ಭಾರತದಲ್ಲಿ ಮುಸ್ಲಿಮರಿಗೆ ನ್ಯಾಯ ಸಿಗುತ್ತಿಲ್ಲ: ದಿಗ್ವಿಜಯ್ ಸಿಂಗ್
ಭೋಪಾಲ, ಸೋಮವಾರ, 31 ಜನವರಿ 2011( 12:57 IST )
ಹಲವಾರು ಕಾರಣಗಳಿಂದಾಗಿ ಮುಸ್ಲಿಮರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆ ಸಮುದಾಯದೊಳಗೆ 'ಭಾವನೆ'ಯೊಂದು ಬೆಳೆಯುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅಭಿಪ್ರಾಯಪಟ್ಟರು.
ಮುಸ್ಲಿಮರಲ್ಲಿ ಬೆಳೆಯುತ್ತಿರುವ ಈ ಭಾವದ ಕುರಿತು ನಾವು ಜವಾಬ್ದಾರಿ ತೆಗೆದುಕೊಳ್ಳಬೇಕು ಮತ್ತು ಹಾಗೆ ಮಾಡಿದಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂದರು.
PTI
ಭಾರತದಲ್ಲಿ ಹಿಂದೂ ಧರ್ಮದವರದ್ದೇ ಪ್ರಾಬಲ್ಯ. ಹಾಗಾಗಿ ಇದು ನಮ್ಮ ದೇಶವೂ ಹೌದು ಎಂಬ ನಂಬಿಕೆ-ವಿಶ್ವಾಸವನ್ನು ಮುಸ್ಲಿಮರಲ್ಲಿ ಮೂಡಿಸುವ ಹೊಣೆಗಾರಿಕೆ ಹಿಂದೂಗಳದ್ದಾಗಿರುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿರುವ ದಿಗ್ವಿಜಯ್, ಈ ದೇಶದಲ್ಲಿ ಮುಸ್ಲಿಮರಿಗೆ ನ್ಯಾಯ ಸಿಗುತ್ತದೆ ಮತ್ತು ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು, ಆ ಭಾವನೆ ಅವರಲ್ಲಿ ಬರಬೇಕು ಎಂದು ತಿಳಿಸಿದರು.
ಸಾಮಾನ್ಯ ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರೈಸ್ತರು ಸಂಪೂರ್ಣ ಸೌಹಾರ್ದತೆಯೊಂದಿಗೆ, ಶಾಂತಿಯೊಂದಿಗೆ ಬದುಕಲು ಇಚ್ಛಿಸುತ್ತಿದ್ದಾರೆ ಎಂದು ಹೇಳಿದ ಕಾಂಗ್ರೆಸ್ ಹಿರಿಯ ನಾಯಕ, ಎಲ್ಲಾ ಧರ್ಮಗಳಲ್ಲಿನ ಕೆಲವೊಂದು ಶಕ್ತಿಗಳು ಭಿನ್ನ ಹಾದಿ ತುಳಿದು ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಎಂದರು.
ಭಾರತವು ಒಂದು ಸಮ್ಮಿಳಿತ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ. ಈ ಸಂಸ್ಕೃತಿಯನ್ನು ಭೇದಿಸಲು ಯತ್ನಿಸುವ ಮಂದಿಗೆ ಅವರ ಹೃದಯಗಳಲ್ಲಿ ಭಾರತದ ಹಿತಾಸಕ್ತಿ ಖಂಡಿತಾ ಇರದು ಎಂದೂ ದಿಗ್ವಿಜಯ್ ಹೇಳಿದರು.