟಿರುವವರ ಹೆಸರನ್ನು ಏಕೆ ಬಹಿರಂಗ ಪಡಿಸುತ್ತಿಲ್ಲ ಎಂಬ ಮಿಲಿಯನ್ ಡಾಲರ್ ಪ್ರಶ್ನೆಯನ್ನು ನಾನು ಕಾಂಗ್ರೆಸ್ ಮುಂದಿಡುತ್ತಿದ್ದೇನೆ ಎಂದರು.

ಖಾತೆ ಹೊಂದಿರುವ ಭಾರತೀಯರ ಹೆಸರನ್ನು ಬಹಿರಂಗಪಡಿಸದಿರಲು ಇರುವ ಕಾರಣವಾದರೂ ಏನು ಎಂದು ಒತ್ತಾಯಿಸುವ ಮೂಲಕ ಗಡ್ಕರಿ ಅವರು, ಈಗಾಗಲೇ ಕಪ್ಪು ಹಣದ ಕುರಿತು ಸುಪ್ರೀಂ ಕೋರ್ಟಿನಿಂದಲೂ ಛೀಮಾರಿ ಹಾಕಿಸಿಕೊಂಡಿರುವ ಕೇಂದ್ರದ ಮೇಲೆ ಬಿಜೆಪಿಯ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಸ್ವಿಸ್ ಹಣದ ಮಾಹಿತಿ ಮುಚ್ಚಿಟ್ಟಿರುವ ಕೇಂದ್ರದ ಧೋರಣೆಯನ್ನು ಕಟುವಾಗಿ ಟೀಕಿಸಿದ್ದ ಸುಪ್ರೀಂ ಕೋರ್ಟು, ಇದು ಕೇವಲ ತೆರಿಗೆಕಳ್ಳತನದ ಹಣವಲ್ಲ,
ಇದು ಕಳ್ಳತನ ಮತ್ತು ಸುಲಿಗೆ
ಮಾಡಿ ಅಲ್ಲಿ ಹಣ ಜಮಾಯಿಸಿಟ್ಟ ಭಯಾನಕ ಅಪರಾಧವೂ ಹೌದು ಎಂದು ಕಾಂಗ್ರೆಸ್ ಸರಕಾರದ ಮುಖಕ್ಕೆ ಹೊಡೆದಂತೆ ಹೇಳಿತ್ತು.

ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನೆಲ್ಲ ವಾಪಾಸು ತಂದರೆ ದೇಶದ ಬೃಹತ್ ನದಿ ಜೋಡಣೆ ಯೋಜನೆಗೆ ಅದನ್ನು ಬಳಸಿಕೊಳ್ಳಬಹುದಿತ್ತು. ಎನ್‌ಡಿಎ ಅಧಿಕಾರಕ್ಕೆ ಬಂದರೆ ಕಪ್ಪು ಹಣವನ್ನೆಲ್ಲ ಭಾರತಕ್ಕೆ ವಾಪಾಸು ತಂದು ನದಿ ಜೋಡಣೆಗೆ ಬಳಸುವ ಮೂಲಕ ನೀರಿಲ್ಲದೆ ಬಳಲುತ್ತಿರುವ ದಕ್ಷಿಣದ ರಾಜ್ಯಗಳಿಗೆ ಉಪಯೋಗವಾಗುವಂತೆ ಮಾಡಲಾಗುವುದು ಎಂದರು.

ಅಬ್ದುಲ್ ಕಲಾಂ ಅವರ ನದಿಜೋಡಣೆಯ ಚಿಂತನೆಯನ್ನು ಅನುಸರಿಸುವಂತೆ ನೆರೆದಿದ್ದ ಜನತೆಗೆ ಕರೆ ನೀಡಿದ ಗಡ್ಕರಿ, ಕಲಾಂ ಅವರನ್ನು ಅನುಸರಿಸಬೇಕೋ ಅಥವಾ ಯೋಜನೆಯನ್ನು ವಿರೋಧಿಸುತ್ತಿರುವ ರಾಹುಲ್ ಗಾಂಧಿಯನ್ನೋ ಎಂದು ನಿರ್ಧರಿಸಲು ತಮಿಳರಿಗೆ ಇದು ಸೂಕ್ತ ಸಮಯ ಎಂದರು.

ಶ್ರೀಲಂಕಾದ ತಮಿಳರ ವಿಷಯವನ್ನು ಪ್ರಸ್ತಾಪಿಸಿ, ಇದು ಕೇವಲ ತಮಿಳುನಾಡಿಗೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲ, ದೇಶದ ಸಮಸ್ಯೆಯೂ ಆಗಿದೆ. ಅಲ್ಲಿನ ತಮಿಳರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವುದು ಶ್ರೀಲಂಕಾದ ಮೂಲಭೂತ ಕರ್ತವ್ಯ ಎಂದ ಗಡ್ಕರಿ, ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ತಮ್ಮ ಪಕ್ಷ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಬಿಜೆಪಿ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಿದೆ ಎಂದ ಅವರು, ಶ್ರೀಲಂಕಾ ತಮಿಳರ ಏಳಿಗೆಗೆ ಶ್ರಮಿಸುತ್ತಿರುವ ತಮ್ಮ ಪಕ್ಷದ ಸೇವಾ ಸಮಿತಿಗೆ ಹತ್ತು ಲಕ್ಷ ರೂಪಾಯಿ ಕೊಡುಗೆ ನೀಡುವುದಾಗಿ ತಿಳಿಸಿದರು.
ಸಂಬಂಧಿತ ಲೇಖನಗಳು