ಅಮೆರಿಕಾದ ವಿಶ್ವವಿದ್ಯಾಲಯಗಳಿಂದ ವಂಚನೆಗೊಳಗಾಗಿರುವ ಭಾರತೀಯ ವಿದ್ಯಾರ್ಥಿಗಳ ಕಾಲುಗಳಿಗೆ ಬಲವಂತವಾಗಿ ರೇಡಿಯೋ ಕಾಲರ್ ಅಳವಡಿಸಿರುವುದನ್ನು ತಕ್ಷಣವೇ ತೆಗೆಯಬೇಕು ಎಂದು ಆಗ್ರಹಿಸಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಅಕ್ರಮ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಇಂತಹ ಕ್ರಮಗಳಿಗೆ ಅಮೆರಿಕಾ ಕಾನೂನು ಅವಕಾಶ ನೀಡುತ್ತದೆಯಾದರೆ ಭಾರತ ಸರಕಾರ ಏನೂ ಮಾಡುವಂತಿಲ್ಲ ಎಂದು ಕೈ ತೊಳೆದುಕೊಂಡರು.
ಅಕ್ರಮ ವಲಸಿಗರು ಎಂದು ಪರಿಗಣಿಸಲ್ಪಟ್ಟಿರುವ ವಿದ್ಯಾರ್ಥಿಗಳ ಜಾಡನ್ನು ವೀಕ್ಷಿಸಲು ರೇಡಿಯೋ ಕಾಲರ್ ಅಳವಡಿಸಲು ಅಮೆರಿಕಾದ ಕಾನೂನು ಅವಕಾಶ ನೀಡುತ್ತದೆಯಾದರೆ, ಆಗ ಭಾರತವು ಈ ವಿಚಾರದಲ್ಲಿ ಹೆಚ್ಚೇನೂ ಮಾಡುವಂತಿಲ್ಲ ಎಂದು ಕೊಚ್ಚಿಯಲ್ಲಿ ತಿಳಿಸಿದರು.
ಕ್ಯಾಲಿಫೋರ್ನಿಯಾದ 'ಟ್ರೈ ವ್ಯಾಲಿ' ವಿಶ್ವವಿದ್ಯಾಲಯವು ಮುಚ್ಚಿದ ನಂತರ ಅತಂತ್ರತೆಗೀಡಾಗಿರುವ ವಿದ್ಯಾರ್ಥಿಗಳನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಿರುವ ಅಮೆರಿಕಾ ಈ ಕುರಿತು ತನಿಖೆ ನಡೆಸುತ್ತಿದೆ. ಅದೇ ಕಾರಣದಿಂದ ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಕಾಲರುಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿ ಹೀಗೆ ಮಾಡಲಾಗಿದೆ ಎಂದು ಅಮೆರಿಕಾ ಇದನ್ನು ಸಮರ್ಥಿಸಿಕೊಂಡಿದೆ.
ಆದರೆ ಇದಕ್ಕೆ ಭಾರತ ಖಾರವಾಗಿ ಪ್ರತಿಕ್ರಿಯಿಸಿದೆ. ಇಂತಹ ಕ್ರಮಗಳಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಾಳಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಅಮೆರಿಕಾವು ಭಾರತೀಯ ವಿದ್ಯಾರ್ಥಿಗಳನ್ನು ನಡೆಸಿಕೊಂಡಿರುವ ರೀತಿ ಸರಿಯಿಲ್ಲ. ಅವರ ಕಾಲುಗಳಿಗೆ ರೇಡಿಯೋ ಕಾಲರುಗಳನ್ನು ಅಳವಡಿಸಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈ ಕುರಿತು ಈಗಾಗಲೇ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಲಾಗಿದೆ. ಯುನಿವರ್ಸಿಟಿಗಳಿಂದ ವಂಚನೆಗೊಳಗಾಗಿರುವ ವಿದ್ಯಾರ್ಥಿಗಳಿಗೆ ಭಾರತವು ಉಚಿತ ಕಾನೂನು ಸಹಕಾರ ನೀಡಲಿದೆ ಎಂದು ಸಚಿವ ಕೃಷ್ಣ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಭಾರತೀಯ ವಿದ್ಯಾರ್ಥಿಗಳು ಕಾನೂನು ಸಹಕಾರವನ್ನು ಪಡೆಯಲಿದ್ದಾರೆ. ಅವರು ಬೇರೆ ಯುನಿವರ್ಸಿಟಿಗಳಿಗೆ ವರ್ಗಾವಣೆಗೊಳ್ಳಲು ಬಯಸಿದರೆ, ಅದಕ್ಕೂ ವ್ಯವಸ್ಥೆ ಮಾಡಲಾಗುತ್ತದೆ. ಇದನ್ನೆಲ್ಲ ಬಿಟ್ಟು ಭಾರತಕ್ಕೆ ಮರಳುವುದಾದರೆ, ಖಂಡಿತಾ ಗೌರವಯುತವಾಗಿ ಬರಬೇಕೇ ಹೊರತು ಗಡೀಪಾರಿನ ಮೂಲಕವಲ್ಲ. ಭಾರತ ಮತ್ತು ಅಮೆರಿಕಾವು ಶೈಕ್ಷಣಿಕ ಕ್ಷೇತ್ರದಲ್ಲಿ ಸುದೀರ್ಘ ಸಂಬಂಧ ಹೊಂದಿದ್ದು, ಇಂತಹ ವಿಚಾರಗಳು ಅದರ ಮೇಲೆ ದುಷ್ಪರಿಣಾಮ ಬೀರಬಾರದು ಎಂದರು.