2010ರ ಸಾಲಿನ ವಿಶ್ವ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತವು ಮೂರು ಸ್ಥಾನಗಳ ಕುಸಿತ ಕಂಡು 87ಕ್ಕೆ ತಲುಪಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಹಗರಣವೇ ಕಾರಣ ಎಂದು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಆರೋಪಿಸಿದ್ದಾರೆ.
ಈಗಷ್ಟೇ ಕಳೆದು ಹೋಗಿರುವ 2010ರ ವರ್ಷದಲ್ಲಿ ಆಹಾರ ವಸ್ತುಗಳು ಮತ್ತು ಪೆಟ್ರೋಲ್-ಡೀಸೆಲ್ ಬೆಲೆಯೇರಿಕೆಗಳಿಂದ ಸಾಮಾನ್ಯರ ಕುಟುಂಬಗಳ ಬಜೆಟ್ ಸಂಪೂರ್ಣವಾಗಿ ಹದಗೆಟ್ಟು ಪ್ರಜೆಗಳಿಗೆ ಅಪಾರ ಯಾತನೆ ಮತ್ತು ಆರ್ಥಿಕ ಮುಗ್ಗಟ್ಟನ್ನು ನೀಡಿರುವುದಷ್ಟೇ ಅಲ್ಲ, ಜತೆಗೆ ವಿಶ್ವದ ಅತಿ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಕಳಪೆ ಸ್ಥಾನ ಪಡೆದುಕೊಳ್ಳುತ್ತಿದೆ ಎಂದು ಅಡ್ವಾಣಿ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.
ವೆಬ್‌ಸೈಟಿನಲ್ಲಿನ ವರದಿಯೊಂದನ್ನು ಉದಾಹರಣೆಯಾಗಿ ನೀಡುತ್ತಾ ವಿವರಣೆ ನೀಡಿರುವ ಅಡ್ವಾಣಿ, 'ಟ್ರಾನ್ಸ್‌ಫರೆನ್ಸಿ ಇಂಟರ್ ನ್ಯಾಷನಲ್'ನ ಇತ್ತೀಚಿನ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತವು 87ನೇ ಸ್ಥಾನಕ್ಕೆ ಕುಸಿತ ಕಂಡಿದೆ. 2009ರಲ್ಲಿ 84ನೇ ಸ್ಥಾನದಲ್ಲಿದ್ದ ಭಾರತವು 2010ರ ವರ್ಷದಲ್ಲಿ ಮೂರು ಸ್ಥಾನಗಳ ಕುಸಿತ ಕಂಡು 87ಕ್ಕೆ ತಲುಪಿದೆ ಎಂದಿದ್ದಾರೆ.
ಈ ಕುರಿತ ಮಾಧ್ಯಮ ವರದಿಯನ್ನೇ ಬಿಜೆಪಿ ನಾಯಕ ತನ್ನ ಬ್ಲಾಗಿನಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಡೆದ ಹಗರಣವೇ ಭ್ರಷ್ಟಾಚಾರ ಪಟ್ಟಿಯಲ್ಲಿ ಭಾರತದ ಸ್ಥಾನಕ್ಕೆ ಪ್ರಮುಖ ಕಾರಣ ಎಂದು ಆ ವರದಿ ಹೇಳಿತ್ತು.
ದೇಶದ ನಾಲ್ಕು ಉನ್ನತ ತನಿಖಾ ಸಂಸ್ಥೆಗಳಾದ ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ), ಜಾರಿ ನಿರ್ದೇಶನಾಲಯ (ಇಡಿ), ಮಹಾ ಲೆಕ್ಕಪರಿಶೋಧಕರು (ಸಿಎಜಿ) ಮತ್ತು ಆದಾಯ ತೆರಿಗೆ ಇಲಾಖೆ (ಐಟಿ) ಗೇಮ್ಸ್ ಸಂಘಟನೆಯಲ್ಲಿ ನಡೆದಿರುವ ಹಗರಣಗಳ ಕುರಿತು ತನಿಖೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
ರಾಷ್ಟ್ರಮಟ್ಟದಲ್ಲಿನ ವ್ಯವಸ್ಥೆಯು ತೀರಾ ನಿರುತ್ಸಾಹಗೊಳಿಸುವಂತಿದೆ. ಈ ಹೊತ್ತಿಗೆ ಸಮಾಧಾನ ಮತ್ತು ಹೆಮ್ಮೆ ತರುವ ವರದಿಗಳು ಬರುತ್ತಿರುವುದು ಗುಜರಾತಿನಿಂದ. ಮುಖ್ಯಮಂತ್ರಿ ನರೇಂದ್ರ ಮೋದಿಯವರ 'ವೈಬ್ರೆಂಟ್ ಗುಜರಾತ್' (ಗುಜರಾತ್ ಪ್ರಕಾಶಿಸುತ್ತಿದೆ) 101ಕ್ಕೂ ಹೆಚ್ಚು ದೇಶಗಳು ಮತ್ತು 1,400ರಷ್ಟು ವಿದೇಶಿ ನಿಯೋಗಗಳನ್ನು ಆಕರ್ಷಿಸಿದೆ ಎಂದು ಅಡ್ವಾಣಿ ಬಿಜೆಪಿ ಸರಕಾರದ ಸಾಧನೆಯನ್ನು ಹೊಗಳಿದ್ದಾರೆ.