ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿವಿಸಿ ಥಾಮಸ್ ಪರ ಚಿದು ಬ್ಯಾಟಿಂಗ್; ಸುಷ್ಮಾ ವಿರುದ್ಧ ಕಿಡಿ (CVC | PJ Thomas | P Chidambaram | Sushma Swaraj)
ಕೇಂದ್ರ ಜಾಗೃತ ಆಯುಕ್ತ ಪಿ.ಜೆ. ಥಾಮಸ್ ಪರ ಬ್ಯಾಟಿಂಗ್ ಮಾಡಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ವಿವಾದಿತ ಸಿವಿಸಿ ಆಯ್ಕೆ ಕುರಿತು ಸರಕಾರವು ಸುಳ್ಳು ಹೇಳುತ್ತಿದೆ ಎಂಬ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿವಿಸಿ ಬಗ್ಗೆ ಸುಷ್ಮಾ ಸ್ವರಾಜ್ ನೀಡಿರುವ ಹೇಳಿಕೆಗೆ ನನ್ನ ಆಕ್ಷೇಪವಿದೆ. ಥಾಮಸ್ ವಿಚಾರದಲ್ಲಿ ಸರಕಾರವು ಆಯ್ಕೆ ಸಮಿತಿಯನ್ನು ಯಾವುದೇ ರೀತಿಯಲ್ಲೂ ತಪ್ಪು ಹಾದಿಗೆ ಎಳೆದಿಲ್ಲ ಎಂದು ಸಚಿವರು ಹೇಳಿದ್ದಾರೆ.

ತನ್ನ ತವರು ರಾಜ್ಯ ಕೇರಳದ ಹಗರಣವೊಂದರಲ್ಲಿ ಥಾಮಸ್ ಆರೋಪಿ ಎಂಬ ವಿಚಾರವನ್ನು ಸಿವಿಸಿ ಆಯ್ಕೆ ಸಮಿತಿಗೆ ನೀಡಲಾಗಿದ್ದ ಬಯೋ-ಡೇಟಾದಲ್ಲಿ ನಮೂದಿಸಿರಲಿಲ್ಲ ಎಂದು ಸುಷ್ಮಾ ಆರೋಪಿಸಿದ್ದರು.

ಇದನ್ನು ವಿರೋಧಿಸಿರುವ ಚಿದಂಬರಂ, ಥಾಮಸ್ ಅವರ ಮೇಲಿದ್ದ ಪಾಮೋಲಿವ್ ಹಗರಣ ಆರೋಪವು ಆಯ್ಕೆ ಸಮಿತಿಗೆ ತಿಳಿದಿತ್ತು ಮತ್ತು ಈ ಕುರಿತು ಸಭೆಯಲ್ಲಿ ಚರ್ಚೆ ನಡೆದಿತ್ತು. ಸುಷ್ಮಾ ಸ್ವರಾಜ್ ನೀಡುತ್ತಿರುವ ಹೇಳಿಕೆಗಳು ಆಕ್ಷೇಪಾರ್ಹ ಎಂದರು.

