ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2ಜಿ, ಕಾಮನ್‌ವೆಲ್ತ್ ಗೇಮ್ಸ್, ಆದರ್ಶ ವಸತಿ ಮತ್ತು ಬೊಫೋರ್ಸ್ ಮುಂತಾದ ಪ್ರಮುಖ ಹಗರಣಗಳಲ್ಲಿ ಸಿಲುಕಿ ನಲುಗುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 200ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸುವುದು ಖಚಿತ ಎಂದು ಭವಿಷ್ಯ ನುಡಿದರು.
ಸ್ವಿಸ್ ಸೇರಿದಂತೆ ವಿದೇಶದ ಹಲವು ಬ್ಯಾಂಕುಗಳಲ್ಲಿ ಭಾರತೀಯರು 22 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಅಕ್ರಮವಾಗಿ ಶೇಖರಿಸಿಟ್ಟಿದ್ದಾರೆ. ಇದರ ಕುರಿತು ಬಿಜೆಪಿಯು ತೀವ್ರ ಹೋರಾಟವನ್ನು ನಡೆಸುತ್ತಿದೆ. ವಿದೇಶಗಳಲ್ಲಿರುವ ಆ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರಬೇಕು ಎಂಬ ವಿಚಾರವನ್ನು ನಾವು ಕೈ ಬಿಡುವುದಿಲ್ಲ ಎಂದರು.
ಸಂಸ್ಥೀಕರಣಗೊಂಡಿರುವ ಭ್ರಷ್ಟಾಚಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಯುಪಿಎ ಸರಕಾರವು ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಗಡ್ಕರಿ ಆಪಾದಿಸಿದ್ದಾರೆ.
ಸಾಗರೋತ್ತರ ಬಿಜೆಪಿ ಗೆಳೆಯರ ಬಳಗದ ಸದಸ್ಯರನ್ನು ಉದ್ದೇಶಿಸಿ ಟೆಲಿಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದ ಅವರು, ಹಗರಣಗಳು ಮತ್ತು ವಿದೇಶಿ ಬ್ಯಾಂಕ್ ಖಾತೆಗಳಲ್ಲಿರುವ ಅಕ್ರಮ ಕಪ್ಪುಹಣದ ವಿಚಾರಗಳು ಆಡಳಿತಾರೂಢ ಸಮ್ಮಿಶ್ರ ಸರಕಾರದ ಹಣೆ ಬರಹವನ್ನು ಬರೆಯಲಿವೆ ಮತ್ತು ಅದರಿಂದಾಗಿಯೇ ಮುಂದಿನ ಮಹಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದರು.
ಅಲ್ಲದೆ, ಬಿಜೆಪಿಯು ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಅದೊಂದೇ ಪಕ್ಷವು 200ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಗರೋತ್ತರ ಬಿಜೆಪಿ ಗೆಳೆಯರ ಬಳಗದ ಸದಸ್ಯರನ್ನು ಉದ್ದೇಶಿಸಿ ಗಡ್ಕರಿಯವರು ನಡೆಸಿದ ಈ ಆಡಿಯೋ ಸಂವಾದವನ್ನು ಅಮೆರಿಕಾ, ಕೆನಡಾ, ಕೆರೆಬಿಯನ್ ಐಸ್ಲೆಂಡ್, ಜರ್ಮನಿ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಮಧ್ಯಪ್ರಾಚ್ಯದ 500ಕ್ಕೂ ಹೆಚ್ಚು ಮಂದಿ ಆಲಿಸಿದರು.