ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚರ್ಚ್ ದಾಳಿಯ ಹಿಂದೆ ಲೆ.ಕರ್ನಲ್ ಪುರೋಹಿತ್ ಕೈವಾಡ! (North karnataka | Purohit | Malegaon bomb blasts | Abhinav Bharat,)
ಚರ್ಚ್ ದಾಳಿಯ ಹಿಂದೆ ಲೆ.ಕರ್ನಲ್ ಪುರೋಹಿತ್ ಕೈವಾಡ!
ನವದೆಹಲಿ, ಭಾನುವಾರ, 30 ಜನವರಿ 2011( 10:48 IST )
ಉತ್ತರ ಕರ್ನಾಟಕ, ಪುಣೆ, ಜಬಲ್‌ಪುರ್, ಒಡಿಶಾ ಸೇರಿದಂತೆ ದೇಶದ ವಿವಿಧೆಡೆ ನಡೆದ ಚರ್ಚ್ ದಾಳಿಯ ಹಿಂದೆ ಲೆ.ಕರ್ನಲ್ ಪುರೋಹಿತ್ ಹಾಗೂ ಅಭಿನವ ಭಾರತದ ಕೈವಾಡ ಇರುವ ಬಗ್ಗೆ ಸೇನಾ ಗುಪ್ತದಳದ ವರದಿಯಲ್ಲಿ ಬಹಿರಂಗವಾಗಿದೆ.
ಮಾಲೆಗಾಂವ್ ಸ್ಫೋಟದ ಆರೋಪಿಯಾಗಿರುವ ಕರ್ನಲ್ ಪುರೋಹಿತ್ ವಿಚಾರಣೆ ವೇಳೆ ಈ ಮಾಹಿತಿಯ ಬಗ್ಗೆ ಬಾಯ್ಬಿಟ್ಟಿರುವುದಾಗಿ ವರದಿಯಲ್ಲಿ ತಿಳಿಸಿದೆ. 2008ರಲ್ಲಿ ಹುಬ್ಬಳ್ಳಿ-ಧಾರವಾಡ, ಯಲ್ಲಾಪುರ, ರಾಣೆ ಬೆನ್ನೂರಿನಲ್ಲಿ ಕ್ರೈಸ್ತರ ಮೇಲೆ ದಾಳಿ ನಡೆದಿತ್ತು. ಅಲ್ಲದೇ ಪುಣೆ, ಜಬಲ್ ಪುರ್, ಭೋಪಾಲ್ ಮತ್ತು ಮಾಲೇಗಾಂವ್ ಸ್ಫೋಟದಲ್ಲಿ ಪುರೋಹಿತ್ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ ಎಂದು ಸೇನಾ ಗುಪ್ತಚರ ವರದಿ ಹೇಳಿದೆ.
ಉತ್ತರ ಕರ್ನಾಟಕದ ಈ ಭಾಗದಲ್ಲಿ ಆಮಿಷವೊಡ್ಡಿ ಮತಾಂತರ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ರೈಸ್ತರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವುದಾಗಿ ಪುರೋಹಿತ್ ಒಪ್ಪಿಕೊಂಡಿದ್ದಾನೆಂದು ಸೇನಾಗುಪ್ತದಳದ ವರದಿ ವಿವರಿಸಿದೆ. ಅಷ್ಟೇ ಅಲ್ಲ ಬಂಧಿತ ಮತ್ತೋರ್ವ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಕೂಡ ಇದೇ ಮಾಹಿತಿಯನ್ನು ಹೊರ ಹಾಕಿರುವುದಾಗಿ ಹೇಳಿದ್ದಾರೆ.
2008-09ರಲ್ಲಿ ರಾಜ್ಯದ ವಿವಿಧೆಡೆ ಚರ್ಚ್ ಮೇಲೆ ನಡೆದ ದಾಳಿ ಪ್ರಕರಣದ ಕುರಿತು ನ್ಯಾ.ಸೋಮಶೇಖರ್ ನೇತೃತ್ವದ ತನಿಖಾ ಆಯೋಗ ಇತ್ತೀಚೆಗಷ್ಟೇ ಸರಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ಆಯೋಗ ಸರಕಾರ ಮತ್ತು ಸಂಘ ಪರಿವಾರಕ್ಕೆ ಕ್ಲೀನ್ ಚಿಟ್ ನೀಡಿತ್ತು. ಏತನ್ಮಧ್ಯೆ ಚರ್ಚ್ ದಾಳಿ ಕುರಿತ ಮಧ್ಯಂತರ ವರದಿಯಲ್ಲಿ ಆಯೋಗ ಸಂಘ ಪರಿವಾರ ಮತ್ತು ಪೊಲೀಸ್ ಇಲಾಖೆ ಮೇಲೆ ಗೂಬೆ ಕೂರಿಸಿತ್ತು. ಆದರೆ ಅಂತಿಮ ವರದಿಯಲ್ಲಿ ಆ ಯಾವುದೇ ಅಂಶಗಳು ಇಲ್ಲದಿರುವ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿವೆ.
ಇದೀಗ 2008ರಲ್ಲಿ ಉತ್ತರ ಕರ್ನಾಟಕದಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಯ ಹಿಂದೆ ಪುರೋಹಿತ್ ಕೈವಾಡ ಇರುವುದಾಗಿ ಸ್ವತಃ ಅವರೇ ಒಪ್ಪಿಕೊಂಡಿರುವುದು ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವಂತಾಗಿದೆ.