ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿವಿಸಿ ಪ್ರಕರಣ; ಸುಷ್ಮಾ ಸ್ವರಾಜ್ ಸುಪ್ರೀಂಗೆ ಹೋಗಲ್ವಂತೆ (Sushma Swaraj | CVC | P Chidambaram | PJ Thomas)
ಪಿ.ಜೆ. ಥಾಮಸ್ ವಿರುದ್ಧದ ಪಾಮೋಲಿವ್ ಪ್ರಕರಣದ ಕುರಿತು ಸಿವಿಸಿ ಆಯ್ಕೆ ಸಮಿತಿಯು ಚರ್ಚೆ ನಡೆಸಿತ್ತು ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಹೇಳಿಕೆ ನೀಡಿರುವುದರಿಂದ ವಿವಾದ ಮುಕ್ತಾಯವಾಗಿದೆ. ಹಾಗಾಗಿ ತಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿಡವಿತ್ ಸಲ್ಲಿಸುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಪ್ರಕಟಿಸಿದ್ದಾರೆ.

ಕೇಂದ್ರ ಜಾಗೃತ ಆಯುಕ್ತರ ಆಯ್ಕೆ ಸಮಿತಿಯಲ್ಲಿ ನಾನು ಪಾಮೋಲಿವ್ ಪ್ರಕರಣವನ್ನು ಪ್ರಸ್ತಾಪಿಸಿದ್ದೆ ಮತ್ತು ಈ ಕುರಿತ ನನ್ನ ಪ್ರತಿಭಟನೆ ದಾಖಲಿಸಿದ್ದೆ ಎಂದು ಈಗ ಗೃಹ ಸಚಿವರು ಒಪ್ಪಿಕೊಂಡಿದ್ದಾರೆ. ಹಾಗಾಗಿ ವಿವಾದ ಇಲ್ಲಿಗೆ ಮುಕ್ತಾಯವಾಗಿದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕಿ ಹಾಗೂ ಸಿವಿಸಿ ಆಯ್ಕೆ ಸಮಿತಿಯ ಸದಸ್ಯೆ ಮಂಗಳವಾರ ತಿಳಿಸಿದ್ದಾರೆ.

ಥಾಮಸ್ ವಿರುದ್ಧ ಪ್ರಕರಣ ದಾಖಲಾಗಿದ್ದ ವಿಚಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಗೃಹಸಚಿವ ಪಿ. ಚಿದಂಬರಂ ಮತ್ತು ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನೊಳಗೊಂಡ ಸಿವಿಸಿ ಆಯ್ಕೆ ಸಮಿತಿಗೆ ತಿಳಿದಿರಲಿಲ್ಲ ಎಂದು ಕಳೆದ ವಾರ ಆಟಾರ್ನಿ ಜನರಲ್ ಜಿ.ಇ. ವಹನ್ವತಿ ಅವರು ಸುಪ್ರೀಂ ಕೋರ್ಟಿಗೆ ತಿಳಿಸಿದ್ದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸುಷ್ಮಾ, ಸರಕಾರವು ನ್ಯಾಯಾಲಯಕ್ಕೆ ಸುಳ್ಳು ಹೇಳುತ್ತಿದೆ. ಸಿವಿಸಿ ಥಾಮಸ್ ವಿರುದ್ಧದ ಪ್ರಕರಣದ ಬಗ್ಗೆ ಸಮಿತಿಗೆ ಅರಿವಿತ್ತು. ಈ ಬಗ್ಗೆ ನನ್ನ ಪ್ರತಿಭಟನೆಯನ್ನು ನಾನು ದಾಖಲಿಸಿದ್ದೆ. ಅವೆಲ್ಲವನ್ನೂ ಸರಕಾರ ಮತ್ತು ಸಮಿತಿ ನಿರ್ಲಕ್ಷಿಸಿತ್ತು. ಇದನ್ನು ನಾನು ಸುಪ್ರೀಂ ಕೋರ್ಟಿಗೆ ಅಫಿಡವಿತ್ ಮೂಲಕ ತಿಳಿಸಲಿದ್ದೇನೆ ಎಂದು ಹೇಳಿದ್ದರು.

'ಇಲ್ಲಿ ಈಗ ಯಾವುದೇ ವಿವಾದ ಬಾಕಿ ಉಳಿದಿಲ್ಲ. ಹಾಗಾಗಿ ನಾನು ಅಫಿಡವಿತ್ ಸಲ್ಲಿಸಬೇಕಾದ ಅಗತ್ಯವಿಲ್ಲ' ಎಂದು ಸುಷ್ಮಾ ಮಂಗಳವಾರ ಟ್ವಿಟ್ಟರ್ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

'ಸುಷ್ಮಾ ಸ್ವರಾಜ್ ತನ್ನ ನಿಲುವನ್ನು ತಿಳಿಸಿದ್ದರು. ಅದೇ ರೀತಿ ಸಮಿತಿಯ ಇತರ ಸದಸ್ಯರು (ಪ್ರಧಾನಿ, ಗೃಹಸಚಿವ) ತಮ್ಮ ನಿಲುವುಗಳನ್ನು ಮಂಡಿಸಿದ್ದರು. ಥಾಮಸ್ ವಿರುದ್ಧ ದಾಖಲಾಗಿದ್ದ ಪ್ರಕರಣದ ಕುರಿತು ಸಮಿತಿಯಲ್ಲಿ ಚರ್ಚೆ ನಡೆದಿತ್ತು' ಎಂದು ಚಿದಂಬರಂ ನಿನ್ನೆಯಷ್ಟೇ ಹೇಳಿದ್ದರು.

ಹಾಗಿದ್ದರೂ, ಥಾಮಸ್ ಅವರನ್ನೇ ಸಿವಿಸಿಯನ್ನಾಗಿ ಯಾಕೆ ಆಯ್ಕೆ ಮಾಡಲಾಯಿತು ಎಂದು ಪ್ರಶ್ನಿಸಿದ್ದಕ್ಕೆ, ನೀವು ಪ್ರಶ್ನಿಸಿರುವ ನಿಲುವನ್ನು ನಾನು ಗೌರವಿಸುತ್ತೇನೆ. ಅದೇ ರೀತಿ ನಮ್ಮ ದೃಷ್ಟಿಕೋನವನ್ನೂ ನೀವು ಗೌರವಿಸಬೇಕು. ಈಗ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಸಚಿವರು ತಿಳಿಸಿದ್ದರು.
ಸಂಬಂಧಿತ ಲೇಖನಗಳು