ಹಾಗಿದ್ದೂ ಥಾಮಸ್ ಅವರನ್ನೇ ನೇಮಕ ಮಾಡಲು ಸರಕಾರ ಯಾಕೆ ನಿರ್ಧರಿಸಿತು ಎನ್ನುವುದನ್ನು ವಿವರಿಸಿದ ಸಚಿವರು, ಅವರ ವಿರುದ್ಧದ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಥಾಮಸ್ ಅವರು ತಪ್ಪಿತಸ್ಥ ಅಥವಾ ನಿರ್ದೋಷಿ ಎನ್ನುವುದು ಸಾಬೀತಾಗಿಲ್ಲ. ಅಲ್ಲದೆ ಆ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನೂ ನೀಡಿತ್ತು ಮತ್ತು ಥಾಮಸ್ ನೇಮಕಕ್ಕೆ ಆಗಿನ ಸಿವಿಸಿ ಅನುಮತಿ ನೀಡಿದ್ದರು ಎಂದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಮುಗಿ ಬೀಳುತ್ತಿರುವ ಬಿಜೆಪಿ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಚಿದಂಬರಂ, ಎನ್‌ಡಿಎ ಅಧಿಕಾರದಲ್ಲಿದ್ದ 1999ರ ಅವಧಿಯಲ್ಲಿ ಥಾಮಸ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಅನುಮತಿ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಅಲ್ಲದೆ, ಸುಷ್ಮಾ ಸ್ವರಾಜ್ ಅವರು ನ್ಯಾಯಾಂಗದ ಆದೇಶಕ್ಕೆ ತಲೆ ಬಾಗಬೇಕು. ಪ್ರಕರಣವನ್ನು ನ್ಯಾಯಾಲಯವೇ ನಿರ್ಧರಿಸಲಿದೆ ಎಂದು ತಿಳಿಸಿದರು.

ಸಿವಿಸಿ ನೇಮಕಾತಿ ಸಂದರ್ಭದಲ್ಲಿ ಅದಕ್ಕಾಗಿ ನಿಯೋಜನೆಗೊಂಡಿದ್ದ ಸಮಿತಿಗೆ (ಪ್ರಧಾನಿ, ಗೃಹಸಚಿವ ಮತ್ತು ಪ್ರತಿಪಕ್ಷದ ನಾಯಕಿಯನ್ನೊಳಗೊಂಡ ಸಮಿತಿ) ಥಾಮಸ್ ಮೇಲಿನ ಆರೋಪಗಳ ಕುರಿತು ತಿಳಿದಿರಲಿಲ್ಲ ಎಂದು ಸರಕಾರವು ಸುಪ್ರೀಂ ಕೋರ್ಟಿಗೆ ತಿಳಿಸಿತ್ತು. ಇದನ್ನು ತೀವ್ರವಾಗಿ ಆಕ್ಷೇಪಿಸಿದ್ದ ಸುಷ್ಮಾ, ಸರಕಾರ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ದರು.

ಅಲ್ಲದೆ ಈ ಕುರಿತು ನ್ಯಾಯಾಲಯಕ್ಕೆ ಹೋಗುವುದಾಗಿ ಬೆದರಿಕೆಯನ್ನೂ ಹಾಕಿದ್ದರು. ಚಿದಂಬರಂ ಸ್ಪಷ್ಟನೆ ನೀಡಿದ ಬಳಿಕ ಮನಸ್ಸು ಬದಲಾಯಿಸಿದ್ದ ಬಿಜೆಪಿ ನಾಯಕಿ, ಈಗ ಯಾವುದೇ ವಿವಾದ ಉಳಿದಿಲ್ಲ. ಅಫಿಡವಿತ್ ಸಲ್ಲಿಸುವುದಿಲ್ಲ ಎಂದು ನಿನ್ನೆಯಷ್ಟೇ ಹೇಳಿದ್ದರು. ಆ ಬಳಿಕ ಇದೀಗ ಮತ್ತೊಂದು ಸುತ್ತಿನ ರಾಜಕೀಯ ಮೇಲಾಟ ಆರಂಭವಾಗಿದೆ.

ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಿದ್ದ ಸಿವಿಸಿ ಪಿ.ಜೆ. ಥಾಮಸ್, ತಾನು ಯಾವುದೇ ತಪ್ಪು ಮಾಡಿಲ್ಲ. ಮಾಧ್ಯಮಗಳು ನನ್ನನ್ನು ವಿನಾಕಾರಣ ಕಳಂಕಿತ ಎಂಬಂತೆ ಬಿಂಬಿಸುತ್ತಿವೆ ಎಂದು ಹೇಳಿದನ್ನು ಸ್ಮರಿಸಬಹುದಾಗಿದೆ.
ಸಂಬಂಧಿತ ಲೇಖನಗಳು